ಕಚೇರಿ ಪ್ರವೇಶಿಸಲು ರಶ್ಯ ಬಿಡುತ್ತಿಲ್ಲ: ಅಮೆರಿಕ ರಾಯಭಾರ ಕಚೇರಿ
ಮಾಸ್ಕೊ, ಆ. 1: ಮಾಸ್ಕೊದ ಹೊರವಲಯದಲ್ಲಿರುವ ಕಟ್ಟಡವೊಂದಕ್ಕೆ ಪ್ರವೇಶಿಸಲು ತನ್ನ ರಾಜತಾಂತ್ರಿಕ ಸಿಬ್ಬಂದಿಗೆ ರಶ್ಯ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ ಎಂದು ಮಾಸ್ಕೊದಲ್ಲಿರುವ ಅಮೆರಿಕ ರಾಯಭಾರ ಕಚೇರಿ ಸೋಮವಾರ ಆರೋಪಿಸಿದೆ.
ರಾಜತಾಂತ್ರಿಕರಿಗೆ ಸೇರಿದ ವಸ್ತುಗಳನ್ನು ತರಲು ಮಂಗಳವಾರ ಮಧ್ಯಾಹ್ನದವರೆಗೆ ಕಟ್ಟಡದ ಒಳಗೆ ಪ್ರವೇಶಿಸಲು ಈ ಮೊದಲು ಅಧಿಕಾರಿಗಳು ಅನುಮತಿ ನೀಡಿದ್ದರು ಎಂದು ಕಚೇರಿ ಹೇಳಿದೆ.
ಮೊದಲು ಅನುಮತಿ ಪಡೆದುಕೊಳ್ಳದೆ ರಶ್ಯ ರಾಯಭಾರ ಕಚೇರಿ ತನ್ನ ಟ್ರಕ್‌ಗಳನ್ನು ಕಳುಹಿಸಿತ್ತು, ಆದರೆ, ಈ ಕಟ್ಟಡವು ಸಂರಕ್ಷಿತ ಪ್ರದೇಶದಲ್ಲಿರುವುದರಿಂದ ಅಲ್ಲಿಗೆ ಹೋಗಲು ಅನುಮತಿ ಪಡೆದುಕೊಳ್ಳುವುದು ಅಗತ್ಯವಾಗಿದೆ ಎಂದು ರಶ್ಯದ ವಿದೇಶ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿರುವುದಾಗಿ ಸರಕಾರಿ ಸುದ್ದಿ ಸಂಸ್ಥೆ ಆರ್‌ಐಎ ಹೇಳಿದೆ.
ರಶ್ಯ ವಿರುದ್ಧದ ಹೊಸ ದಿಗ್ಬಂಧನೆಗಳಿಗೆ ವಾಶಿಂಗ್ಟನ್ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ, ಅಮೆರಿಕ ರಾಯಭಾರ ಕಚೇರಿ ಬಳಸುತ್ತಿರುವ ಈ ಕಟ್ಟಡವನ್ನು ತಾನು ಹಿಂದಕ್ಕೆ ಪಡೆದುಕೊಂಡಿರುವುದಾಗಿ ಮಾಸ್ಕೊ ಹೇಳಿದೆ.