ವಿಶ್ವ ಕುಸ್ತಿ ಚಾಂಪಿಯನ್‌ಶಿಪ್: ವೀರ್‌ದೇವ್‌ಗೆ ಕಂಚು

Update: 2017-08-02 18:49 GMT

ಹೊಸದಿಲ್ಲಿ, ಆ.2: ವಿಶ್ವ ಜೂನಿಯರ್ ಕುಸ್ತಿ ಚಾಂಪಿಯನ್‌ಶಿಪ್‌ನ ಮೊದಲ ದಿನ ವೀರ್ ದೇವ್ ಗುಲಿಯಾ ಕಂಚು ಜಯಿಸಿದ್ದಾರೆ. ಈ ಮೂಲಕ ಭಾರತ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಆರಂಭ ಪಡೆದಿದೆ.

ಫಿನ್‌ಲ್ಯಾಂಡ್‌ನಲ್ಲಿ ಮಂಗಳವಾರ ರಾತ್ರಿ ಕಂಚಿನ ಪದಕಕ್ಕಾಗಿ ನಡೆದ ಪ್ಲೇ-ಆಫ್ ಪಂದ್ಯದಲ್ಲಿ ಪುರುಷರ 74 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಜಪಾನ್‌ನ ಯಮಸಕಿ ಯಜುರೊರನ್ನು 8-5 ಅಂತರದಿಂದ ಮಣಿಸಿದ ಗುಲಿಯಾ ಕಂಚಿನ ಪದಕ ತನ್ನದಾಗಿಸಿಕೊಂಡರು.

ಗುಲಿಯಾ ಕ್ವಾರ್ಟರ್‌ಫೈನಲ್‌ನಲ್ಲಿ ಸೋತಿದ್ದರೂ ಪ್ಲೇ-ಆಫ್ ಸುತ್ತಿಗೆ ತೇರ್ಗಡೆಯಾಗಿದ್ದರು. ಅಂತಿಮ-8ರಲ್ಲಿ ಗುಲಿಯಾ ವಿರುದ್ಧ ಜಯ ಸಾಧಿಸಿದ್ದ ಉಜ್ಬೇಕಿಸ್ತಾನದ ಇಸಾ ಶಾಪಿವ್ 74 ಕೆಜಿ ತೂಕ ವಿಭಾಗದಲ್ಲಿ ಚಿನ್ನದ ಪದಕ ಸುತ್ತಿಗೆ ತೇರ್ಗಡೆಯಾಗಿರುವ ಹಿನ್ನೆಲೆಯಲ್ಲಿ ಗುಲಿಯಾ ಪ್ಲೇ-ಆಫ್‌ಗೆ ಪ್ರವೇಶ ಪಡೆದಿದ್ದರು.
ಸ್ಪರ್ಧೆಯಲ್ಲಿದ್ದ ಇನ್ನೋರ್ವ ಬಾಕ್ಸರ್ ರವಿಂದರ್ ಪುರುಷರ 60 ಕೆಜಿ ಫ್ರೀಸ್ಟೈಲ್‌ನಲ್ಲಿ ಪ್ಲೇ-ಆಫ್ ಸುತ್ತಿಗೆ ತಲುಪಿದ್ದರೂ ಜಪಾನ್‌ನ ಹಿರೊಮು ಸಕಾಕಿ ವಿರುದ್ಧ 6-9 ರಿಂದ ಸೋತು ಪದಕ ವಂಚಿತರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News