ಉಡುಪಿ ಜಿಲ್ಲಾ ಯುವ ಕಾಂಗ್ರೆಸ್‌ನಿಂದ ಪ್ರತಿಭಟನೆ
ಉಡುಪಿ, ಆ. 3: ಕಾಂಗ್ರೆಸ್ ಮುಖಂಡ, ರಾಜ್ಯ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ಮನೆ, ಸಂಸ್ಥೆಗಳ ಮೇಲೆ ನಡೆದಿರುವ ಆದಾಯ ತೆರಿಗೆ (ಐಟಿ) ದಾಳಿಯನ್ನು ಖಂಡಿಸಿ ಉಡುಪಿ ಜಿಲ್ಲಾ ಯುವಕಾಂಗ್ರೆಸ್ ವತಿಯಿಂದ ಗುರುವಾರ ಸಂಜೆ ಉಡುಪಿಯ ಕ್ಲಾಕ್ ಟವರ್ ಬಳಿ ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನಕಾರರು ಕೇಂದ್ರ ಸರಕಾರ, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಉಡುಪಿ ವಿಧಾನಸಭಾ ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷ ಪಿ.ಅಮೃತ್ ಶೆಣೈ, ನಿನ್ನೆ ನಡೆದ ದಾಳಿ ಸ್ಪಷ್ಟವಾಗಿ ರಾಜಕೀಯ ಪ್ರೇರಿತವಾಗಿದ್ದು, ಆದಾಯ ಇಲಾಖೆಯ ಮೂಲಕ ಡಿಕೆಶಿಯವರನ್ನು ಬೆದರಿಸುವ ತಂತ್ರವಾಗಿದೆ. ದೇಶದ ಎರಡನೇ ಶ್ರೀಮಂತ ಜನಪ್ರತಿನಿಧಿ ಎನಿಸಿರುವ ಅವರು, ಆದಾಯ ತೆರಿಗೆಯನ್ನು ಕ್ಲಪ್ತವಾಗಿ ಪಾವತಿಸುತಿದ್ದರೂ ಈ ದಾಳಿ ನಡೆದಿದೆ ಎಂದರು.
ಇತ್ತೀಚಿನ ಕೆಲ ಸಮಯದಿಂದ ಆದಾಯ ತೆರಿಗೆ ಇಲಾಖೆ ಎಂಬುದು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಷಾರ ಕೈಗೊಂಬೆ ಯಾಗಿದೆ. ಬೆಂಗಳೂರಿನಲ್ಲಿರುವ ಗುಜರಾತಿ ಕಾಂಗ್ರೆಸ್ ಶಾಸಕರ ಮನಸ್ಸಿನಲ್ಲಿ ಹೆದರಿಕೆಯನ್ನು ಹುಟ್ಟಿಸುವ ಉದ್ದೇಶವನ್ನು ಅದು ಹೊಂದಿದೆ. ಈ ಶಾಸಕರ ಆತಿಥೇಯನಾಗಿರುವ ಡಿಕೆಶಿಯನ್ನು ಗುರಿ ಇರಿಸಿ ಈ ದಾಳಿ ನಡೆದಿದೆ ಎಂದು ಅಮೃತ ಶೆಣೈ ನುಡಿದರು.
ಪ್ರತಿಭಟನೆಯಲ್ಲಿ ಯುವಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಶ್ವಾಸ್ ವಿ. ಅಮೀನ್, ರಾಜ್ಯ ಅಲ್ಪಸಂಖ್ಯಾಕ ನಿಗಮದ ಅಧ್ಯಕ್ಷ ಎಂ.ಎ. ಗಫೂರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನರಸಿಂಹಮೂರ್ತಿ, ಜಿಲ್ಲಾ ವಕ್ತಾರ ಭಾಸ್ಕರ್ ರಾವ್ ಕಿದಿಯೂರು, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ಇಂಟಕ್ ಜಿಲ್ಲಾಧ್ಯಕ್ಷ ಗಣೇಶ್ ಎನ್. ಕೋಟ್ಯಾನ್ ಪಡುಬಿದ್ರಿ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಜೆ. ಶೆಟ್ಟಿ, ಉಡುಪಿ ನಗರಸಭೆ ಸದಸ್ಯರಾದ ಕೆ. ಜನಾರ್ದನ ಭಂಡಾರ್ಕರ್, ರಮೇಶ್ ಕಾಂಚನ್, ಗಣೇಶ್ ನೆರ್ಗಿ, ನಾರಾಯಣ ಕುಂದರ್, ಮಹಿಳಾ ಮುಂದಾಳುಗಳಾದ ವೆರೋನಿಕಾ ಕರ್ನೇಲಿಯೋ, ಡಾ. ಸುನೀತಾ ಶೆಟ್ಟಿ, ಜ್ಯೋತಿ ಹೆಬ್ಬಾರ್, ಚಂದ್ರಿಕಾ ಶೆಟ್ಟಿ, ಮುಖಂಡರಾದ ಉದ್ಯಾವರ ನಾಗೇಶ್ ಕುಮಾರ್, ಹರೀಶ್ ಕಿಣಿ ಅಲೆವೂರು, ಎಂ.ಪಿ. ಮೊದಿನಬ್ಬ, ಕಿಶನ್ ಹೆಗ್ಡೆ ಕೊಳ್ಕೆಬೈಲು, ದಿನೇಶ್ ಪುತ್ರನ್, ದಿವಾಕರ ಕುಂದರ್, ಮುರಲಿ ಶೆಟ್ಟಿ ಇಂದ್ರಾಳಿ, ಅಶೋಕ್ ಕುಮಾರ್ ಕೊಡವೂರು, ಪ್ರಖ್ಯಾತ್ ಶೆಟ್ಟಿ, ಕೀರ್ತಿ ಶೆಟ್ಟಿ, ಯತೀಶ್ ಕರ್ಕೇರ, ದೀಪಕ್ ಕುಮಾರ್ ಎರ್ಮಾಳು, ಪ್ರಶಾಂತ್ ಪೂಜಾರಿ, ಹಬೀಬ್ ಆಲಿ, ಮೆಲ್ವಿನ್, ಪ್ರಭಾಕರ ಆಚಾರ್ಯ, ಹಸನ್ ಅಜ್ಜರಕಾಡು, ಇಮ್ರಾನ್, ರಿಯಾಜ್ ಪಳ್ಳಿ ಪಾಲ್ಗೊಂಡಿದ್ದರು.