×
Ad

ದಲಿತರ ಕುಂದು ಕೊರತೆ ಸಭೆಯಲ್ಲಿ ಹೊರನಡೆದ ಜಿಲ್ಲಾಧಿಕಾರಿ ವರ್ಗಾವಣೆ ಪಡೆದುಕೊಳ್ಳಲಿ : ದಲಿತ ಮುಖಂಡರ ಆಗ್ರಹ

Update: 2017-08-02 19:18 IST

ಬಂಟ್ವಾಳ, ಆ. 2: ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಬುಡಕಟ್ಟು ಜನಾಂಗಗಳ ತ್ರೈಮಾಸಿಕ ಸಭೆಯಲ್ಲಿ ದಲಿತರ ಕುಂದು ಕೊರತೆಯನ್ನು ಆಲಿಸದೆ ಬಹಿಷ್ಕರಿಸಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಜಗದೀಶ್ ಅವರ ವರ್ತನೆಗೆ ಗರಂ ಆಗಿರುವ ದಲಿತ ಮುಖಂಡರು ಇಂತಹ ಜಿಲ್ಲಾಧಿಕಾರಿ ಸ್ವಯಂ ಪ್ರೇರಿತರಾಗಿ ಜಿಲ್ಲೆಯಿಂದ ವರ್ಗಾವಣೆ ಪಡೆದುಕೊಳ್ಳಬೇಕು, ಇಲ್ಲವೆ ಸರಕಾರ ಇಲ್ಲಿಂದ ಎತ್ತಂಗಡಿಗೊಳಿಸುವಂತೆ ಆಗ್ರಹಿಸಿದ್ದಾರೆ.

ದ.ಕ. ಜಿಲ್ಲಾ ಅಂಬೇಡ್ಕರ್ ಫಾರಂ ಫಾರ್ ಸೋಸಿಯಲ್ ಜಸ್ಟೀಸ್ ಅಧ್ಯಕ್ಷ ಬಾನುಚಂದ್ರ ಕೃಷ್ಣಾಪುರ ಹಾಗೂ ಬಂಟ್ವಾಳ ನವಚೇತನ ಸೇವಾ ಟ್ರಸ್ಟ್‍ನ ಅಧ್ಯಕ್ಷ ರಾಜಾ ಪಲ್ಲಮಜಲು ಅವರು ಬುಧವಾರ ಸಂಜೆ ಬಿ.ಸಿ.ರೋಡ್ ಪ್ರೆಸ್‍ಕ್ಲಬ್‍ನಲ್ಲಿ ಕರೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬುಧವಾರ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ನಡೆದ ಪ.ಜಾ., ಪಂಗಡದ ಹಾಗೂ ಬುಡಕಟ್ಟು ಜಾನಾಂಗಗಳ ಸಭೆಯಲ್ಲಿ ಜಿಲ್ಲಾಧಿಕಾರಿ ನಡೆದುಕೊಂಡ ವರ್ತನೆ ತಮಗೆ ನೋವು ತಂದಿದೆ ಎಂದರು.

ಜವಾಬ್ದಾರಿಯುತ ಸ್ಥಾನದಲ್ಲಿದ್ದು ನಮ್ಮ ಕುಂದುಕೊರತೆಗಳನ್ನು ಆಲಿಸಿ ಪರಿಹಾರ ನೀಡಬೇಕಾದ ಜಿಲ್ಲಾಧಿಕಾರಿಯವರೇ ಸಭೆಯಲ್ಲಿ ದಲಿತ ಮುಖಂಡರು ಮಾಡಿದ ಪ್ರಸ್ತಾಪವನ್ನು ಧಿಕ್ಕರಿಸಿ ಸಭೆಯನ್ನೇ ಬಹಿಷ್ಕರಿಸಿ ಹೊರ ನಡೆದಿರುವುದು ದಲಿತರಿಗೆ ಮಾಡಿದ ಅವಮಾನವಾಗಿದೆ. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿಯವರು ಕೂಡಾ ದಲಿತ ಮುಖಂಡರನ್ನು ದಬಾಯಿಸಿ ಬಾಯಿ ಮುಚ್ಚಿಸಿದ್ದಾರೆ. ಸಭೆಯಲ್ಲಿ ನಡೆದ ಎಲ್ಲ ಘಟನಾವಳಿಗೆ ಇವರಿಬ್ಬರು ನೇರ ಹೊಣೆ ಎಂದು ಆರೋಪಿಸಿದರು.

