ಆ.6: ಯುವವಾಹಿನಿ ಕೇಂದ್ರ ಸಮಿತಿ ಪದಗ್ರಹಣ
ಪುತ್ತೂರು,ಆ.3 : ಬಿಲ್ಲವ ಸಮಾಜದ ಅಭಿವೃದ್ಧಿಗಾಗಿ ಯುವ ಜನಾಂಗವನ್ನು ಒಗ್ಗೂಡಿಸುವ ಮೂಲ ಉದ್ದೇಶದೊಂದಿಗೆ ವಿದ್ಯೆ,ಉದ್ಯೋಗ ಮತ್ತು ಸಂಪರ್ಕದ ಧ್ಯೇಯವನ್ನಿಟ್ಟುಕೊಂಡು ಸಮಾಜದ ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ, ವಿದ್ಯಾರ್ಥಿಗಳಿಗೆ,ಬಡವರಿಗೆ,ಅಸಹಾಯಕರಿಗೆ ನೆರವು ಮತ್ತು ಮಾರ್ಗದರ್ಶನ ನೀಡುವ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿರುವ ಯುವವಾಹಿನಿ ಕೇಂದ್ರ ಸಮಿತಿಯ 30 ನೇ ವಾರ್ಷಿಕ ಸಮಾವೇಶ ಮತ್ತು ಪದಗ್ರಹಣ ಸಮಾರಂಭ ಉಪ್ಪಿನಂಗಡಿ ಯುವವಾಹಿನಿ ಘಟಕದ ಆತಿಥ್ಯದಲ್ಲಿ ಆ.6ರಂದು ಉಪ್ಪಿನಂಗಡಿಯ ಎಚ್.ಎಂ.ಅಡಿಟೋರಿಯಂನಲ್ಲಿ ನಡೆಯಲಿದೆ ಎಂದು ಸಮಾವೇಶ ಸ್ವಾಗತ ಸಮಿತಿಯ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ ತಿಳಿಸಿದ್ದಾರೆ.
ಪುತ್ತೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1 ಗಂಟೆ ತನಕ ಕಾರ್ಯಕ್ರಮ ನಡೆಯುವುದು. ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಕೆ.ವಸಂತ ಬಂಗೇರ ಅವರು ಉದ್ಘಾಟಿಸುವರು. ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಪದ್ಮನಾಭ ಮರೋಳಿ ಅವರು ಅಧ್ಯಕ್ಷತೆ ವಹಿಸುವರು. ಯುವವಾಹಿನಿಯ `ಸಿಂಚನ' ವಿಶೇಷಾಂಕವನ್ನು ಗೋವಾದ ಡೈರೆಕ್ಟರ್ ಆಫ್ ಪಾಕ್ರ್ಸ್‍ನ ಅರಣ್ಯ ಸಂರಕ್ಷಣಾಧಿಕಾರಿ ದಾಮೋಧರ ವಿ.ಟಿ.ಅವರು ಬಿಡುಗಡೆ ಮಾಡುವರು.ಜಿಲ್ಲಾ ಪಂಚಾಯಿತಿ ಸದಸ್ಯೆ ಶಯನಾ ಜಯಾನಂದ್ ,ತಾಲ್ಲೂಕು ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕಾಸರಗೋಡು ಸರ್ಕಾರಿ ಕಾಲೇಜಿನ ಉಪನ್ಯಾಸಕ ರಾಜೇಶ್ ಬೆಜ್ಜಂಗಳ ದಿಕ್ಸೂಚಿ ಭಾಷಣ ಮಾಡುವರು ಎಂದು ತಿಳಿಸಿದರು.
ವಿದ್ಯೆಗೆ ಒತ್ತು ನೀಡುವುದರೊಂದಿಗೆ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿರುವ ಮಂಗಳೂರಿನ ಗಾಂಧಿನಗರದ ವೆಂಕಟೇಶ್ ಶಿವಭಕ್ತಿ ಯೋಗ ಸಂಘಕ್ಕೆ ಯುವವಾಹಿನಿ `ಸಾಧನಾ ಶ್ರೇಷ್ಠ' ಪ್ರಶಸ್ತಿ ಮತ್ತು ವಿದ್ಯೆಯ ಜೊತೆಗೆ ಜನಸೇವೆಯಲ್ಲಿ ತೊಡಗಿರುವ ಉದ್ಯಮಿ ಚಂದಯ್ಯ ಬಿ.ಕರ್ಕೇರ ಅವರಿಗೆ ಯುವವಾಹಿನಿ `ಸಾಧನಾಶ್ರೀ' ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕಲಿಕೆ, ಕ್ರೀಡಾ ಕ್ಷೇತ್ರದ ಸಾಧಕರೂ ಸೇರಿದಂತೆ 20ಕ್ಕೂ ಅಧಿಕ ಮಂದಿ ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದರು. ಸಭಾ ಕಾರ್ಯಕ್ರಮದ ಬಳಿಕ ಕಿರಣ್ ಗಾನಸಿರಿ ಅವರ ನಿರ್ದೇಶನದಲ್ಲಿ `ಹಾಡು -ಕುಣಿದಾಡು' ಗಾನ-ನೃತ್ಯ ಕಾರ್ಯಕ್ರಮ ನಡೆಯುವುದು ಎಂದು ಅವರು ತಿಳಿಸಿದರು.
ಯುವಾಹಿನಿ ಕೇಂದ್ರ ಸಮಿತಿಯ ನಿರ್ದೇಶಕ ಡಾ. ಸದಾನಂದ ಕುಂದರ್ ಅವರು ಮಾತನಾಡಿ ಅವಿಭಜಿತ ಜಿಲ್ಲಾ ವ್ಯಾಪ್ತಿಗೊಳಪಟ್ಟ ಯುವಾಹಿನಿ ಕೇಂದ್ರ ಸಮಿತಿಯು 25 ಘಟಕಗಳನ್ನೊಳಗೊಂಡಿದ್ದು, ಈ ಘಟಕಗಳಿಂದ ಆಯ್ದುಕೊಂಡು ಕೇಂದ್ರ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಈ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನಡೆಯುವುದು ಎಂದರು. ಸಮಿತಿಯ ವತಿಯಿಂದ ವರ್ಷಂಪ್ರತಿ ವಿಶುಕುಮಾರ್ ನೆನಪಿಗಾಗಿ ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡುತ್ತಾ ಬರಲಾಗಿದ್ದು, ಈ ಪ್ರಶಸ್ತಿಯನ್ನು ಮುಂದೆ ನೀಡಲಾಗುವುದು ಎಂದವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಯುವವಾಹಿನಿ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಅಶೋಕ್‍ಕುಮಾರ್ ಪಡ್ಪು, ಉಪಾಧ್ಯಕ್ಷ ಅಜಿತ್‍ಕುಮಾರ್, ಖಜಾಂಜಿ ಅನಿಲ್‍ಕುಮಾರ್ ಮತ್ತು ಪ್ರಚಾರ ಸಮಿತಿಯ ಸದಸ್ಯ ಅಶೋಕ್ ಉಪಸ್ಥಿತರಿದ್ದರು.