×
Ad

ದಲಿತರಿಗೆ ಭೂಮಿ ಹಂಚಲು ಒತ್ತಾಯಿಸಿ ಜಿಲ್ಲೆಯಾದ್ಯಂತ ಹೋರಾಟ

Update: 2017-08-03 18:37 IST

ಬೆಳ್ತಂಗಡಿ,ಆ.3: ಜಿಲ್ಲೆಯಲ್ಲಿ ದಲಿತರಿಗೆ ಮೀಸಲಿರಿಸಲಾಗಿರುವ ಡಿ.ಸಿ ಮನ್ನಾ ಜಮೀನನ್ನು ಹಂಚುವ ಬಗ್ಗೆ ದ.ಕ ಜಿಲ್ಲಾಧಿಕಾರಿಯವರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಅವರ ಈ ನಡೆಯನ್ನು ವಿರೋಧಿಸಿ ದಲಿತರಿಗೆ ಭೂಮಿ ಹಂಚಿಕೆಯಾಗಬೇಕು ಎಂದು ಒತ್ತಾಯಿಸಿ ದ.ಕ ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಸಂಘಟನೆಯ ಉಪಾಧ್ಯಕ್ಷ ಶೇಖರ ಲಾಯಿಲ ತಿಳಿಸಿದ್ದಾರೆ.

ಬೆಳ್ತಂಗಡಿ ಪತ್ರಿಕಾಭವನದಲ್ಲಿ ಗುರುವಾರ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಅವರು ಈ ವಿಚಾರ ತಿಳಿಸಿದರು. ಬ್ರಿಟೀಷರ ಸರಕಾರ ಜಿಲ್ಲೆಯಲ್ಲಿ ದಲಿತರಿಗಾಗಿ ಮೀಸಲಿರಿಸಿದ್ದ ಜಾಗವನ್ನು ಇನ್ನೂ ಶೋಷಿತ ಸಮುದಾಯಕ್ಕೆ ಹಂಚಲು ನಮ್ಮ ಸರಕಾರಗಳಿಗೆ ಸಾಧ್ಯವಾಗಿಲ್ಲ. ಕಳೆದ ಮೂರು ದಶಕಗಳಿಂದ ಜಮೀನಿನ ಹಕ್ಕಿಗಾಗಿ ಹೋರಾಟಗಳನ್ನು ಮಾಡುತ್ತಾ ಬಂದಿದ್ದೇವೆ ಯಾವುದಾದರೂ ಕಾನೂನಿನ ತೊಡಕು ಹೇಳುತ್ತಾ ಅಧಿಕಾರಿಗಳು ಜನರನ್ನು ವಂಚಿಸುತ್ತಿದ್ದಾರೆ. ಬುಧವಾರ ಮಂಗಳೂರಿನಲ್ಲಿ ನಡೆದ ದಲಿತರ ಕುಂದುಕೊರತೆ ಸಭೆಯಲ್ಲಿ ಡಿ.ಸಿ ಮನ್ನಾ ಭೂಮಿ ಹಂಚಲು ದಲಿತರು ಕೇಳಿದಾಗ  ಇಲ್ಲಸಲ್ಲದ ಕಾರಣಗಳನ್ನು ಹೇಳುತ್ತಾ ತಮ್ಮ ಅಧ್ಯಕ್ಷತೆಯ ಸಭೆಯಿಂದ ಜಿಲ್ಲಾಧಿಕಾರಿಯವರು ಎದ್ದು ಹೊರ ನಡೆಯುವ ಮೂಲಕ ಬಾಲಿಶತನ ಪ್ರದರ್ಶಿಸಿದ್ದಾರೆ. ದಲಿತ ವಿರೋಧಿಯಾಗಿರುವ ಜಿಲ್ಲಾಧಿಕಾರಿಯವರನ್ನು ಕೂಡಲೇ ಜಿಲ್ಲೆಯಿಂದ ವರ್ಗಾವಣೆ ಮಾಡಬೇಕು ಹಾಗೂ ಭೂರಹಿತ ದಲಿತರಿಗೆ ಡಿ.ಸಿ ಮನ್ನಾ ಜಮೀನು ಹಂಚಬೇಕು ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಕಪ್ಪುಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. 