ಕಳೆದ ಹಲವು ಸಮಯದಿಂದ ಜಿಲ್ಲೆಯಲ್ಲಿ ಡಿಸಿ ಮನ್ನಾ ಜಾಗವನ್ನು ದಲಿತರಿಗೆ ಹಂಚಿಕೆ ಮಾಡುವಂತೆ ಪ್ರತೀ ತ್ರೈಮಾಸಿಕ ಸಭೆಗಳಲ್ಲಿ ಪ್ರಸ್ತಾಪಿಸುತ್ತಾ ಬರಲಾಗಿದೆ. ಆದರೆ ಈ ಬಗ್ಗೆ ಜಿಲ್ಲಾಡಳಿತ ಇದುವರೆಗೂ ಯಾವುದೇ ಕ್ರಮ ಕೈಗೊಲ್ಲದೆ ಇದನ್ನು ಸರಕಾರಕ್ಕೆ ಬರೆಯಲಾಗಿದೆ ಎಂದು ಹೇಳುತ್ತಲೇ ಬರಲಾಗುತ್ತಿದೆ. ಬುಧವಾರದ ತ್ರೈಮಾಸಿಕ ಸಭೆಯಲ್ಲೂ ಈ ಬಗ್ಗೆ ಮತ್ತೆ ಪ್ರಸ್ತಾಪಿಸಲಾಗಿತ್ತು. ಇದಕ್ಕೆ ಜಿಲ್ಲಾಧಿಕಾರಿ ಈ ಸಂಬಂಧವಾಗಿ ಸರಕಾರದಿಂದ ನಮಗೆ ಯಾವುದೇ ಸ್ಪಷ್ಟ ನಿರ್ದೇಶನ ಇಲ್ಲ ಎಂದು ಹೇಳಿ ಜಾರಿಕೊಳ್ಳಲು ಯತ್ನಿಸಿದಾಗ ಇದನ್ನು ಆಕ್ಷೇಪಿಸಲಾಯಿತು. ಈ ಸಂದರ್ಭದಲ್ಲಿ ಹಠಾತನೆ ಸಭೆಯನ್ನು ಬಹಿಷ್ಕರಿಸಿ ಜಿಲ್ಲಾಧಿಕಾರಿ ಹೊರ ನಡೆದಿದ್ದಾರೆ ಎಂದು ಆರೋಪಿಸಿದರು.

