ಡಿ.ಸಿ ಮನ್ನಾ ಜಮೀನು ಮಂಜೂರಿಗೆ ದಲಿತ ನಾಯಕರ ಆಗ್ರಹ : ಸಭೆಯಿಂದ ಅರ್ಧದಲ್ಲೇ ಹೊರನಡೆದ ಜಿಲ್ಲಾಧಿಕಾರಿ!
ಮಂಗಳೂರು, ಆ. 2: ಡಿ.ಸಿ ಮನ್ನಾ ಜಮೀನನ್ನು ತ್ವರಿತವಾಗಿ ಮಂಜೂರು ಮಾಡುವಂತೆ ದಲಿತ ಮುಖಂಡರು ಪಟ್ಟು ಹಿಡಿದ ಕಾರಣ ಕೋಪಗೊಂಡ ದ.ಕ. ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್‌ರವರು ತಮ್ಮದೇ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಸಭೆಯನ್ನು ಅರ್ಧಕ್ಕೆ ನಿಲ್ಲಿಸಿ ಹೊರನಡೆದ ಘಟನೆ ಇಂದು ನಡೆಯಿತು. ಈ ಬಗ್ಗೆ ದಲಿತ ಸಂಘಟನೆಗಳಿಂದ ವ್ಯಾಪಕ ವಿರೋಧವೂ ವ್ಯಕ್ತವಾಗಿದೆ.
ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪರಿಶಿಷ್ಟ ಜಾತಿ, ಪಂಗಡಗಳ ಕುಂದುಕೊರತೆ ಸಭೆಯಲ್ಲಿ ಈ ಪ್ರಸಂಗ ನಡೆಯಿತು.
ಬ್ರಿಟಿಷರ ಕಾಲದಿಂದ ಈವರೆಗೂ ಡಿಸಿ ಮನ್ನಾ ಜಮೀನನ್ನು ಹಂಚಿಕೆ ಮಾಡುವಲ್ಲಿ ನಿರ್ಲಕ್ಷ ಮಾಡಲಾಗುತ್ತಿದೆ ಎಂಬ ಆಕ್ಷೇಪ ಸಭೆ ಆರಂಭದಲ್ಲೇ ದಲಿತ ನಾಯಕರಿಂದ ವ್ಯಕ್ತವಾಯಿತು.
ಹತ್ತು ಎಕರೆಗಳಿಗಿಂತ ಕಡಿಮೆ ವಿಸ್ತೀರ್ಣದ ಡಿಸಿ ಮನ್ನಾ ಜಮೀನು ಇರುವ ಕಡೆ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿ ತ್ವರಿತವಾಗಿ ಮಂಜೂರು ಮಾಡಲಾಗುವುದು. ಹತ್ತು ಎಕರೆಗಿಂತ ಹೆಚ್ಚಿನ ವಿಸ್ತೀರ್ಣದ ಡಿಸಿ ಮನ್ನಾ ಜಮೀನು ಇರುವ ಸ್ಥಳಗಳಲ್ಲಿ ಜಮೀನು ಮಂಜೂರು ಮಾಡಲು ಹೊಸ ಮಾರ್ಗಸೂಚಿಯ ಪ್ರಕಾರ ರಾಜ್ಯ ಸರಕಾರದ ಅನುಮತಿ ಅಗತ್ಯವಿದೆ. ಅನುಮತಿ ದೊರತ ಬಳಿಕ ಹಂಚಿಕೆ ಪ್ರಕ್ರಿಯೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಇದನ್ನು ಆಕ್ಷೇಪಿಸಿದ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಎಲ್.ಚಂದು, ಕಡಬದಲ್ಲಿ ಮೈಸೂರಿನ ವ್ಯಕ್ತಿಯೊಬ್ಬರಿಗೆ 2000ನೇ ಇಸವಿಯಲ್ಲಿ ಮೂರು ಎಕರೆ ಡಿ.ಸಿ ಮನ್ನಾ ಜಮೀನು ಮಂಜೂರು ಮಾಡಲಾಗಿದೆ. ಅಧಿಕಾರಿಗಳು ಕಾನೂನನ್ನು ತಮ್ಮ ಮೂಗಿನ ನೇರಕ್ಕೆ ಅರ್ಥೈಸುತ್ತಾರೆ. ಡಿ.