ಭಾರೀ ಗಾಳಿ ಮಳೆ : ಧರೆಗುರುಳಿದ ಮರಗಳು
ಬಂಟ್ವಾಳ, ಆ. 3: ಮಾರ್ಣಬೈಲು-ಕಬಕ ಸಂಪರ್ಕಿಸುವ ರಾಜ್ಯ ಹೆದ್ದಾರಿ ಕೊಳ್ನಾಡು ಗ್ರಾಮದ ಕರೈ ಕಾಡುಮಠ ಸೇತುವೆಯ ಬಳಿ ಗುರುವಾರ ಸಂಜೆ ಬೀಸಿದ ಭಾರೀ ಗಾಳಿಗೆ ಬೃಹತ್ ಮರಗಳೆರಡು ರಸ್ತೆಗುರುಳಿ ಸಂಚಾರ ಅಸ್ತವ್ಯಸ್ತ ಉಂಟಾಯಿತು.
ರಸ್ತೆ ಬದಿಯಿದ್ದ ಬೃಹತ್ ಹಲಸಿನ ಮರ ಹಾಗೂ ದೇವಾದಾರ ಮರಗಳು ರಸ್ತೆಗೆ ಉರುಳಿದ್ದು, ಈ ಪರಿಣಾಮ ಎಚ್‍ಎಟ್ ಲೈನ್ ಕಡಿದು ಬಿದ್ದಿದೆ. ವಿದ್ಯುತ್ ಕಂಬ ಕೂಡ ತುಂಡರಿಸಿದೆ. ಹೆದ್ದಾರಿಯಲ್ಲಿ ಲೈನ್ ತುಂಡಾಗಿ ಬಿದ್ದಿದ್ದರಿಂದ ಜನ ಸಂಚಾರಕ್ಕೆ ಅಡ್ಡಿಯಾಯಿತು. ಘಟನೆಯ ಬೆನ್ನಲ್ಲೇ ಜಮಾಯಿಸಿದ ಸ್ಥಳೀಯ ಯುವಕರು ವಾಹನ ಸಂಚಾರವಾಗದಂತೆ ತಡೆದು ಮುಂಜಾಗೃತಾ ಕ್ರಮ ತೆಗೆದುಕೊಂಡರು.
ಒಂದು ತಾಸಿಗೂ ಅಧಿಕ ಹೊತ್ತು ಟ್ರಾಫಿಕ್ ಜಾಮ್ ಉಂಟಾಯಿತು. ಕೊಳ್ನಾಡು ಕರೈ ಹೆಲ್ಪಿಂಗ್ ಹ್ಯಾಂಡ್ಸ್ ಸದಸ್ಯರು ಘಟನಾ ಸ್ಥಳಕ್ಕೆ ಜಮಾಯಿಸಿದ್ದು, ಸ್ಥಳೀಯ ಯುವಕರನ್ನು ಸೇರಿ ತುರ್ತು ರಕ್ಷಣಾ ಕಾರ್ಯದಲ್ಲಿ ತೊಡಗಿದರು.
ಮೆಸ್ಕಾಂ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಯಿಸಿ ಪರಿಹಾರ ಕ್ರಮ ಕಂಡುಕೊಳ್ಳಲಾಯಿತು. ಮೆಸ್ಕಾಂ ಲೈನ್‍ಮ್ಯಾನ್‍ಗಳ ಕಾರ್ಯಾಚರಣೆ ಬಳಿಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.