×
Ad

ಡಿಕೆಶಿ ಸಂಸ್ಥೆಗಳ ಮೇಲಿನ ದಾಳಿ ಕೇಂದ್ರದ ಪಿತೂರಿ: ಕಾಂಗ್ರೆಸ್

Update: 2017-08-03 21:12 IST

ಉಡುಪಿ, ಆ. 3: ರಾಜ್ಯದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ಮನೆ, ಕಚೇರಿ ಹಾಗೂ ವಿವಿಧ ಸಂಸ್ಥೆಗಳ ಮೇಲೆ ನಡೆದಿರುವ ಆದಾಯ ತೆರಿಗೆ (ಐಟಿ) ದಾಳಿಯ ಹಿಂದೆ ಕೇಂದ್ರ ಸರಕಾರದ ಪಿತೂರಿ ಇದೆ. ರಾಜಕೀಯ ದುರುದ್ದೇಶವಿದೆ ಎಂದು ರಾಜ್ಯ ಅಲ್ಪಸಂಖ್ಯಾತ ನಿಗಮದ ಅಧ್ಯಕ್ಷ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಎಂ.ಎ.ಗಫೂರ್ ಆರೋಪಿಸಿದ್ದಾರೆ.

ಉಡುಪಿಯಲ್ಲಿಂದು ಜಿಲ್ಲಾ ಐಟಿ ಸೆಲ್ ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಕರೆಯಲಾದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ತನ್ನ ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿರುವುದು ಅತ್ಯಂತ ಸ್ಪಷ್ಟವಿದ್ದು, ಇದರಲ್ಲಿ ದೊಡ್ಡ ಷಡ್ಯಂತ್ರವಿದೆ ಎಂದರು.

ಕೇಂದ್ರ ಸರಕಾರ ದುರುಪಯೋಗ ಮಾಡಿಕೊಳ್ಳುತಿತಿದೆ ಎಂದು ರಾಜ್ಯ ಅಲ್ಪಸಂಖ್ಯಾಕ ನಿಗಮದ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಎಂ.ಎ. ಗಫೂರ್ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

 ಮೋದಿ ನೇತೃತ್ವದ ಎನ್‌ಡಿಎ ಸರಕಾರ ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೊಲೆ ನಡೆಸುತ್ತಿದೆ. ದ್ವೇಷದ ರಾಜಕಾರಣವನ್ನು ಮಾಡುತ್ತಿದೆ. ಇದು ಬಿಜೆಪಿಯ ಹತಾಶೆ ಮನೋಭಾವನೆಯನ್ನು ತೋರಿಸುತ್ತದೆ.ಐಟಿ ದಾಳಿ ವೇಳೆ ರಾಜ್ಯ ಪೊಲೀಸರನ್ನು ಬಳಸಿಕೊಳ್ಳುವ ಬದಲು ಕೇಂದ್ರದ ಸಿಆರ್‌ಪಿಎಫ್ ಪಡೆಯನ್ನು ಬಳಸಿಕೊಂಡದ್ದು ಕಾನೂನು ಬಾಹಿರ ಎಂದವರು ನುಡಿದರು.

ಕೇಂದ್ರ ತನ್ನ ರಾಜಕೀಯ ಷಡ್ಯಂತ್ರಕ್ಕೆ ಆದಾಯ ತೆರಿಗೆ ಇಲಾಖೆಯನ್ನು ಬಳಸಿಕೊಂಡಿದೆ. ಇಲಾಖೆಗೆ ದೇಶಾದ್ಯಂತ ಯಾವುದೇ ಭಾಗದಲ್ಲಿ ದಾಳಿ ನಡೆಸಲು ಮುಕ್ತ ಅವಕಾಶವಿದೆ. ದಾಳಿಗೆ ಸಿಆರ್‌ಪಿಎಫ್‌ನ್ನು ಬಳಸಿಕೊಂಡಿರು ವುದನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ ಎಂದರು.

