×
Ad

ಮಣಿಪಾಲದಲ್ಲಿ ‘ಮಣಿಪಾಲ ಸಾಹಿತ್ಯ ಉತ್ಸವ’ಕ್ಕೆ ಭರದ ಸಿದ್ಧತೆ

Update: 2017-08-02 22:26 IST

ಉಡುಪಿ, ಆ.2: ಮಣಿಪಾಲ ವಿವಿ ಹಾಗೂ ಮಣಿಪಾಲ ಅಂತಾರಾಷ್ಟ್ರೀಯ ಸಾಹಿತ್ಯ ಮತ್ತು ಕಲಾ ವೇದಿಕೆ (ಮಿಲಾಪ್) ಇದೇ ಮೊದಲ ಬಾರಿಗೆ ಮಣಿಪಾಲದಲ್ಲಿ ವಾರ್ಷಿಕ ಸಾಹಿತ್ಯ ಉತ್ಸವವೊಂದನ್ನು ನಡೆಸಲು ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ ಎಂದು ಉತ್ಸವದ ಸಂಯೋಜಕರಲ್ಲಿ ಒಬ್ಬರಾದ ಡಾ.ನೀತಾ ಇನಾಂದಾರ್ ತಿಳಿಸಿದ್ದಾರೆ.

ಮಣಿಪಾಲದ ಎಂಸಿಪಿಎಚ್‌ನಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಮುಂದಿನ ಸೆ.15ರಿಂದ 17ರವರೆಗೆ ಮೂರು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಸಾಹಿತ್ಯ, ಪ್ರದರ್ಶನ ಕಲೆ, ಚಿತ್ರಕಲೆ, ಸಿನಿಮಾದ ವಿವಿಧ ಪ್ರಕಾರಗಳು ಲೇಖಕ, ಪ್ರೇಕ್ಷಕ ಹಾಗೂ ವಿಮರ್ಶಕರ ಪಾಲ್ಗೊಳ್ಳುವಿಕೆಯೊಂದಿಗೆ ಸಂಯೋಜನೆಗೊಳ್ಳಲಿದೆ ಎಂದವರು ವಿವರಿಸಿದರು.

ದೇಶ-ವಿದೇಶಗಳಲ್ಲಿ ಈಗಾಗಲೇ ಪ್ರಸಿದ್ಧಿಗೊಂಡಿರುವ -ಜೈಪುರ್, ದಿಲ್ಲಿ, ಧಾರವಾಡ- ಸಾಹಿತ್ಯೋತ್ಸವಗಳಂತೆ ಇದು ವಾಣಿಜ್ಯಾಸಕ್ತಿಯ ಸೊಂಕಿಲ್ಲದೇ, ಶುದ್ಧ ಸಾಹಿತ್ಯ ಹಾಗೂ ಕಲಾಸಕ್ತಿಯೊಂದಿಗೆ ನಡೆಯಲಿದೆ. ಕಲೆ ಹಾಗೂ ಸಾಹಿತ್ಯವನ್ನು ಅದರ ಎಲ್ಲಾ ಶುದ್ಧತೆಯೊಂದಿಗೆ ಪ್ರೋತ್ಸಾಹಿಸುವ ಮಣಿಪಾಲ ವಿವಿಯ ಪ್ರಯತ್ನವಾಗಿ ಇದು ನಡೆಯಲಿದೆ ಎಂದರು.

 ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಕನ್ನಡ ಮತ್ತು ಆಂಗ್ಲ ಸಾಹಿತಿಗಳು, ವಿಮರ್ಶಕರು, ಕಲಾವಿದರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಮಣಿಪಾಲ ಲಿಟರರಿ ಫೆಸ್ಟ್‌ನ್ನು ಸೆ.15ರಂದು ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ, ನಾಟಕಕಾರ ಡಾ.ಚಂದ್ರಶೇಖರ ಕಂಬಾರ ಉದ್ಘಾಟಿಸಲಿದ್ದಾರೆ. ಖ್ಯಾತ ಲೇಖಕಿ ವೈದೇಹಿ ಮುಖ್ಯ ಅತಿಥಿಯಾಗಿರುವರು. ಮಣಿಪಾಲ ವಿವಿ ಕುಲಪತಿ ಡಾ.ಎಚ್.ವಿನೋದ್ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ.

