ನೆ.ಮುಡ್ನೂರು ಪ್ರೌಢಶಾಲಾ ಸಭಾಭವನಕ್ಕೆ 5 ಲಕ್ಷ ಅನುದಾನಕ್ಕೆ ಪ್ರಯತ್ನ : ಶಕುಂತಳಾ ಶೆಟ್ಟಿ
ಪುತ್ತೂರು,ಆ.02: ನೆಟ್ಟಣಿಗೆ ಮುಡ್ನೂರು ಭಾಗಕ್ಕೆ ಈಗಾಗಲೇ ಹಲವು ಅನುದಾನಗಳನ್ನು ಒದಗಿಸಿಕೊಡಲಾಗಿದ್ದು, ಇಲ್ಲಿಗೆ ಅಗತ್ಯವಾಗಿ ಬೇಕಾಗಿರುವ ಶಾಲಾ ಸಭಾಭವನಕ್ಕೆ 5 ಲಕ್ಷ ಹಣ ಮಂಜೂರು ಮಾಡಲು ಪ್ರಯತ್ನಿಸುವುದಾಗಿ ಶಾಸಕಿ ಶಕುಂತಳಾ ಶೆಟ್ಟಿ ಭರವಸೆ ನೀಡಿದರು.
ಅವರು ನೆಟ್ಟಣಿಗೆ ಮುಡ್ನೂರು ಸರಕಾರಿ ಪ್ರೌಢ ಶಾಲೆಯ ದಶಮಾನೋತ್ಸವ ಆಚರಿಸುವ ಕುರಿತು ಮಂಗಳವಾರ ನಡೆದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಮಕ್ಕಳ ಸಂಖ್ಯೆ ಕಡಿಮೆ ಇದ್ದ ಕಡೆ ಯಾವ ಕಟ್ಟಡ ಮಾಡಿಯೂ ಪ್ರಯೋಜನವಿಲ್ಲ, ಇಲ್ಲಿನ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗದಂತೆ ನೋಡಿಕೊಳ್ಳಬೇಕು ಈ ಶಾಲೆ ಮಕ್ಕಳನ್ನು ಆಕರ್ಷಿಸುವ ಕೇಂದ್ರವಾಗಬೇಕು. ಕೇವಲ ಮಾರ್ಕ್ ತೆಗೆಯುವುದನ್ನೇ ಮಕ್ಕಳ ಭವಿಷ್ಯ ಎಂದು ಕಲ್ಪಿಸಬಾರದು, ಡಿಗ್ರಿ ಕಲಿತರೆ ಮಾತ್ರ ಜೀವನದಲ್ಲಿ ದಾರಿಯಿದೆ ಎಂಬ ಕಲ್ಪನೆಯೂ ಇರಬಾರದು ಎಂದ ಅವರು ಮೊದಲು ಬದುಕಲು ಛಲ ಮತ್ತು ಆತ್ಮಸ್ಥೈರ್ಯ ನೀಡುವ ಶಿಕ್ಷಣ ಎಲ್ಲಾ ಮಕ್ಕಳಿಗೂ ಸಿಗಬೇಕು ಎಂದು ಹೇಳಿದರು.
ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶಂಕರಿ ಆರ್ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪುಡಾ ಅಧ್ಯಕ್ಷ ಕೌಶಲ್ ಪ್ರಸಾದ್ ಶೆಟ್ಟಿ, ನೆ.ಮುಡ್ನೂರು ಗ್ರಾ.ಪಂ ಉಪಾಧ್ಯಕ್ಷ ಶ್ರೀರಾಂ ಪಕ್ಕಳ, ದೈಹಿಕ ಶಿಕ್ಷಣ ಶಿಕ್ಷಕ ದೇವಿಪ್ರಸಾದ್ ಶೆಟ್ಟಿ, ಬುಶ್ರಾ ವಿದ್ಯಾಸಂಸ್ಥೆಯ ಸಂಚಾಲಕ ಅಬ್ದುಲ್ ಅಝೀಝ್ ಬುಶ್ರಾ ಕಾವು, ನೆ.ಮುಡ್ನೂರು ಗ್ರಾ.ಪಂ ಮಾಜಿ ಅಧ್ಯಕ್ಷ ಮುಹಮ್ಮದ್ ಹಾಜಿ ಮೇನಾಲ, ಮಾಹಿಳ್ನಾಥ್ ಶೆಟ್ಟಿ ಸಾಂತ್ಯ, ನೆ.ಮುಡ್ನೂರು ಗ್ರಾ.ಪಂ ಸದಸ್ಯ ಕೆ.ಎಂ ಮುಹಮ್ಮದ್, ಮಹೇಶ್ ರೈ ಅಂಕೊತ್ತಿಮಾರ್, ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ಎಸ್‍ಡಿಎಂಸಿ ಸದಸ್ಯರು, ಸ್ಥಳೀಯ ಗ್ರಾ.ಪಂ ಸದಸ್ಯರು ಉಪಸ್ಥಿತರಿದ್ದರು.
ಶಿಕ್ಷಕಿ ಸುನಿತಾ ಸ್ವಾಗತಿಸಿದರು ಶಿಕ್ಷಕಿ ಇಂದಿರಾ ವಂದಿಸಿದರು.