ಡಿ.ಸಿ ಮನ್ನಾ ಜಮೀನಿಗಾಗಿ ನಡೆಯುತ್ತಾ ಬಂದಿರುವ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ಜಿಲ್ಲೆಯ ಎಲ್ಲ ದಲಿತ ಸಂಘಟನೆಗಳು ಒಟ್ಟಾಗಿ ದ.ಕ ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿಯನ್ನು ರಚಿಸಿಕೊಂಡಿದ್ದು ಜಿಲ್ಲಾ ಮಟ್ಟದಲ್ಲಿ ಚಳವಳಿಯನ್ನು ತೀವ್ರಗೊಳಿಸಲಾಗುವುದು. ಭೂಮಿ ಹಂಚಿಕೆಯಾಗುವ ವರೆಗೆ ನಿರಂತರ ಹೋರಾಟ ನಡೆಯಲಿದೆ.  ಆ.4 ರಂದು ಮಂಗಳೂರಿನಲ್ಲಿ ಈಬಗ್ಗೆ ಸಮಾಲೋಚನಾಸಭೆ ನಡೆಯಲಿದ್ದು ಸಭೆಯಲ್ಲಿ ಈ ಬಗ್ಗೆ ನಿರ್ಧರಗಳನ್ನು ತೆಗೆದುಕೊಳ್ಳಲಾಗುವುದು ಎಂದು  ದಲಿತರಿಗೆಂದು ಮೀಸಲಿರಿಸಲಾಗಿರುವ ಜಮೀನು ಇದೀಗ ಬಹುತೇಕ ಅತಿಕ್ರಮಣವಾಗಿದ್ದು ಅರಣ್ಯ ಇಲಾಖೆ , ಕೆ.ಸಿ.ಡಿ.ಸಿ ಹಾಗೂ ಭೂಮಾಲಕರ ಬಳಿ ಹೆಚ್ಚಿನ ಜಮೀನಿದೆ. ಜಿಲ್ಲೆಯಲ್ಲಿ ಸಾವಿರಾರು ದಲಿತ ಕುಟುಂಬಗಳು ಮನೆ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ. ಎಷ್ಟೋ ಕುಟುಂಬಗಳು ಟರ್ಪಾಲಿನ ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ ಅವರಿಗೆ ಜಮೀನು ಹಂಚಲು ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಇರುವ ಜಮೀನು ಹಂಚಲು ಇವರಿಗಿರುವ ತೊಡಕೇನು ಎಂದು ಪ್ರಶ್ನಿಸಿದರು.

ಯಾರಾದರೂ ಬಡವರು ಸರಕಾರಿ ಜಮೀನಿನಲ್ಲಿ ಗುಡಿಸಲು ಕಟ್ಟಿದರೆ ಅದನ್ನು ಕಿತ್ತು ಹಾಕುವ ಕಂದಾಯ ಇಲಾಖೆಗೆ ಡಿಸಿಮನ್ನಾ ಜಮೀನು ಅಕ್ರಮ ತೆರವುಗೊಳಿಸಲು ಇರುವ ಅಡ್ಡಿಯಾದರೂ ಏನು ಇರುವವರಿಗೆ ಒಂದು ಕಾನೂನು ಬಡವರಿಗೊಂದು ಕಾನೂನು ಇದು ನ್ಯಾಯವೇ ನಮ್ಮ ಹಕ್ಕನ್ನು ನಾವು ಕೇಳುತ್ತಿದ್ದೇವೆ ಅದನ್ನು ಪಡೆಯುವ ವರೆಗೆ ಹೋರಾಟ ವಮುಂದುವರಿಸುತ್ತೇವೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಸಂಗಡನೆಯ ಕಾರ್ಯದರ್ಶಿ ಬಿ,ಕೆ ವಸಂತ್ , ಮುಖಂಡರುಗಳಾದ ಸೇಸಪ್ಪ ಅಳದಂಗಡಿ, ನೇಮಿರಾಜ್ ಕಿಲ್ಲೂರು, ಶದರೀಧರ ಕಳೆಂಜ, ನಾರಾಯಣ ಪುದುವೆಟ್ಟು ಹಾಗೂ ಜಯಾನಂದ ಪಿಲಿಕಳ ಉಪಸ್ಥಿತರಿದ್ದರು.

ಅರ್ಹ ಫಲಾನುಭಾವಿಗಳಿಗೆ ಡಿಸಿ ಮನ್ನಾ ಜಮೀನು ಹಂಚಲು ಅವಕಾಶವಿಲ್ಲ ಎಂದು ಹೇಳುವ ಅಧಿಕಾರಿಗಳು ತಮಗೆ ಬೇಕಾದವರಿಗೆ ಡಿಸಿ ಮನ್ನಾ ಜಮೀನನ್ನು ಕಾನೂನು ಬಾಹಿರವಾಗಿ ಹಂಚುತ್ತಿದ್ದಾರೆ ಬೆಳ್ತಂಗಡಿ ತಾಲೂಕಿನಲ್ಲಿ ಓಡಿಲ್ನಾಳ ಗ್ರಾಮದಲ್ಲಿ 3.60 ಎಕ್ರೆ ಡಿ.ಸಿ ಮನ್ನಾ ಜಮೀನನ್ನು ತಾಲೂಕಿನವರಲ್ಲದ ಶಿವಕುಮಾರ್ ಎಂಬರಿಗೆ ನೀಡಿದ್ದಾರೆ ಇದು ಕಾನೂನು ಬಾಹಿರವಾಗಿದೆ ಇದು ಹೇಗೆ ಸಾಧ್ಯವಾಯಿತು

ಬಿ.ಕೆ ವಸಂತ್ ಉಪಾಧ್ಯಕ್ಷರು ಸಮನ್ವಯಸಮಿತಿ,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News