ರಹೀಂ ಉಚ್ಚಿಲ್ ಕೊಲೆ ಯತ್ನ ಪ್ರಕರಣ: ಇಬ್ಬರು ಅಪರಾಧಿಗಳಿಗೆ ಕಠಿಣ ಸಜೆ
ಮಂಗಳೂರು, ಆ. 3: 2012ರಲ್ಲಿ ಕರ್ನಾಟಕ ಬ್ಯಾರಿ ಅಕಾಡಮಿಯ ಅಧ್ಯಕ್ಷರಾಗಿದ್ದ ರಹೀಂ ಉಚ್ಚಿಲ್ ಕೊಲೆ ಯತ್ನ ಪ್ರಕರಣದಲ್ಲಿ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಇಬ್ಬರು ಅಪರಾಧಿಗಳಿಗೆ ತಲಾ 4 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 1.10 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಉಳ್ಳಾಲ ಕೆ.ಸಿ.ರೋಡ್‌ನ ಅಕ್ಕರಕೆರೆ ನಿವಾಸಿ ಮುಹಮ್ಮದ್ ರಫೀಕ್ ಯಾನೆ ಅಪ್ಪಿ (33) ಹಾಗೂ ಎರಡನೇ ಆರೋಪಿ ಸುರತ್ಕಲ್ ಇಡ್ಯಾ ಬಳಿಯ ನಿವಾಸಿ ಅಬ್ದುಲ್ ಬಶೀರ್ (31) ಶಿಕ್ಷೆಗೊಳಗಾದ ಅಪರಾಧಿಗಳು. ಪ್ರಕರಣದಲ್ಲಿ 7 ಮಂದಿ ಆರೋಪಿಗಳನ್ನು ಗುರುತಿಸಲಾಗಿತ್ತು. ಉಳಿದ ಐದು ಮಂದಿಯನ್ನು ಸಾಕ್ಷಾಧಾರಗಳ ಕೊರತೆಯಿಂದ ನ್ಯಾಯಾಲಯವು ಖುಲಾಸೆಗೊಳಿಸಿದೆ.
ಪ್ರಕರಣದ ಹಿನ್ನೆಲೆ
ಕರ್ನಾಟಕ ಬ್ಯಾರಿ ಅಕಾಡೆಮಿ ಅಧ್ಯಕ್ಷರಾಗಿದ್ದ ರಹೀಂ ಉಚ್ಚಿಲ್ ಅತ್ತಾವರದಲ್ಲಿ ಅಕಾಡೆಮಿಯ ಕಚೇರಿಯಲ್ಲಿದ್ದ ಸಂದರ್ಭ 2012 ಮಾರ್ಚ್ 15 ರಂದು ಮಧ್ಯಾಹ್ನ 1.15ರ ವೇಳೆಗೆ ಅವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆದಿತ್ತು.
ಶಿಕ್ಷೆಗೊಳಗಾಗಿರುವ ಮುಹಮ್ಮದ್ ರಫೀಕ್ ಮತ್ತು ಅಬ್ದುಲ್ ಬಶೀರ್ ಅವರು ಮೂರನೆ ಆರೋಪಿ ಅಬ್ದುಲ್ ಸಲೀಂ ಹಾಗೂ ನಾಲ್ಕನೆ ಆರೋಪಿಯಾಗಿದ್ದ ಹಮೀದ್ ಅವರ ಜತೆ ಮಾರಕಾಯುಧಗಳೊಂದಿಗೆ ರಹೀಂ ಉಚ್ಚಿಲ್ ಅವರ ಛೇಂಬರ್‌ಗೆ ಪ್ರವೇಶಿಸಿ ತಲವಾರ್‌ನಿಂದ ಕಡಿದು ಗಂಭೀರಗೊಳಿಸಿದ್ದರು. ಬಳಿಕ ಆರೋಪಿಗಳು ತಾವು ಬಂದಿದ್ದ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದರು. ಈ ಬಗ್ಗೆ ಪಾಂಡೇಶ್ವರ ಠಾಣೆಯ ಆಗಿನ ಇನ್‌ಸ್ಪೆಕ್ಟರ್, ಪ್ರಸ್ತುತ ಸಂಚಾರ ವಿಭಾಗದ ಎಸಿಪಿಯಾಗಿರುವ ತಿಲಕ್‌ಚಂದ್ರ ಅವರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಉಮಾ ಎಂ.ಜಿ. ಅವರು ಕೆಲವು ಸಾಕ್ಷಿಗಳನ್ನು ವಿಚಾರಣೆ ನಡೆಸಿದ್ದರು. ಬಳಿಕ ಹಾಲಿ ನ್ಯಾಯಾಧೀಶ ಕೆ.ಎಸ್.ಬೀಳಗಿ ಅವರು ಸಾಕ್ಷಿ ವಿಚಾರಣೆ ಮುಂದುವರಿಸಿ ಇತ್ತಂಡಗಳ ವಾದ ಆಲಿಸಿ ಇಬ್ಬರು ಅಪರಾಧಿಗಳಿಗೆ ಐಪಿಸಿ ಸೆಕ್ಷನ್ 307 ರ ಪ್ರಕಾರ 4 ವರ್ಷ ಕಠಿಣ ಶಿಕ್ಷೆ ಮತ್ತು ತಲಾ 1 ಲಕ್ಷ ರೂ. ದಂಡ ವಿಧಿಸಿದ್ದಾರೆ. ದಂಡ ತೆರಲು ತಪ್ಪಿದರೆ ಮತ್ತೆ 6 ತಿಂಗಳ ಸಜೆ ವಿಧಿಸಿದ್ದಾರೆ. ಐಪಿಸಿ ಸೆಕ್ಷನ್ 326 ರ ಪ್ರಕಾರ ಅಪರಾಧಿಗಳಿಗೆ 6 ತಿಂಗಳು ಜೈಲು ಶಿಕ್ಷೆ ಮತ್ತು ತಲಾ 10 ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡ ತೆರಲು ತಪ್ಪಿದರೆ ಮತ್ತೆ 1 ತಿಂಗಳು ಸಾದಾ ಶಿಕ್ಷೆ ವಿಧಿಸಿದ್ದಾರೆ. ದಂಡದ ಮೊತ್ತದಲ್ಲಿ 1.80 ಲಕ್ಷ ರೂ. ಪರಿಹಾರವಾಗಿ ಗಾಯಾಳು ರಹೀಂ ಉಚ್ಚಿಲ್‌ಗೆ ನೀಡಲು ನ್ಯಾಯಾಧೀಶರು ಆದೇಶಿಸಿದ್ದಾರೆ. ಅಲ್ಲದೆ ಗಾಯಾಳು ಕಾನೂನು ಸೇವಾ ಪ್ರಾಧಿಕಾರದಿಂದಲೂ ಪರಿಹಾರ ಮೊತ್ತವನ್ನು ಪಡೆಯಬಹುದು ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಪುಷ್ಪರಾಜ ಅಡ್ಯಂತಾಯ ವಾದಿಸಿದ್ದರು.