ಬಿಜೆಪಿಯ ಜನಾರ್ದನ ರೆಡ್ಡಿ ತನ್ನ ಮಗಳ ಮದುವೆಗೆ 500 ಕೋ.ರೂ. ಹಣ ಖರ್ಚು ಮಾಡಿದ್ದರೂ ಅಲ್ಲಿಗೆ ಐಟಿ ದಾಳಿ ನಡೆಸುವುದಿಲ್ಲ. ಅದೇ ರೀತಿ ಕೇವಲ ನಾಲ್ಕು ವರ್ಷದಲ್ಲಿ ತನ್ನ ಆಸ್ತಿಯನ್ನು 300 ಪಟ್ಟು ಹೆಚ್ಚಿಸಿಕೊಂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮನೆಯ ಮೇಲೆ ಐಟಿ ದಾಳಿ ನಡೆಸುವುದಿಲ್ಲ. ಆದರೆ ವ್ಯವಸ್ಥಿತ ರೀತಿ ತನ್ನ ಆದಾಯ ತೆರಿಗೆ ಕಟ್ಟಿಕೊಂಡು ಬಂದಿರುವ ಡಿಕೆಶಿ, ಗುಜರಾತಿನ 45 ಶಾಸಕರು ಕರ್ನಾಟಕಕ್ಕೆ ಆಗಮಿಸಿದಾಗ ಅವರಿಗೆ ಆತಿಥ್ಯ ನೀಡಿದ ಕಾರಣ ನೀಡಿ ಅವರ ಮನೆ ಹಾಗೂ ಸಂಸ್ಥೆಗಳ ಮೇಲೆ ಐಟಿ ದಾಳಿ ನಡೆಯುತ್ತದೆ. ಇದು ಬಿಜೆಪಿ ಅನುಸರಿಸುತ್ತಿರುವ ದ್ವೇಷದ ರಾಜಕಾರಣವನ್ನು ತೋರಿಸುತ್ತದೆ ಎಂದರು.

ದೇಶದಲ್ಲಿ ಆಪರೇಷನ್ ಕಮನಕ್ಕೆ ನಾಂದಿ ಹಾಡಿದ್ದೆ ಕರ್ನಾಟಕದಲ್ಲಿ. ಗುಜರಾತಿನಲ್ಲಿ ಕೇವಲ ಒಂದು ರಾಜ್ಯಸಭಾ ಸ್ಥಾನವನ್ನು ಗೆಲ್ಲುವ ಉದ್ದೇಶದಿಂದ ಮೋದಿ ಹಾಗೂ ಷಾ ಕುದುರೆ ವ್ಯಾಪಾರಕ್ಕಿಳಿದಿದ್ದಾರೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದಾಗಿ ಹೇಳಿ ಅಧಿಕಾರ ಹಿಡಿದ ಮೋದಿ ಇಂದು ಭ್ರಷ್ಟಾಚಾರಕ್ಕೆ ಬೆಂಗಾಲಾಗಿ ನಿಂತಿದ್ದಾರೆ ಎಂದವರು ಆರೋಪಿಸಿದರು.

ರಾಜ್ಯದಲ್ಲಿರುವ ಕಾಂಗ್ರೆಸ್‌ನ ಪ್ರಬಲ ನಾಯಕರನ್ನು ಬಗ್ಗುಬಡಿಯಲು ಕೇಂದ್ರ ಐಟಿ ದಾಳಿಯ ಬಲೆಯನ್ನು ಹೆಣೆಯುತ್ತಿದೆ. ಈ ದ್ವೇಷದ ರಾಜಕೀಯಕ್ಕೆ ಕಾಂಗ್ರೆಸ್ ಬಗ್ಗುವುದಿಲ್ಲ. ಕೇಂದ್ರಿಯ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಇಂಥ ದಾಳಿ ನಡೆಸಿದರೆ ಮುಂದೆ ಜನರು ಇವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಗಫೂರ್ ಎಚ್ಚರಿಸಿದರು. ಜಿಲ್ಲಾ ಕಾಂಗ್ರೆಸ್‌ನ ಮಾಹಿತಿ ತಂತ್ರಜ್ಞಾನ ವಿಭಾಗದ ವಿಶ್ವಾಸ್ ಶೆಟ್ಟಿ, ನೀರಜ್ ಪಾಟೀಲ್, ಯುವ ಕಾಂಗ್ರೆಸ್‌ನ ವಿಘ್ನೇಶ್ ಕಿಣಿ, ರಾಘವೇಂದ್ರ ಶೆಟ್ಟಿ ಕರ್ಜೆ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News