ಆ ಬಳಿಕ ಮೂರು ದಿನಗಳ ಕಾಲ ಖ್ಯಾತನಾಮ ಸಾಹಿತಿಗಳು, ವಿಮರ್ಶಕರಾದ ಕೆ.ಸಚ್ಚಿದಾನಂದನ್, ಕಿರಣ್ ನಗರ್‌ಕರ್, ಮಲ್ಲೇಪುರಂ ಜಿ.ವೆಂಕಟೇಶ್, ಓ.ಎಲ್.ನಾಗಭೂಷಣ್, ಇರಾ ಪಾಂಡೆ, ವಿವೇಕ್ ಶ್ಯಾನುಭಾಗ್, ಶಾಂತಾ ಗೋಖಲೆ, ಅಂಜುಂ ಕತ್ಯಾಲ್, ಪ್ರೊ.ವಿವೇಕ್ ರೈ, ಜಯಂತ್ ಕಾಯ್ಕಿಣಿ ಹಾಗೂ ಇತರರು ಸಂವಾದ, ಉಪನ್ಯಾಸ, ಚರ್ಚೆ, ಕತೆ- ಕವನಗಳ ಓದುಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಐದು ಅನುವಾದಿತ ಕೃತಿ ಬಿಡುಗಡೆ: ಸಾಹಿತ್ಯೋತ್ಸವದ ಉದ್ಘಾಟನೆಯ ದಿನದಂದು ಮಣಿಪಾಲ ವಿವಿ ಪ್ರೆಸ್ ಮೂಲಕ ಒಟ್ಟು ಐದು ಅನುವಾದಿತ ಸಾಹಿತ್ಯ ಕೃತಿಗಳು ಬಿಡುಗಡೆಗೊಳ್ಳಲಿವೆ ಎಂದು ಡಾ.ನೀತಾ ಇನಾಂದಾರ್ ತಿಳಿಸಿದರು. ಶಿವರಾಮ ಕಾರಂತರ ಸುಪ್ರಸಿದ್ಧ ಕಾದಂಬರಿ ‘ಚೋಮನ ದುಡಿ’ಯ ಸಂಸ್ಕೃತ ಭಾಷಾಂತರ ಕೃತಿ ಅಂದು ಬಿಡುಗಡೆಗೊಳ್ಳಲಿದ್ದು, ಇದನ್ನು ಕೆ.ಅನಂತ ಪದ್ಮನಾಭಾಚಾರ್ ಅನುವಾದಿಸಿದ್ದಾರೆ.

ಅದೇ ರೀತಿ ತುಳು ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಅವರು ತುಳುವಿಗೆ ಅನುವಾದಿಸಿದ ಡಾ.ಚಂದ್ರಶೇಖರ ಕಂಬಾರರ ಕನ್ನಡದ ‘ಮಹಾಮಾಯಿ’ ಕಾದಂಬರಿ, ಅನಿತಾಗುರು ಆಂಗ್ಲ ಭಾಷೆಗೆ ಭಾಷಾಂತರಿಸಿದ ಎ.ಮುಕುಂದ ಅವರ ಚಿತ್ರ-ಕೃತಿ ‘ಮುಖಮುದ್ರೆ-ಕ್ಯಾಮರಾದಲ್ಲಿ ಕನ್ನಡ ಸಾಹಿತಿಗಳು’, ಡಿ.ಎ.ಶಂಕರ್ ಆಂಗ್ಲ ಭಾಷೆಗೆ ಭಾಷಾಂತರಿಸಿದ ಶಿವರಾಮ ಕಾರಂತರ ಕನ್ನಡ ಕಾದಂಬರಿ ‘ಸರಸಮ್ಮನ ಸಮಾಧಿ’ ಹಾಗೂ ಎಂ.ಆರ್.ರಕ್ಷಿತ್, ಸುಮತಿ ಶೆಣೈ ಮತ್ತು ಸವಿತಾ ಶಾಸ್ತ್ರೀ ಆಂಗ್ಲ ಭಾಷೆಗೆ ಭಾಷಾಂತರಿಸಿದ ಗೋಪಾಲಕೃಷ್ಣ ಪೈ ಅವರ ಬೃಹತ್ ಕೊಂಕಣಿ ಕಾದಂಬರಿ ‘ಸ್ವಪ್ನ ಸಾರಸ್ವತ’ ಬಿಡುಗಡೆಗೊಳ್ಳಲಿವೆ ಎಂದವರು ವಿವರಿಸಿದರು.

ಭಾಷಾಂತರ ಕಾರ್ಯಾಗಾರ:‘ಮಿಲಾಪ್’ನಲ್ಲಿ ಜೊತೆ ಜೊತೆಗೆ ಭಾಷಾಂತರ ಕಾರ್ಯಾಗಾರವೊಂದು ಮೂರು ದಿನಗಳ ಕಾಲವೂ ನಡೆಯ ಲಿದೆ. ಈ ಬಾರಿ ಕನ್ನಡ-ಆಂಗ್ಲ ಭಾಷೆಗಳ ಭಾಷಾಂತರಕ್ಕೆ ಒತ್ತು ನೀಡಲಾಗುತ್ತದೆ. ಹಿರಿಯ ಪತ್ರಕರ್ತೆ ದೀಪಾ ಗಣೇಶ್ ಅವರ ನೇತೃತ್ವದಲ್ಲಿ ನಡೆಯುವ ಈ ಕಾರ್ಯಾಗಾರದಲ್ಲಿ ಕೆ.ವಿ.ಅಕ್ಷರ, ಶಾಂತ ಗೋಖಲೆ, ಅಂಜುಂ ಕತ್ಯಾಲ್, ಶಿವರಾಮ ಪಡಿಕ್ಕಲ್ ಹಾಗೂ ವಿ.ಬಿ.ತಾರಕೇಶ್ವರ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.

