ಮಹಿಳೆಯರ ಜ್ವಲಂತ ಸಮಸ್ಯೆಗಳು ಈಗಲೂ ಜೀವಂತ: ಡಾ.ನಾಗರತ್ನ
ಉಡುಪಿ, ಆ.1: ಮಹಿಳೆಯರ ಕೆಲವೊಂದು ಜ್ವಲಂತ ಸಮಸ್ಯೆಗಳು ಈಗಲೂ ಜೀವಂತವಾಗಿವೆ. ಉಡುಪಿ ಜಿಲ್ಲೆಯಲ್ಲಿರುವ ವಲಸೆ ಕಾರ್ಮಿಕರಲ್ಲಿ ಈಗಲೂ ಬಾಲ್ಯ ವಿವಾಹಗಳು ನಡೆಯುತ್ತಿವೆ. ಸ್ವಾತಂತ್ರ ಪೂರ್ವದಲ್ಲಿದ್ದ ಸಾಮಾಜಿಕ ಪಿಡುಗುಗಳು ಇಂದಿಗೂ ಸಂಪೂರ್ಣ ನಿರ್ಮೂಲನೆಆಗಿಲ್ಲ ಎಂದು ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗರತ್ನ ಶಾಸ್ತ್ರಿ ಹೇಳಿದ್ದಾರೆ.
ಉಡುಪಿಯ ಪವರ್ ಸಂಸ್ಥೆಯ ಆಶ್ರಯದಲ್ಲಿ ಮಹಿಳಾ ಗ್ರಾಹಕರ ವಿವಿಧೋದ್ದೇಶ ಸಹಕಾರಿ ಸಂಘದ ಸಹಯೋಗದಲ್ಲಿ ಮಂಗಳವಾರ ಸಂಘದ ಹಾಲ್‌ನಲ್ಲಿ ಜರಗಿದ ‘ಓರಲ್ ಹೈಜೀನ್ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಉಡುಪಿ ಜಿಲ್ಲೆಯಲ್ಲಿ 0-6ವರ್ಷದೊಳಗಿನ ಮಕ್ಕಳ ಲಿಂಗ ಅನುಪಾತದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿದೆ. ಭ್ರೂಣ ಹತ್ಯೆಯು ವೈದ್ಯಕೀಯ ಸಮಸ್ಯೆ ಅಲ್ಲ. ಅದು ಸಾಮಾಜಿಕ ಪಿಡುಗು ಆಗಿದೆ. ಇದನ್ನು ಕೇವಲ ಕಾನೂನುಗಳಿಂದ ತಡೆಯಲು ಆಗುವುದಿಲ್ಲ. ಜನರ ಮನೋಭಾವನೆ ಬದಲಾಗಬೇಕು ಎಂದು ಅವರು ತಿಳಿಸಿದರು.
ಮಹಿಳಾ ಸಬಲೀಕರಣ ಅಂದರೆ ಮಹಿಳೆಯರು ದುಡಿಯುವುದು ಮಾತ್ರ ವಲ್ಲ. ಆಕೆಗೆ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಯಾವಾಗ ಸಿಗುತ್ತದೆಯೋ ಅದುವೇ ನಿಜವಾದ ಮಹಿಳಾ ಸಬಲೀಕರಣ ಎಂದು ಅವರು ಅಭಿಪ್ರಾಯ ಪಟ್ಟರು. ರಾಜ್ಯ ಸರಕಾರ ಬಿಪಿಎಲ್ ಕುಟುಂಬಗಳ 45ವರ್ಷಗಳಿಂತ ಮೇಲ್ಪಟ್ಟವರಿಗೆ ದಂತ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆ ಸರಕಾರಿ ಮಾತ್ರವಲ್ಲದೆ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲೂ ಲಭ್ಯ ಇದೆ. ಈ ಯೋಜನೆಯಲ್ಲಿ ಪೂರ್ತಿ ಹಲ್ಲಿನ ಸೆಟ್‌ಗಳನ್ನು ಅಳವಡಿಸುವುದು ಮಾತ್ರವಲ್ಲದೆ ಎರಡು ಮೂರು ಹಲ್ಲುಗಳನ್ನು ಜೋಡಿಸುವ ಕೆಲಸ ಮಾಡಲಾಗುತ್ತದೆ. ಸರಕಾರಿ ಆಸ್ಪತ್ರೆಗಳಲ್ಲಿ ಇಂದು ದಂತ ವೈದ್ಯರ ಕೊರತೆ ಸಾಕಷ್ಟು ಇದೆ ಎಂದರು.
ಇಂಡಿಯನ್ ಡೆಂಟಲ್ ಅಸೋಸಿಯೇಶನ್ ಉಡುಪಿ ಶಾಖೆಯ ಅಧ್ಯಕ್ಷ ಡಾ.ವಿಜಯೇಂದ್ರ ವಸಂತ ರಾವ್ ಮಾತನಾಡಿದರು. ಪವರ್ ಅಧ್ಯಕ್ಷೆ ಡಾ. ಗಾಯತ್ರಿ ಉಪಸ್ಥಿತರಿದ್ದರು. ಉಪಾಧ್ಯಕ್ಷೆ ತಾರಾ ತಿಮ್ಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಕಾರಿ ಸಂಘದ ಅಧ್ಯಕ್ಷೆ ಜಯಲಕ್ಷ್ಮಿ ಭಂಡಾರಿ ಸ್ವಾಗತಿಸಿದರು. ಯಶೋಧಾ ಕಾರ್ಯಕ್ರಮ ನಿರೂಪಿಸಿದರು.