ಮೊರಾರ್ಜಿ ದೇಸಾಯಿ ವಸತಿ ಶಾಲೆ ಮುಂಡಾಜೆ ಬೆಳ್ತಂಗಡಿ ಬೆಳ್ಳಿ ಹಬ್ಬ ಸರಣಿ ಉಪನ್ಯಾಸ ಮಾಲೆ

Update: 2017-08-02 16:00 GMT

ಬೆಳ್ತಂಗಡಿ,ಆ.02: "ನನ್ನ ತಂದೆ ಕಥೆ ಹೇಳುತ್ತಿದ್ದರು. ಕಥೆ ಹೇಳಲು ಬೇಕಾದಷ್ಟು ವಿಷಯಗಳು ಬದುಕಿನಲ್ಲೆ ಇದ್ದವು. ಬದುಕಿನ ಅನೇಕ ಅನುಭವಗಳೇ ನನ್ನಿಂದ ಕಥೆಗಳನ್ನು ಬರೆಯಿಸಿದವು. ಆದರೆ ಮಕ್ಕಳ ಕಥೆಗಳಿಗೆ ಚೌಕಟ್ಟುಗಳಿಲ್ಲ. ಘಟನೆಗಳನ್ನು ಕಥೆಯ ರೂಪದಲ್ಲಿ ಹೇಳಬೇಕು. ಮೊದಲು ಹಿರಿಯರು ಹೇಳುವ ಜನಪದ ಕಥೆಗಳನ್ನು ಬರೆಯಿರಿ. ನಂತರ ಘಟನೆಗಳನ್ನು ಕಥೆಗಳಾಗಿ ಹೇಳಿ. ಘಟನೆಯನ್ನು ಕಥೆಯಾಗಿ ಮಾಡುವುದರಲ್ಲಿ ಕಲ್ಪನೆಗಳಿಗೆ ಮಹತ್ವ ಇದೆ. ಫ್ಯಾಂಟಸಿ ಮಕ್ಕಳ ಕಥೆಗಳಿಗೆ ಅಗತ್ಯವಾಗುತ್ತದೆ. ಫ್ಯಾಂಟಸಿಯೊಂದಿಗೆ ಘಟನೆಗಳಿಗೆ ಆಕರ್ಷಕವಾದ ಸಂಭಾಷಣೆಯನ್ನು ರೂಪಿಸುತ್ತಾ ಹೋಗಬೇಕು. ಹೇಳುವ ಕಥೆಗಳು ಕೇಳುಗರಿಗೆ ಖುಷಿ ಕೊಡಬೇಕು" ಎಂದು ಹಿರಿಯ ಕಥೆಗಾರ, ಮಕ್ಕಳ ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿ ಹೇಳಿದರು.

ಅವರು ಬುಧವಾರ ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಬೆಳ್ಳಿ ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕಥೆ ಹೇಳುವ ಕೌಶಲದ ಬಗ್ಗೆ ಮಾತನಾಡುತ್ತಿದ್ದರು.

ನಂತರ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ನಡೆಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಂಡಾಜೆ ಗ್ರಾಮ ಪಂಚಾಯಿತಿ ಸದಸ್ಯೆ ಚಂದ್ರಾವತಿ ಮಾತನಾಡಿ, ಈಗ ಕಥೆ ಹೇಳುವವರಿದ್ದರೂ ಕಥೆ ಕೇಳುವವರು ಇಲ್ಲದ ಪರಿಸ್ಥಿತಿ ಇದೆ. ತಲೆ ತಗ್ಗಿಸಿ ಪುಸ್ತಕವನ್ನು ಓದಿದರೆ ಅದು ನಮ್ಮನ್ನು ತಲೆ ಎತ್ತಿ ನಡೆಯುವಂತೆ ಮಾಡುತ್ತದೆ. ತಲೆ ತಗ್ಗಿಸಿ ಮೊಬೈಲ್ ಉಜ್ಜಿದರೆ ತಲೆ ತಗ್ಗಿಸುವಂತಾಗುತ್ತದೆ. ವಿದ್ಯಾರ್ಥಿಗಳು ಛಲ ಇಟ್ಟುಕೊಂಡು ಓದಿ ಮುಂದುವರೆದು ತಲೆ ಎತ್ತಿ ಬಾಳಬೇಕು ಎಂದರು.

ಶಿಕ್ಷಕಿ ಗೀತಾ ಸ್ವಾಗತಿಸಿ, ಗೀತಾ ಶೆಟ್ಟಿ ವಂದಿಸಿದರು. ವಾಣಿ ಅವರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News