×
Ad

ಮನೆ ಅಂಗಳದಿಂದಲೇ ಸ್ವಚ್ಛತೆ ಪ್ರಾರಂಭಗೊಳ್ಳಲಿ: ದಿನಕರ ಬಾಬು

Update: 2017-08-02 20:46 IST

ಮಣಿಪಾಲ, ಆ.2: ಉಡುಪಿ ಜಿಲ್ಲೆಯನ್ನು ಸ್ವಚ್ಛ ಜಿಲ್ಲೆಯನ್ನಾಗಿ ಮಾಡಲು ಎಲ್ಲರ ಮನೆ ಅಂಗಳದಿಂದಲೇ ಸ್ವಚ್ಛತೆಯ ಕಾರ್ಯ ಆರಂಭವಾಗಬೇಕು ಎಂದು ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ.

ಬುಧವಾರ ಮಣಿಪಾಲ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ‘ಸ್ವಚ್ಛ ಉಡುಪಿ-ಸ್ವಸ್ಥ ಉಡುಪಿ’ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.

ಘನ ಮತ್ತು ದ್ರವತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಿ, ಜಿಲ್ಲೆ ಯನ್ನು ಸ್ವಚ್ಛ ಜಿಲ್ಲೆಯನ್ನಾಗಿ ಮಾಡಲು ಜಿಲ್ಲೆಯ ಗ್ರಾಪಂಗಳಿಗೆ, ನಗರ ಸ್ಥಳೀಯ ಸಂಸ್ಥೆಗಳಿಗೆ ಹಾಗೂ ಸ್ವಸಹಾಯ ಸಂಘದ ಸದಸ್ಯರಿಗೆ ತರಬೇತಿಯನ್ನು ನೀಡಲಾಗಿದೆ. ಆದರೆ ಸ್ವಚ್ಛತಾ ಕಾರ್ಯ ಪ್ರತಿಯೊಬ್ಬರ ಮನೆಯಂಗಳದಿಂದಲೇ ಪ್ರಾರಂಭವಾಗಬೇಕು ಎಂದ ದಿನಕರ ಬಾಬು, ಸ್ವಚ್ಛ ಉಡುಪಿ ನಿರ್ಮಾಣ ಕಾರ್ಯದಲ್ಲಿ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಕೈಜೋಡಿಸಲಿದ್ದೇವೆ ಎಂದು ಹೇಳಿದರು.

 ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ವೆಲ್ಲೂರು ಶ್ರೀನಿವಾಸನ್ ಅವರಿಂದ ಸ್ವಚ್ಛತೆಯ ನಿರ್ವಹಣೆ ಕುರಿತು 6 ದಿನಗಳ ತರಬೇತಿ ಪಡೆದಿರುವ ಎಲ್ಲಾ ಸ್ವಸಹಾಯ ಸಂಘದ ಸದಸ್ಯರು, ಸ್ವಚ್ಛ ಉಡುಪಿ ಮಿಷನ್‌ನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸೈನಿಕರಂತೆ ಕರ್ತವ್ಯ ನಿರ್ವಹಿಸಬೇಕು ಎಂದರು.

ಆ.5ರಿಂದ 2 ದಿನ ನಡೆಯುವ ಪ್ರಾಯೋಗಿಕ ತರಬೇತಿಯ ನಂತರ ತಮ್ಮ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಬೇಕು. ಆ.15ರಂದು ಜಿಲ್ಲೆಯಲ್ಲಿ ಸ್ವಚ್ಛ ಉಡುಪಿ ಮಿಷನ್‌ಗೆ ಚಾಲನೆ ನೀಡಲಿದ್ದು, 2018ರ ಆ.15ರೊಳಗೆ ಜಿಲ್ಲೆಯ ಎಲ್ಲಾ ಗ್ರಾಮಗಳು ಗುರಿ ಸಾಧಿಸಲು ಪ್ರಯತ್ನಿಸಲಾಗುವುದು ಎಂದವರು ತಿಳಿಸಿದರು.

ಇದೇ ಸಂದರ್ಭದಲ್ಲಿ ನೆಹರು ಯುವ ಕೇಂದ್ರದ ವತಿಯಿಂದ ಸ್ವಚ್ಛತಾ ಶಪಥ ಬೋಧಿಸಲಾಯಿತು. ಜಿಪಂ ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಸಂಪನ್ಮೂಲ ವ್ಯಕ್ತಿ ವೆಲ್ಲೂರು ಶ್ರೀನಿವಾಸನ್ ಉಪಸ್ಥಿತರಿದ್ದರು.

ಜಿಪಂ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಸ್ವಾಗತಿಸಿದರೆ, ಜಿಲ್ಲಾ ಪರಿಸರ ಅಧಿಕಾರಿ ಲಕ್ಷ್ಮಿಕಾಂತ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News