ಸಿ ಮನ್ನಾ ಜಮೀನು ಮಂಜೂರು ಮಾಡಲು ಯಾವ ಅಡ್ಡಿಗಳೂ ಇಲ್ಲ. ಸಬೂಬು ಹೇಳುವುದು ಬಿಟ್ಟು ಮಂಜೂರಾತಿ ಪ್ರಕ್ರಿಯೆ ಆರಂಭಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇವರ ಮಾತಿಗೆ ದಲಿತ ನಾಯಕರನೇಕರು ದನಿಗೂಡಿಸಿದರು. ಮಾತ್ರವಲ್ಲದೆ ಜಿಲ್ಲಾಧಿಕಾರಿ ನಿಲುವು ದಲಿತ ವಿರೋಧಿ ಎಂದು ಕೆಲವರು ತೀವ್ರ ಅಸಮಾಧಾನ ವ್ಯಕ್ತಪಡಿಸಲಾರಂಭಿಸಿದರು. ಮಾತು ನಿಲ್ಲಿಸುವಂತೆ ನಾಯಕರಿಗೆ ಜಿಲ್ಲಾಧಿಕಾರಿ ಸೂಚಿಸುತ್ತಾ, ನೀವೇ ಮಾತನಾಡುವುದಾದರೆ ನಾನು ಸಭೆಯನ್ನು ನಡೆಸುವುದಿಲ್ಲ ಎಂದರು. ಈ ಮಾತಿಗೆ ಪ್ರತಿಕ್ರಿಯಿಸಿದ ನಾಯಕರು ಜಿಲ್ಲಾಧಿಕಾರಿ ವಿರುದ್ಧ ಮತ್ತಷ್ಟು ಏರು ಧ್ವನಿಯಲ್ಲಿ ಮಾತನಾಡತೊಡಗಿದರು. ಜಿಲ್ಲಾಧಿಕಾರಿ ಅಸಮಾಧಾನಗೊಳ್ಳುತ್ತಾ ತಮ್ಮ ಆಸನದಿಂದ ಎದ್ದು ಹೊರಡುತ್ತಾ, ಸಭೆ ಮುಕ್ತಾಯಗೊಳಿಸಿರುವುದಾಗಿ ಹಿರಿಯ ಅಧಿಕಾರಿಗಳಿಗೆ ಹೇಳುತ್ತಾ ಸಭೆಯಿಂದ ಹೊರನಡೆದರು.
ಸಭೆ ಅರ್ಧಕ್ಕೆ ಮೊಟಕುಗೊಂಡಿದ್ದನ್ನು ಕಂಡು ಮತ್ತಷ್ಟು ಆಕ್ರೋಶಭರಿತರಾದ ಮುಖಂಡರು, ಜಿಲ್ಲಾಧಿಕಾರಿ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು. ಈ ನಡುವೆ ಒಂದು ಗುಂಪು ಜಿಲ್ಲಾಧಿಕಾರಿ ವಿರುದ್ಧ ಘೋಷಣೆಯನ್ನೂ ಕೂಗಿದರೆ, ಮತ್ತೆ ಕೆಲವರು ಜಿಲ್ಲಾಧಿಕಾರಿ ಪರ ಮಾತನಾಡಲು ಮುಂದಾದರು. ಈಸಂದರ್ಭ ಗುಂಪುಗಳ ನಡುವೆ ಮಾತಿನ ಚಕಮಕಿಯೂ ನಡೆಯಿತು.
ಈ ವೇಳೆ ಮಧ್ಯ ಪ್ರವೇಶಿಸಿದ ಡಿಸಿಪಿ ಹನುಮಂತರಾಯ ಪ್ರತಿಭಟನೆಗೆ ಮುಂದಾದ ಮುಖಂಡರನ್ನು ಸಭಾಂಗಣದಿಂದ ಹೊರ ಕಳುಹಿಸಿದರು. ಸಭಾಂಗಣದ ಹೊರಗಿನ ಆವರಣದಲ್ಲಿ ಧರಣಿ ಕುಳಿತು ನಾಯಕರು ಪ್ರತಿಭಟನೆ ನಡೆಸಿದರು. ಕೆಲ ನಿಮಿಷಗಳ ಬಳಿಕ ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿಯ ಪ್ರವೇಶ ದ್ವಾರದ ಬಳಿ ಸಾಂಕೇತಿಕ ಪ್ರತಿಭಟನೆಯನ್ನೂ ನಡೆಸಿದರು.
ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದ ಶೇಖರ್, ಜಿಲ್ಲಾಧಿಕಾರಿ ಸಂಪೂರ್ಣವಾಗಿ ದಲಿತ ವಿರೋಧಿಯಾಗಿ ವರ್ತಿಸಿದ್ದಾರೆ. ದಲಿತರ ಕುಂದುಕೊರತೆ ಆಲಿಸುವ ಸಭೆಯಲ್ಲಿ ನಮ್ಮ ಮಾತನ್ನು ಕೇಳಲು ಸಿದ್ಧವಿಲ್ಲ ಎಂದು ಸಭೆ ಮೊಟಕುಗೊಳಿಸುವ ಮೂಲಕ ಅಸ್ಪೃಶ್ಯತೆ ಆಚರಿಸಿದ್ದಾರೆ. ಅವರ ವಿರುದ್ಧ ಪೊಲೀಸರು ಮೊಕದ್ದಮೆ ದಾಖಲಿಸಬೇಕು. ತಕ್ಷಣವೇ ಜಿಲ್ಲಾಧಿಕಾರಿ ದಕ್ಷಿಣ ಕನ್ನಡ ಜಿಲ್ಲೆ ಬಿಟ್ಟು ತೊಲಗಬೇಕು. ಇಲ್ಲವಾದರೆ ದಲಿತ ಸಂಘಟನೆಗಳು ಆ ಕೆಲಸವನ್ನು ಮಾಡುತತಿವೆ ಎಂದರು.
ಜಿಲ್ಲಾಧಿಕಾರಿ ವರ್ಗಾವಣೆಗೆ ಪಟ್ಟು!
ಡಿಸಿ ಮನ್ನಾ ಭೂಮಿ ಮಂಜೂರಾತಿ ಬಗ್ಗೆ ಜಿಲ್ಲಾಧಿಕಾರಿ ದಲಿತ ವಿರೋಧಿಯಾಗಿ ವರ್ತಿಸಿದ್ದಾರೆ. ದಲಿತರ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ದಲಿತರ ಮಾತುಗಳನ್ನು ಕೇಳಲು ಸಿದ್ಧವಿಲ್ಲ ಎಂಬ ರೀತಿಯಲ್ಲಿ ಸಭೆ ಮೊಟಕುಗೊಳಿಸಿ ಅಸ್ಪಶ್ಯತೆ ಆಚರಿಸಿದ್ದಾರೆ. ಅವರ ವಿರುದ್ಧ ಪೊಲೀಸರು ಮೊಕದ್ದಮೆ ದಾಖಲಿಸಬೇಕು. ಮಾತ್ರವಲ್ಲದೆ, ಜಿಲ್ಲಾಧಿಕಾರಿಯನ್ನು ತಕ್ಷಣ ವರ್ಗಾವಣೆ ಮಾಡಬೇಕು ಎಂದು ದಲಿತ ನಾಯಕ ಶೇಖರ್ ಒತ್ತಾಯಿಸಿದರು.
ಜಿಲ್ಲೆಯಲ್ಲಿ ಕೆಲ ಸಮಯದ ಹಿಂದೆ ನಡೆದ ಕೋಮು ಸಂಘರ್ಷವನ್ನು ನಿಯಂತ್ರಿಸುವಲ್ಲಿಯೂ ಜಿಲ್ಲಾಧಿಕಾರಿ ವಿಫಲರಾಗಿದ್ದು, ಇದೀಗ ದಲಿತರ ಹೋರಾಟ ನಿಯಂತ್ರಣಕ್ಕೆ ಮುಂದಾಗಿದ್ದಾರೆ. ಇಂತಹ ಅಧಿಕಾರಿಯನ್ನು ತಾವು ಕಂಡಿಲ್ಲ ಎಂದು ದಲಿತ ನಾಯಕ ಭಾನುಚಂದ್ರ ಬೇಸರಿಸಿದರು.
ಸಭೆಯಲ್ಲಿ ಎಸ್‌ಪಿ ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್ಪಿ ಡಾ.ಸಿ.ಬಿ. ವೇದಮೂರ್ತಿ, ಪುತ್ತೂರು ಉಪ ವಿಭಾಗಾಧಿಕಾರಿ ಡಾ ರಘುನಂದನ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎನ್.ಆರ್. ಉಮೇಶ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಡಾ. ಸಂತೋಷ್ ಕಮಾರ್, ಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್ ಉಪಸ್ಥಿತರಿದ್ದರು.