×
Ad

ವಿದ್ಯಾರ್ಥಿ ಕೃಷಿ ಸಂಘಗಳಿಗೆ ಕಾರ್ಯಾಗಾರ

Update: 2017-08-01 22:43 IST

ಉಡುಪಿ, ಆ.1: ವಿಜಯಾ ಬ್ಯಾಂಕಿನ ಸ್ವಯಂಸೇವಾ ಸಂಸ್ಥೆಯಾಗಿರುವ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ,ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್‌ನ ಸಹಯೋಗದಲ್ಲಿ ವಿವಿಧ ಶಾಲೆಗಳ ಅಧ್ಯಾಪಕರಿಗಾಗಿ ವಿದ್ಯಾರ್ಥಿ ಕೃಷಿ ಸಂಘಗಳ ಕಾರ್ಯಾಗಾರವನ್ನು ಮಂಗಳೂರಿನ ತಮ್ಮ ಪ್ರಾಂತೀಯ ಕಚೇರಿಯಲ್ಲಿ ಆಯೋಜಿಸಿತ್ತು.

ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಬ್ಯಾಂಕಿನ ಉಪಮಹಾ ಪ್ರಬಂಧಕ ಸುಧಾಕರ ನಾಯಕ್, ರೈತರ ಏಳಿಗೆಗಾಗಿ ಬ್ಯಾಂಕ್ ಗ್ರಾಮೀಣ ಶಾಖೆಗಳ ಮೂಲಕ ವಿಶೇಷ ಗಮನ ಹರಿಸುತ್ತಿದೆ. ವಿಜಯ ವಿಚಾರ-ವಿಹಾರ ಹಳ್ಳಿಗಳ ರೈತರಿಗೆ ಕೃಷಿ ಹಾಗೂ ಹಣಕಾಸಿನ ವಿಚಾರ ತಿಳಿಸಿಕೊಡುತ್ತಿದ್ದು, ಕೃಷಿಕರನ್ನು ಕೃಷಿ ಜೊತೆಗೆ ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು.

ಕೃಷಿಯತ್ತ ಗ್ರಾಮೀಣ ಜನರ ಒಲವನ್ನು ಹರಿಸಿ, ಅರ್ಥಿಕವಾಗಿ ರೈತರನ್ನು ಸಬಲಗೊಳಿಸುವುದು ನಮ್ಮ ಉದ್ದೇಶವಾಗಿದೆ. ಕೃಷಿಯಿಂದಲೇ ದೇಶದ ಪ್ರಗತಿ ಸಾಧ್ಯವಾಗುವ ಕಾರಣ, ಮಕ್ಕಳಲ್ಲಿ ಕೃಷಿ ಬಗ್ಗೆ ಅರಿವು ಮೂಡಿಸಲು ವಿವಿಧ ಶಾಲೆಗಳಲ್ಲಿ ಕೃಷಿಕ ಸಂಘಗಳನ್ನು ಪ್ರಾರಂಭಿಸಲಾಗಿದೆ ಎಂದವರು ನುಡಿದರು.

ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಉದಯ ಹೆಗ್ಗಡೆ ಕೃಷಿಕ ಸಂಘಗಳು ಕೈಗೊಳ್ಳಬೇಕಾದ ವಿವಿಧ ಕಾರ್ಯಕ್ರಮಗಳ ಬಗ್ಗೆ ವಿವರಿಸಿ, ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ಕೈಗೊಂಡ ರೇಡಿಯೋ ಕಾರ್ಯಕ್ರಮದ ಬಗ್ಗೆ ತಿಳಿಸಿದರು.

ಕೃಷಿಕ ಸಂಘದ ಮೂಲಕ ಕೈಗೊಳ್ಳುವ ವನಮಹೋತ್ಸವಗಳು ವಿದ್ಯಾರ್ಥಿಗಳಲ್ಲಿ ಕೃಷಿಯತ್ತ ಹೆಚ್ಚಿನ ಒಲವು ಹಾಗೂ ಸ್ಪೂರ್ತಿ ಒದಗಿಸುತ್ತಿದೆ ಎಂದರು. ಕೃಷಿ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರೇಮನಾಥ ಆಳ್ವ, ಶಿಕ್ಷಣ ಇಲಾಖೆಯ ರಾಧಾಕೃಷ್ಣ ಭಟ್ಟ ಮಾತನಾಡಿದರು. ಬಿವಿಟಿಯ ಹಿರಿಯ ಕೃಷಿ ಸಲಹೆಗಾರ ಎಚ್. ಅನಂತ ಪ್ರಭು ವಿದ್ಯಾರ್ಥಿ ಕೃಷಿಕ ಸಂಘದ ಉದ್ದೇಶ, ಶಾಲೆಳ ಪಾತ್ರದ ಕುರಿತು ವಿವರಿಸಿದರು.

 ಕಾರ್ಯಕ್ರಮದಲ್ಲಿ ವಿಜಯಾ ಬ್ಯಾಂಕಿನ ವಿವಿಧ ಶಾಖೆಗಳ ವ್ಯವಸ್ಥಾಪಕರು ಆಗಮಿಸಿದ್ದು, ತಮ್ಮ ಶಾಖೆಯ ಹತ್ತಿರದ ಶಾಲೆಗಳಲ್ಲಿ ನಡೆಯುವ ಕೃಷಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ತಿಳಿಸಲಾಯಿತು. ವಿಜಯಾ ಬ್ಯಾಂಕಿನ ಸಹಾಯಕ ಮಹಾಪ್ರಬಂಧಕ ವಸಂತ ರಾಜನ್ ಸಾ್ವಗತಿಸಿ, ಉದಯ ಹೆಗಡೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News