ದೇರಳಕಟ್ಟೆ : ಸ್ತನ್ಯಪಾನ ಸಪ್ತಾಹ ಉದ್ಘಾಟನೆ
ಉಳ್ಳಾಲ,ಆ.3: ಪ್ರಸವದ ಬಳಿಕ ಮೊದಲ ಬಾರಿಗೆ ಉಣಿಸುವ ಹಾಲಿನಲ್ಲಿ ಬ್ಯಾಕ್ಟೀರಿಯ ಅಂಶಗಳಿವೆ ಎಂಬ ತಪ್ಪು ಕಲ್ಪನೆಯಿಂದಾಗಿ ಆರೋಗ್ಯಯುತವಾಗಿ ಬೆಳೆಯುವ ಮಕ್ಕಳಲ್ಲಿ ಪರಿಣಾಮ ಬೀರುತ್ತದೆ. ಪ್ರಸವದ ಬಳಿಕ ಒಂದು ಗಂಟೆಯಲ್ಲಿ ಕೊಡುವ ಎದೆಹಾಲು ಬಹಳಷ್ಟು ಉಪಯುಕ್ತವಾದದ್ದು, ಆ ನಿಟ್ಟಿನಲ್ಲಿ ತಾಯಂದಿರು ಮಕ್ಕಳ ಪೋಷಣೆಯಲ್ಲಿ ಎದೆಹಾಲಿನ ಮಹತ್ವವನ್ನು ಅರಿತುಕೊಳ್ಳಬೇಕು ಎಂದು ಕ್ಷೇಮ ಡೀನ್ ಡಾ. ಸತೀಶ್ ಕುಮಾರ್ ಭಂಡಾರಿ ಅಭಿಪ್ರಾಯಪಟ್ಟರು.
ಅವರು ದೇರಳಕಟ್ಟೆ ನಿಟ್ಟೆ ವಿಶ್ವ ವಿದ್ಯಾನಿಲಯದ ಪೀಡಿಯಾ ಟ್ರಿಕ್ಸ್ ವಿಭಾಗದ ಆಶ್ರಯದಲ್ಲಿ ಆಸ್ಪತ್ರೆ ಸೆಮಿನಾರ್ ಹಾಲ್ ನಲ್ಲಿ ಒಂದು ವಾರ ನಡೆಯಲಿರುವ ಸ್ತನ್ಯಪಾನ ಸಪ್ತಾಹವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಸ್ತನ್ಯಪಾನದ ಕುರಿತಾಗಿ ಜಾಗತಿಕ ಮಟ್ಟದಲ್ಲಿ ಬಹಳಷ್ಟು ಜಾಗೃತಿ ಮೂಡುತ್ತಿದ್ದರೂ ಗ್ರಾಮೀಣ ಭಾಗದ ಮಹಿಳೆಯರಲ್ಲಿ ಇಂದಿಗೂ ತಪ್ಪು ಕಲ್ಪನೆಗಳಿವೆ. ಅದನ್ನು ಹೋಗಲಾಡಿಸಲು ಜಾಗೃತಿ ಮೂಡಿಸುವ ಕೆಲಸದಲ್ಲಿ ವೈದ್ಯರು ತೊಡಗಿಸಿಕೊಳ್ಳಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಪೀಡಿಯಾಟ್ರಿಕ್ಸ್ ವಿಭಾಗದ ಪ್ರೊ. ಸುಮಂತ್ ಶೆಟ್ಟಿ ಮಾತನಾಡಿ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಯುನಿಸೆಫ್ ನ ವಿಶೇಷ ಮುತುವರ್ಜಿಯಿಂದ 1992 ಲ್ಲಿ ಸ್ತನ್ಯಪಾನ ಸಪ್ತಾಹಕ್ಕೆ ಚಾಲನೆ ನೀಡಲಾಗಿತ್ತು. ಇದು ಮಾನವ ಸಂಪನ್ಮೂಲ ಅರೋಗ್ಯಯುತವಾಗಿರಲು ಸಹಕಾರಿಯಾಗಿದೆ ಎಂದರು. ಅಂಕಿ ಅಂಶಗಳ ಪ್ರಕಾರ ಸ್ತನ್ಯಪಾನ ಕುರಿತಾಗಿ ಕರ್ನಾಟಕ್ಕಿಂತ ಕೇರಳ ಬಹಳಷ್ಟು ಜಾಗೃತಗೊಂಡಿದೆ.
ಕರ್ನಾಟಕದಲ್ಲಿ ಶೇ. 40 ತಾಯಂದಿರು ಎದೆ ಹಾಲು ಉಣಿಸಿದರೆ, ಕೇರಳದಲ್ಲಿ ಈ ಪ್ರಮಾಣ ಶೇ. 64.3 ರಷ್ಟಿದ್ದು ಸಮಾಜಕ್ಕೆ ಬಹಳಷ್ಟು ಉಪಯುಕ್ತವಾದ ಸಪ್ತಾಹದ ಪ್ರಯೋಜನವನ್ನು ಬಾಣಂತಿಯರು ಸದುಪಯೋಗಪಡಿಸಬೇಕಿದೆ. ಮಹಿಳೆಯರಲ್ಲಿ ಶೇ.53 ಉದ್ಯೋಗಸ್ಥರು ಇರುವುದರಿಂದ ಎದೆಹಾಲು ಉಣಿಸಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣ ಒಂದೆಡೆಯಾದರೆ ತಪ್ಪು ಕಲ್ಪನೆಗಳು ಬೇರೊಂದು ರೀತಿಯಲ್ಲಿ ಪರಿಣಾಮ ಬೀರುತ್ತಿದೆ.
ಮಕ್ಕಳಿಗೆ ಹಾಲುಣಿಸಲು ಬಾಣಂತಿಯರಿಗೆ ಪ್ರತ್ಯೇಕ ಕೇಂದ್ರಗಳನ್ನು ತೆರೆದ ಖ್ಯಾತಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರಿಗೆ ಸೇರಿದೆ ಎಂದರು.
ಈ ಸಂದರ್ಭದಲ್ಲಿ ವೈದ್ಯಕೀಯ ಅಧೀಕ್ಷಕ ಡಾ. ಶಿವಕುಮಾರ್ ಹಿರೇಮಠ್, ಕ್ಷೇಮ ಕುಲಸಚಿವ ಡಾ. ಜಯಪ್ರಕಾಶ್ ಶೆಟ್ಟಿ, ಡಾ. ಅಮಿತಾ ಹೆಗ್ಡೆ, ಡಾ.ಸಂದೀಪ್, ಡಾ. ಹರೀಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.
ಸೌಜನ್ಯ ಕಾರ್ಯಕ್ರಮ ನಿರೂಪಿಸಿದರು. ಡಾ. ದೀಪಾ ಶಿರೋಡ್ಕರ್ ಸಪ್ತಾಹ ದ ಗುರಿ ಹಾಗೂ ಉದ್ದೇಶ ಗಳನ್ನು ನೀಡಿದರು. ಪೀಡಿಯಾಟ್ರಿಕ್ಸ್ ವಿಭಾಗ ಮುಖ್ಯಸ್ಥೆ ಡಾ. ವಿಜಯ ಶೆಣೈ ವಂದಿಸಿದರು.