ಗ್ಯಾಸ್ ಪೈಪ್‌ಲೈನ್ ಕಾಮಗಾರಿ ಮುಂದುವರಿಕೆ ವಿಚಾರ : ಸಂತ್ರಸ್ತರ ಸಭೆ
ಮಂಗಳೂರು,ಆ.3: ಕೇರಳದಿಂದ ಮಂಗಳೂರಿನ ಎಂಸಿಎಫ್ ವರೆಗೆ ಅಳವಡಿಸಲಿರುವ ಗೇಲ್ ಕಂಪೆನಿಯ ಗ್ಯಾಸ್ ಪೈಪ್‌ಲೈನ್ ಕಾಮಗಾರಿ ಮುಂದುವರಿಸುವ ಬಗ್ಗೆ ನಗರದ ಪುರಭವನದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಗುರುವಾರ ಸಂತ್ರಸ್ತರ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರ್, ಪೈಪ್‌ಲೈನ್ ಹಾದು ಹೋಗಲು ನಡೆಸಿದ ಜಾಗದ ಸರ್ವೆಯಲ್ಲಿ ಇದರಲ್ಲಿ ಅನೇಕ ಬಡ ಕುಟುಂಬದ ಜಾಗ ಸ್ವಾಧೀನವಾಗಲಿದೆ. ಇದರಿಂದ ಕುಟುಂಬಗಳು ಬೀದಿಗೆ ಬರುವ ಭೀತಿ ಎದುರಾಗಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ರಾಷ್ಟ್ರೀಯ ಹೆದ್ದಾರಿ ಡಿವೈಡರ್ ಅಥವಾ ಸಮುದ್ರ ಕಿನಾರೆಯಲ್ಲಿ ಪೈಪ್‌ಲೈನ್ ಹಾಕಲು ಅವಕಾಶ ಇದೆ. ಅಲ್ಲಿ ಅಳವಡಿಸಿದರೆ, ಯಾರಿಗೂ ತೊಂದರೆಯಾಗದು ಎಂದು ಅವರು ಸಲಹೆ ನೀಡಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಅಥವಾ ಕಡಲ ತೀರದಲ್ಲಿ ಪೈಪ್‌ಲೈನ್ ಹಾಕಿ ಎಂದು ಸಂತ್ರಸ್ತರು ಆಗ್ರಹಿಸಿದ್ದಾರೆ. ಈ ಬಗ್ಗೆ ದೇಶದ ಎಲ್ಲಾದರೂ ಈ ರೀತಿಯಲ್ಲಿ ಪೈಪ್‌ಲೈನ್ ಅಳವಡಿಸಿದ ಉದಾಹರಣೆ ಇದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ಸಭೆ ಒಳಗಡೆ ವರದಿ ನೀಡಿ ಎಂದು ಗೇಲ್ ಕಂಪನಿಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್ ಸೂಚನೆ ನೀಡಿದರು.
ಸಭೆಯ ಬಗ್ಗೆ ಹೆಚ್ಚಿನವರಿಗೆ ನೋಟಿಸ್ ತಲುಪದಿರುವುದರಿಂದ ಸಭೆ ಮುಂದುವರಿಸಿ ಅರ್ಥವಿಲ್ಲ. ಆದ್ದರಿಂದ ಎಲ್ಲರಿಗೂ ನೋಟಿಸ್ ನೀಡಿ ಮತ್ತೊಮ್ಮೆ ಸಭೆ ಕರೆಯಿರಿ ಎಂದು ಜಿಲ್ಲಾಧಿಕಾರಿಯವರು ಅಧಿಕಾರಿಗಳಿಗೆ ತಿಳಿಸಿದರು.
ಗೇಲ್ ಕಂಪನಿಯ ಮುಖ್ಯ ಪ್ರಬಂಧಕ ಅಶೋಕ್ ಮಾತನಾಡಿ, ಕೇರಳದ ಕೊಚ್ಚಿನ್‌ನಿಂದ ಮಂಗಳೂರು ವರೆಗೆ ಒಟ್ಟು 435 ಕಿಲೋ ಮೀಟರ್ ಉದ್ದ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ನಡೆಯಲಿದೆ. ಕೇರಳದಲ್ಲಿ ಹಲವು ವಿರೋಧದ ಹಿನ್ನೆಲೆಯಲ್ಲಿ 2012ರಿಂದ 2016ರ ವರೆಗೆ ಕಾಮಗಾರಿ ಸ್ಥಗಿತಗೊಂಡಿತ್ತು ಎಂದರು.