ಗೋಮಾಲ, ಪರಂಬೋಕು, ಕುಂಕಿ ಜಾಗವನ್ನು ಅಕ್ರಮ ಸಕ್ರಮದಡಿಯಲ್ಲಿ ಉಳ್ಳವರಿಗೆ ಮಿತಿಗಿಂತ ಜಾಸ್ತಿ ಹಂಚಿಕೆ ಮಾಡಲಾಗುತ್ತಿರುವ ಉದಾಹರಣೆ ತಾಲೂಕಿನಲ್ಲಿ ಸಾಕಷ್ಟು ಇದೆ. ಆದರೆ ದಲಿತರಿಗೆ ಮೀಸಲಿಟ್ಟ ಡಿಸಿ ಮನ್ನಾ ಜಮೀನು ದಲಿತರಿಗೆ ಹಂಚಿಕೆ ಮಾಡಲು ಜನಪ್ರತಿನಿಧಿಗಳಿಗೆ ಮತ್ತು ಜಿಲ್ಲಾಡಳಿತಕ್ಕೆ ಇದುವರೆಗೂ ಸಾಧ್ಯವಾಗಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ ಅವರು, ಸಭೆಯಲ್ಲಿ ಯಾವುದೇ ಸಮಸ್ಯೆಗಳನ್ನು ಪ್ರಸ್ತಾಪಿಸಿದಾಗ ಜಿಲ್ಲಾಧಿಕಾರಿ ನಮಗೆ ಮಾತನಾಡಲು ಅವಕಾಶ ಕಲ್ಪಿಸದೆ ಕೈ ಸನ್ನೆ ಮಾಡಿ ಕುಳಿತುಕೊಳ್ಳಲು ಸೂಚನೆ ನೀಡುತ್ತಾರೆ ಎಂದು ಆಪಾದಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಜಗದೀಶ್ ಅವರ ಈ ವರ್ತನೆಯ ಬಗ್ಗೆ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತರಲಾಗುವುದು. ಸಾಮಾಜಿಕ ನ್ಯಾಯವನ್ನು ಒದಗಿಸಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಸಾದ್ಯವಾಗದ ಜಿಲ್ಲಾಧಿಕಾರಿ ಈ ಜಿಲ್ಲೆಗೆ ಅರ್ಹರಲ್ಲ. ಅವರನ್ನು ಈ ಕೂಡಲೇ ಜಿಲ್ಲೆಯಿಂದ ವರ್ಗಾಹಿಸಬೇಕು. ಇಲ್ಲದಿದ್ದಲ್ಲಿ ದಲಿತ ಸಂಘಟನೆಗಳ ಒಕ್ಕೂಟದಿಂದ ಕಾನೂನು ಬದ್ಧವಾದ ಹೋರಾಟ ನಡೆಸಿಯಾದರೂ ಅವರನ್ನು ಇಲ್ಲಿಂದ ವರ್ಗಾವಣೆ ಆಗುವಂತೆ ಮಾಡಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಹಳೆ ಅಲೆಮಾರಿಗಳ ಹಿತರಕ್ಷಣಾ ಸಮಿತಿ ಸದಸ್ಯ ಜನಾರ್ದನ ಬೋಳಂತ್ತೂರು, ದ.ಕ. ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಜಯಾ ವಿ. ಸಂಪೋಲಿ, ಬಂಟ್ವಾಳ ತಾಲೂಕು ನಲಿಕೆಯವರ ಯುವ ವೇದಿಕೆ ಅಧ್ಯಕ್ಷ ರಾಘವೇಂದ್ರ ಸುರುಳಿ ಮೂಲೆ, ದಲಿತ ನಾಗರಿಕ ಹಿತ ರಕ್ಷಣಾ ಯುವ ವೇದಿಕೆಯ ಅಧ್ಯಕ್ಷ ಸತೀಶ್ ಅರಳ, ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾ ಸಮಿತಿ ಸದಸ್ಯ ಶೇಖರ ಕಡ್ತಲಬೆಟ್ಟು ಅವರು ಉಪಸ್ಥಿತರಿದ್ದರು.

ಶಿವಪ್ಪ ಕೊಲೆ ಪ್ರತಿಧ್ವನಿ

ಸದ್ಯ ಮುಚ್ಚಿ ಹೋಗಿರುವ 2001ರಲ್ಲಿ ಮಾರ್ಚ್ 11ರಂದು ಕಾವಳಕಟ್ಟೆಯಲ್ಲಿ ನಡೆದ ದಲಿತ ಮುಖಂಡ ಶಿವಪ್ಪ ಬಂಗೇರ ಕೊಲೆ ಪ್ರಕರಣ ಬುಧವಾರ ನಡೆದ ಸಭೆಯಲ್ಲೂ ಮತ್ತೆ ಪ್ರಸ್ತಾಪಿಸಲಾಗಿತ್ತಾದರೂ ಎಸ್ಪಿಯವರಿಗೆ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಬಾನುಚಂದ್ರ ಕೃಷ್ಣಾಪುರ ಆರೋಪಿಸಿದ್ದಾರೆ.

ಪ್ರಕರಣಗಳು ಯಾವ ಹಂತದಲ್ಲಿ ಇದೆ ಎಂಬ ಬಗ್ಗೆ ಎಸ್ಪಿಯವರಿಗೆ ಮಾಹಿತಿ ಇರಬೆಕಾಗಿದ್ದು ಆದರೆ ಈಗಾಗಲೇ 'ಸಿ' ವರದಿ ಸಲ್ಲಿಸಲಾಗಿರುವ ಶಿವಪ್ಪ ಬಂಗೇರ ಕೊಲೆ ಪ್ರಕರಣದಲ್ಲಿ ಈವರೆಗೂ ಆರೋಪಿಗಳ ಪತ್ತೆಯಾಗಿಲ್ಲ. ಈ ಪ್ರಕರಣದ ಬಗ್ಗೆ ಪುನರ್ ಪರಿಶೀಲನೆ ನಡೆಸುವುದಾಗಿ ಎಸ್ಪಿಯವರು ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News