×
Ad

ಮಾಟಗಾತಿ ಎಂಬ ಶಂಕೆಯಲ್ಲಿ ವಿಧವೆಯ ಥಳಿಸಿ ಹತ್ಯೆ

Update: 2017-08-02 23:06 IST

ಲಕ್ನೊ, ಆ.2: ಮಹಿಳೆಯರ ತಲೆಕೂದಲು ಕತ್ತರಿಸುವ ಮಾಟಗಾತಿ ಎಂಬ ಶಂಕೆಯಲ್ಲಿ ಗ್ರಾಮಸ್ಥರು 62ರ ಹರೆಯದ ವಿಧವೆಯೋರ್ವಳನ್ನು ಥಳಿಸಿ ಕೊಂದ ಘಟನೆ ಉ.ಪ್ರದೇಶದ ಆಗ್ರಾದ ಮಘ್‌ತೈ ಎಂಬಲ್ಲಿ ನಡೆದಿದೆ.

ಇದೇ ಪರಿಸರದಲ್ಲಿ ಹಲವು ಮಹಿಳೆಯರ ತಲೆಕೂದಲನ್ನು ಯಾರೋ ಕತ್ತರಿಸುತ್ತಿದ್ದಾರೆ ಎಂಬ ಪುಕಾರು ಹಬ್ಬಿತ್ತು. 62ರ ಹರೆಯದ ಮಾನ್ ದೇವಿ ಎಂಬ ವಿಧವೆ ಈ ಕೃತ್ಯ ಎಸಗಿರುವ ಶಂಕೆಯಲ್ಲಿ ಗ್ರಾಮಸ್ಥರು ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಆಗ್ರಾದ ಅಛ್‌ನೆರ ಪ್ರದೇಶದಲ್ಲಿರುವ ಮಂಗ್ರೋಲ್ ಜಾಟ್ ಗ್ರಾಮದಲ್ಲಿ ಲಾಲ್‌ಸಿಂಗ್ ಎಂಬಾತನ ಪತ್ನಿ ತೀವ್ರ ತಲೆನೋವು ಬಾಧಿಸಿದ ಕಾರಣ ಪ್ರಜ್ಞೆ ಕಳೆದುಕೊಂಡಿದ್ದಳು . ಪ್ರಜ್ಞೆ ಮರುಕಳಿಸಿದಾಗ ಈಕೆಯ ತಲೆಕೂದಲನ್ನು ಕತ್ತರಿಸಲಾಗಿತ್ತು ಎನ್ನಲಾಗಿದೆ.ಇದೇ ರೀತಿ ಗ್ರಾಮದ ಹಲವು ಮಹಿಳೆಯರ ತಲೆಕೂದಲು ರಾತ್ರಿ ಬೆಳಗಾಗುವುದರೊಳಗೆ ಮಾಯವಾಗಿತ್ತು ಎಂದು ಸುದ್ದಿ ಹಬ್ಬಿದೆ.

ಇದೇ ಸಂದರ್ಭ, ವೃದ್ಧೆ ಮಾನ್‌ದೇವಿ ರಾತ್ರಿ ವೇಳೆ ಬಹಿರ್ದೆಸೆಗಾಗಿ ಹೊಲಕ್ಕೆ ತೆರಳಿದ್ದವಳು ಮನೆಗೆ ವಾಪಸಾಗುವಾಗ ಕತ್ತಲಲ್ಲಿ ದಾರಿ ತಪ್ಪಿ ಮತ್ತೊಬ್ಬರ ಮನೆ ಪ್ರವೇಶಿಸಿದ್ದಾಳೆ. ಬಿಳಿಯ ಸೀರೆ ಧರಿಸಿದ್ದ ಈ ಅಪರಿಚಿತ ಮುದುಕಿಯನ್ನು ಕಂಡ ಅಲ್ಲಿದ್ದ ಮಗುವೊಂದು ಭಯದಿಂದ ಕಿರುಚಿಕೊಂಡಿದೆ.

ಈ ವೇಳೆ ಅಲ್ಲಿ ಜಮಾಯಿಸಿದ ಸ್ಥಳೀಯ ಗ್ರಾಮಸ್ಥರು, ಈಕೆ ತಲೆಕೂದಲು ಕತ್ತರಿಸುವ ಮಾಟಗಾತಿ ಎಂದು ಸಂದೇಹಿಸಿ ಆಕೆಯನ್ನು ದೊಣ್ಣೆಯಿಂದ ಥಳಿಸಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಈ ಪ್ರಕರಣ ಸಂದೇಹಾಸ್ಪದವಾಗಿದ್ದು ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ಸ್ಥಳೀಯ ಪೊಲೀಸ್ ಠಾಣಾ ಪ್ರಭಾರ ಅಧಿಕಾರಿ ತಿಳಿಸಿದ್ದಾರೆ.

  ಇದೊಂದು ಸಾಮೂಹಿಕ ಉನ್ಮಾದದ ಪ್ರಕರಣವಾಗಿದೆ ಎಂದು ಆಗ್ರಾದ ಮಾನಸಿಕ ಚಿಕಿತ್ಸಾಲಯದ ಮನೋರೋಗ ವಿಭಾಗದ ಮುಖ್ಯಸ್ಥ ಡಾ ದಿನೇಶ್ ರಾಥೋರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News