ಡೋಕಾ ಲಾ ತನ್ನದೆಂದು ಹೇಳಲು ಚೀನಾದಿಂದ 2006ರ ರಾಜತಾಂತ್ರಿಕ ದಾಖಲೆ ಬಿಡುಗಡೆ
ಬೀಜಿಂಗ್, ಆ. 2: ಡೋಕಾ ಲದಲ್ಲಿ ಭಾರತೀಯ ಪಡೆಗಳು ಚೀನಿ ಪ್ರದೇಶದೊಳಗೆ ಅತಿಕ್ರಮಣ ನಡೆಸಿವೆ ಎಂಬ ತನ್ನ ಆರೋಪವನ್ನು ಸಾಬೀತುಪಡಿಸಲು ಚೀನಾ ಬುಧವಾರ 2006ರ ರಾಜತಾಂತ್ರಿಕ ದಾಖಲೆಯೊಂದನ್ನು ಉಲ್ಲೇಖಿಸಿದೆ.
2006 ಮೇ 10ರಂದು ಗಡಿ ವಿವಾದದ ಬಗ್ಗೆ ಚರ್ಚಿಸಲು ಭಾರತ ಮತ್ತು ಚೀನಾಗಳ ವಿಶೇಷ ಪ್ರತಿನಿಧಿಗಳ ನಡುವೆ ನಡೆದ ಸಭೆಯಲ್ಲಿ ಭಾರತ ತಂಡವು ದಾಖಲೆ (ನಾನ್ ಪೇಪರ್)ಯೊಂದನ್ನು ನೀಡಿತ್ತು. ಗ್ರೇಟ್ ಬ್ರಿಟನ್ ಮತ್ತು ಚೀನಾ 1890ರಲ್ಲಿ ಸಹಿ ಹಾಕಿದ ಒಪ್ಪಂದದಂತೆ ಸಿಕ್ಕಿಂ ವಲಯದಲ್ಲಿನ ಗಡಿ ಹೊಂದಾಣಿಕೆಗೆ ಉಭಯ ತಂಡಗಳು ಒಪ್ಪಿವೆ ಎಂಬುದಾಗಿ ಆ ದಾಖಲೆಯು ಹೇಳುತ್ತದೆ ಎಂದು ಚೀನಾ ಹೇಳಿಕೊಂಡಿದೆ.
‘‘ಸಿಕ್ಕಿಂ ವಲಯದಲ್ಲಿನ ಗಡಿ ಹೊಂದಾಣಿಕೆಗೆ ಉಭಯ ಬಣಗಳು ಒಪ್ಪಿವೆ’’ ಎಂದು ಭಾರತ ಸಲ್ಲಿಸಿದ ದಾಖಲೆಯನ್ನು ಉಲ್ಲೇಖಿಸಿ ಚೀನಾ ವಿದೇಶ ಸಚಿವಾಲಯ ಹೇಳಿದೆ.
ಅದೇ ವೇಳೆ, ಸಿಕ್ಕಿಂ ಮತ್ತು ಟಿಬೆಟ್‌ಗೆ ಸಂಬಂಧಿಸಿದಂತೆ ಗ್ರೇಟ್ ಬ್ರಿಟನ್ ಮತ್ತು ಚೀನಾಗಳ ನಡುವೆ ಏರ್ಪಟ್ಟಿರುವ 1890ರ ಒಪ್ಪಂದದ ಬದಲಿಗೆ ನೂತನ ಗಡಿ ಒಪ್ಪಂದವೊಂದಕ್ಕೆ ಹೊಸದಿಲ್ಲಿ ಮತ್ತು ಬೀಜಿಂಗ್ ಸಹಿ ಹಾಕಬೇಕು ಎಂಬ ಪ್ರಸ್ತಾಪವೊಂದನ್ನು ಚೀನಾ ಮೊದಲ ಬಾರಿ ಮುಂದಿಟ್ಟಿದೆ.
‘ನಾನ್ ಪೇಪರ್’ ಅನೌಪಚಾರಿಕ ದಾಖಲೆಯಾಗಿದ್ದು, ಅದರಲ್ಲಿ ಮಹತ್ವದ ವಿಷಯಗಳು ಸಾಮಾನ್ಯವಾಗಿ ಇರುವುದಿಲ್ಲ. ರಾಜತಾಂತ್ರಿಕ ಸಂಧಾನಗಳ ವೇಳೆ ಅವುಗಳನ್ನು ಬಳಸಿಕೊಳ್ಳಲಾಗುತ್ತದೆ. ಮಾತುಕತೆಗಳಲ್ಲಿ ತೊಡಗಿರುವ ಯಾವುದೇ ಬಣವು ಸಾಮಾನ್ಯವಾಗಿ ಅದರಲ್ಲಿರುವ ವಿಷಯಗಳನ್ನು ಅಧಿಕೃತವಾಗಿ ಬಹಿರಂಗಗೊಳಿಸುವುದಿಲ್ಲ.
ಆದಾಗ್ಯೂ, ಭಾರತ, ಚೀನಾ ಮತ್ತು ಎಲ್ಲ ಮೂರನೆ ದೇಶಗಳ ನಡುವಿನ ತ್ರಿ-ಸಂಧಿ ಒಪ್ಪಂದವನ್ನು ಸಂಬಂಧಿತ ದೇಶಗಳೊಂದಿಗೆ ಸಮಾಲೋಚನೆ ನಡೆಸಿ ಅಂತಿಮಗೊಳಿಸಲಾಗುವುದು ಎಂಬ ನಿರ್ಧಾರಕ್ಕೆ ಉಭಯ ದೇಶಗಳು 2012ರಲ್ಲಿ ಬಂದಿವೆ ಎಂಬುದಾಗಿ ಭಾರತದ ವಿದೇಶ ಸಚಿವಾಲಯ ಜೂನ್ 30ರಂದು ಹೊರಡಿಸಿದ ಹೇಳಿಕೆಯ ಬಗ್ಗೆ 15 ಪುಟಗಳ ಚೀನಾ ಹೇಳಿಕೆಯಲ್ಲಿ ಯಾವುದೇ ಉಲ್ಲೇಖವಿಲ್ಲ.