ಈ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಆಸಕ್ತಿ ಇರುವವರು ಆನ್‌ಲೈನ್ ಮೂಲಕ ಹೆಸರು ನೊಂದಾಯಿಸಿಕೊಳ್ಳಬಹುದಾಗಿದೆ. ಕೇವಲ 30 ಮಂದಿಗೆ ಮಂದಿಗೆ ಮಾ್ರ ಪಾಲ್ಗೊಳ್ಳಲು ಅವಕಾಶವಿರುತ್ತದೆ.

ಉಳಿದಂತೆ ಸಾಹಿತ್ಯ ಕೂಟ, ಪುಸ್ತಕ ಪ್ರದರ್ಶನ, ಸಿನಿಮಾ ಉತ್ಸವ, ಚಿತ್ರಕಲಾ ಪ್ರದರ್ಶನ, ಪ್ರತಿದಿನ ಸಾಂಸ್ಕೃತಿಕ ವೈವಿಧ್ಯ ಹಾಗೂ ಯುವಜನತೆಗಾಗಿ ಕೆಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಸಿನಿಮಾ ಉತ್ಸವದಲ್ಲಿ ಖ್ಯಾತ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಅನನ್ಯ ಕಾಸರವಳ್ಳಿ, ಎನ್.ಮನು ಚಕ್ರವರ್ತಿ, ಅರುಣರಾಜೇ ಪಾಟೀಲ್ ಪಾಲ್ಗೊಳ್ಳಲಿದ್ದಾರೆ. ಒಂದು ಮಕ್ಕಳ ಚಿತ್ರ ಸೇರಿದಂತೆ ಚಲನಚಿತ್ರ ಪ್ರದರ್ಶನವೂ ನಡೆಯಲಿದೆ ಎಂದರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೊದಲ ದಿನ ಡಾ.ಚಂದ್ರಶೇಖರ ಕಂಬಾರರ ಕನ್ನಡ ನಾಟಕ ‘ಮಹಾಮಾಯಿ’ ಮೂಡಬಿದ್ರೆಯ ರಂಗ ಅಧ್ಯಯನ ಕೇಂದ್ರದಿಂದ ಪ್ರದರ್ಶನಗೊಳ್ಳಲಿದೆ. ಎರಡನೇ ದಿನ ಪ್ರೊ.ಎಂ.ಎಲ್.ಸಾಮಗ ತಂಡದಿಂದ ಆಂಗ್ಲ ಭಾಷೆಯಲ್ಲಿ ಯಕ್ಷಗಾನ ತಾಳಮದ್ದಲೆ ‘ಕೃಷ್ಣ ಸಂಧಾನ’ ನಡೆಯಲಿದೆ. ಕೊನೆಯ ದಿನ ಆನಂದ ಶಂಕರ್ ಜಯಂತ್‌ರಿಂದ ಭರತನಾಟ್ಯ ಹಾಗೂ ಕೂಚುಪುಡಿ ನೃತ್ಯ ಪ್ರದರ್ಶನವಿರುತ್ತದೆ.

ಇದರೊಂದಿಗೆ ಸೆ.15ರಂದು ಎಂಐಟಿ ಮಣಿಪಾಲದ ಆಯಿನಾ ಡಾಮಟಿಕ್ಸ್ ನಿಂದ ಬೀದಿ ನಾಟಕ, ಮರುದಿನ ಪ್ರಸಿದ್ಧ ಜಪಾನ್ ಸಿನಿಮಾ ಆಧಾರಿತ ‘ರೋಶೊಮೊನ್’ ನಾಟಕ, ಕೊನೆಯ ದಿನ ಪ್ರಸಿದ್ಧ ಕೋರಿಯೊಗ್ರಫರ್ ದಿಯಾ ನಾಯ್ದು ಸಂಯೋಜನೆಯಲ್ಲಿ ಸಮಕಾಲೀನ ನೃತ್ಯ ಪ್ರದರ್ಶನ ನಡೆಯಲಿದೆ. ಅಲ್ಲದೇ ಮಿಲಾಪ್ ಕಿರುಚಿತ್ರಗಳ ಸ್ಪರ್ಧೆಯೂ ನಡೆಯಲಿದ್ದು ವಿಜೇತ ಚಿತ್ರ 15,000ರೂ.ನಗದು ಬಹುಮಾನ ಪಡೆಯಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News