ಆ.15ರಂದು ಕಲ್ಮಾಡಿ ಸ್ಟೆಲ್ಲಾ ಮಾರೀಸ್ ಚರ್ಚ್‌ನಲ್ಲಿ ವಾರ್ಷಿಕ ಹಬ್ಬ
ಉಡುಪಿ, ಆ.2: ಕಲ್ಮಾಡಿಯ ಸ್ಟೆಲ್ಲಾ ಮಾರೀಸ್ ಚರ್ಚ್‌ನಲ್ಲಿ ಪ್ರತಿಷ್ಠಾಪನೆ ಗೊಂಡಿರುವ ಆರೋಗ್ಯಮಾತೆಯ ಪ್ರತಿಷ್ಠಾಪನಾ ಹಬ್ಬವು ಆ.15ರಂದು ನಡೆಯಲಿದೆ ಎಂದು ಚರ್ಚ್‌ನ ಧರ್ಮಗುರುಗಳಾದ ವಂ.ಆಲ್ಬನ್ ಡಿಸೋಜ ತಿಳಿಸಿದ್ದಾರೆ.
ಇಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಉತ್ಸವದಲ್ಲಿ ಜಾತಿ-ಮತ-ಧರ್ಮದ ಭೇದವಿಲ್ಲದೇ ಎಲ್ಲರೂ ಭಾಗವಹಿಸಲಿದ್ದು, ಎಲ್ಲಾ ಧರ್ಮದ ಜನರನ್ನು ಪ್ರೀತಿ ಹಾಗೂ ಐಕ್ಯತೆಯಿಂದ ಬೆಸೆಯುವ ಪುಣ್ಯಕ್ಷೇತ್ರಗಳಲ್ಲಿ ಇದೂ ಒಂದಾಗಿದೆ ಎಂದರು.
ಆ.6ರಿಂದ 14ರವರೆಗೆ ಪ್ರತಿದಿನ ಸಂಜೆ 4:00 ಗಂಟೆಗೆ ನೊವೆನಾ ಬಲಿಪೂಜೆ ಹಾಗೂ ಪವಿತ್ರ ತೈಲ ಲೇಪನವಿರುತ್ತದೆ. ಈ ದಿನಗಳಲ್ಲಿ ರೋಗಿಗಳಿಗೆ, ವೃದ್ಧರಿಗೆ, ಮಕ್ಕಳಿಗೆ, ಯುವಕರಿಗೆ ಹಾಗೂ ಭಕ್ತರ ಕೋರಿಕೆಗಳ ಈಡೇರಿಕೆಗೆ ವಿಶೇಷ ಪ್ರಾರ್ಥನೆ ನಡೆಯಲಿದೆ. ಆ.13ರಂದು ಅಪರಾಹ್ನ 2:30ಕ್ಕೆ ಆರೋಗ್ಯ ಮಾತೆ ಮರಿಯಮ್ಮ ತಾಯಿಯ ಮೂರ್ತಿಯನ್ನು ಆದಿಉಡುಪಿ ಜಂಕ್ಷನ್‌ನಿಂದ ಮೆರವಣಿಗೆಯಲ್ಲಿ ಸ್ಟೆಲ್ಲಾ ಮಾರೀಸ್ ಚರ್ಚ್‌ಗೆ ತರಲಾಗುವುದು ಎಂದರು.
ಆ.15ರಂದು ಪುಣ್ಯಕ್ಷೇತ್ರದ ಹಬ್ಬ ನಡೆಯಲಿದೆ. ಆ ದಿನ ಬೆಳಗ್ಗೆ 7:00ಕ್ಕೆ ಕೊಂಕಣಿ ಭಾಷೆ, ಸಂಜೆ 4:00ಕ್ಕೆ ಕನ್ನಡ ಹಾಗೂ 6:00ಕ್ಕೆ ಆಂಗ್ಲ ಭಾಷೆಗಳಲ್ಲಿ ಬಲಿಪೂಜೆ ನಡೆಯಲಿದೆ. ಹಬ್ಬದ ಸಾಂಪ್ರದಾಯಿಕ ಪೂಜೆ ಆ.15ರಂದು ಬೆಳಗ್ಗೆ 10:30ಕ್ಕೆ ಉಡುಪಿ ಧರ್ಮಪ್ರಾಂತದ ಬಿಷಪ್ ಡಾ.ಜೆರಾಲ್ಡ್ ಐಸಾಕ್ ಲೋಬೊರಿಂದ ನಡೆಯಲಿದೆ. ಬಳಿಕ ಎಲ್ಲರಿಗೂ ಅನ್ನಸಂತರ್ಪಣೆ ನಡೆಯಲಿದೆ.
ಇದೀಗ ವಿನೂತನ ವಿನ್ಯಾಸದಲ್ಲಿ ಬೋಟ್ ಮಾದರಿಯಲ್ಲಿ ನೂತನ ಚರ್ಚ್‌ನ ನಿರ್ಮಾಣ ಕಾರ್ಯ ಐದು ಕೋಟಿ ರೂ.ವೆಚ್ಚದಲ್ಲಿ ನಡೆಯುತ್ತಿದೆ. ಇತ್ತೀಚೆಗೆ ಚರ್ಚ್‌ನ ಮೇಲ್ಬಾಗದಲ್ಲಿ ಅತೀದೊಡ್ಡ ಶಿಲುಬೆಯನ್ನು ಪ್ರತಿಷ್ಠಾಪಿಸಲಾಗಿದೆ. ಈ ನೂತನ ಚರ್ಚ್‌ನ ಉದ್ಘಾಟನೆ 2018ರ ಜ.6ರಂದು ನಡೆಯಲಿದೆ. ಇದರಲ್ಲಿ ಒಂದು ಸಾವಿರ ಮಂದಿಗೆ ಒಮ್ಮೆಗೆ ಪ್ರಾರ್ಥನೆ ಸಲ್ಲಿಸಲು ಅವಕಾಶವಿರುತ್ತದೆ ಎಂದು ವಂ. ಆಲ್ಬನ್ ಡಿಸೋಜ ನುಡಿದರು.
ಸುದ್ದಿಗೋಷ್ಠಿಯಲ್ಲಿ ಚರ್ಚ್‌ನ ಮಾಜಿ ಉಪಾಧ್ಯಕ್ಷೆ ಪ್ಲಾವಿಯಾ ಮಥಾಯಸ್, ಚರ್ಚ್‌ನ ಉಪಾಧ್ಯಕ್ಷ ಸಂಜಯ್ ಮೆಲ್ವಿನ್ ಅಂದ್ರಾದೆ ಉಪಸ್ಥಿತರಿದ್ದರು.