ಆಳ್ವಾಸ್ ವಿರೋಧಿ ಅಪಪ್ರಚಾರವನ್ನು ನಾಗರಿಕರು ಖಂಡಿಸಬೇಕು: ಶಾಸಕ ಅಭಯಚಂದ್ರ ಜೈನ್
ಮೂಡುಬಿದಿರೆ, ಆ.3: ವಿದ್ಯಾರ್ಥಿನಿ ಕಾವ್ಯಾ ಕುಟುಂಬದ ನೋವಿಗೆ ನಾವು ಸ್ಪಂದಿಸಬೇಕು. ತನಿಖೆಯಲ್ಲಿ ತಪ್ಪಿತಸ್ಥರೆಂದು ಕಂಡುಬಂದವರಿಗೆ ಶಿಕ್ಷೆಯಾಗಬೇಕು. ಆದರೆ ಉನ್ನತ ಮಟ್ಟದ ಶಿಕ್ಷಣ ನೀಡುವುದರ ಮೂಲಕ ಮೂಡುಬಿದಿರೆಯನ್ನು ಮಾದರಿ ಶಿಕ್ಷಣ ಕೇಂದ್ರವನ್ನಾಗಿಸಿದ ಡಾ.ಎಂ. ಮೋಹನ ಆಳ್ವ ಹಾಗೂ ಆಳ್ವಾಸ್ ಸಂಸ್ಥೆಯ ವಿರುದ್ಧ ಅಪಪ್ರಚಾರ ಮಾಡುವುದನ್ನು ಖಂಡಿಸಬೇಕು ಎಂದು ಶಾಸಕ ಅಭಯಚಂದ್ರ ಜೈನ್ ಹೇಳಿದ್ದಾರೆ.
ಮೂಡುಬಿದಿರೆ ಕಲ್ಪವೃಕ್ಷ ಸಭಾಂಗಣದಲ್ಲಿ ಗುರುವಾರ ಸಂಜೆ ಡಾ.ಎಂ. ಮೋಹನ ಆಳ್ವ ಅವರ ಅಭಿಮಾನಿಗಳು ನಡೆಸಿದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಸಹಸ್ರಾರು ಜನರು ಆಳ್ವಾಸ್ ಸಂಸ್ಥೆಯ ಬಗ್ಗೆ ಅಪಾರ ಗೌರವವನ್ನಿಟ್ಟುಕೊಂಡಿದ್ದಾರೆ. ಇದರ ಬಗ್ಗೆ ಸರಿಯಾದ ಪರಿಜ್ಞಾನವಿಲ್ಲದ ದೃಶ್ಯ ಮಾಧ್ಯಮಗಳು ಅಪಪ್ರಚಾರ ನಡೆಸಿವೆ. ಮಾಧ್ಯಮಗಳನ್ನು ಎಚ್ಚರಿಸುವ ಕೆಲಸ ಜನರಿಂದಾಗಬೇಕು ಎಂದರು.
ಹೋರಾಟದ ನೇತೃತ್ವ ವಹಿಸಿರುವ ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಮಾತನಾಡಿ, ಕಾವ್ಯಾ ಕುಟುಂಬಕ್ಕೆ ನ್ಯಾಯ ಒದಗಿಸುವುದು ಎಲ್ಲರ ಕರ್ತವ್ಯ. ಅದಕ್ಕಾಗಿ ಡಾ.ಎಂ. ಮೋಹನ ಆಳ್ವ ಅವರು ಕೂಡ ತನಿಖೆಗೆ ಸಹಕರಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ಆಳ್ವಾಸ್ ಸಂಸ್ಥೆಯ ಬಗ್ಗೆ ನಿರಂತರ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ. ಮೂಡುಬಿದಿರೆಯ ಹೆಸರಿಗೆ ಚ್ಯುತಿ ಬರುವಂತೆ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಬೃಹತ್ ಹೋರಾಟವನ್ನು ಹಮ್ಮಿಕೊಂಡಿದ್ದೇವೆ. ಶಿಕ್ಷಣ ಕ್ರಾಂತಿಯ ಮೂಲಕ 30 ವರ್ಷಗಳಿಂದ ಮೂಡುಬಿದಿರೆಯ ಸಮಗ್ರ ಅಭಿವೃದ್ಧಿಗೆ ಕಾರಣೀಕರ್ತರಾದ ಡಾ.ಎಂ ಮೋಹನ ಆಳ್ವರಿಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಸೇರುವ ನಂಬಿಕೆಯಿದೆ ಎಂದು ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಸಂಸ್ಥೆಯ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ವಿರುದ್ಧ ನಡೆಯುತ್ತಿರುವ ತೇಜೋವಧೆಯನ್ನು ವಿರೋಧಿಸಿ ಆಗಸ್ಟ್ 12ರಂದು ಮೂಡುಬಿದಿರೆ ಪದ್ಮಾವತಿ ಕಲಾಮಂದಿರದಲ್ಲಿ ಬೃಹತ್ ಸಭೆಯನ್ನು ಹಮ್ಮಿಕೊಳ್ಳಲಾಗುವುದೆಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯಲ್ಲಿ ಚೌಟರ ಅರಮನೆಯ ಕುಲದೀಪ್ ಎಂ., ಕೃಷಿ ತಜ್ಞ ಡಾ.ಎಲ್.ಸಿ ಸೋನ್ಸ್, ನಮ್ಮ ಕುಡ್ಲ ವಾಹಿನಿಯ ಮುಖ್ಯಸ್ಥ ನೀಲಾಕ್ಷ ಕರ್ಕೇರ, ಮಂಗಳೂರು ಎಪಿಎಂಸಿ ಸದಸ್ಯ ಕೃಷ್ಣರಾಜ ಹೆಗ್ಡೆ, ಅಬುಲ್ ಅಲಾ ಪುತ್ತಿಗೆ, ನವನೀತ್ ಶೆಟ್ಟಿ ಕದ್ರಿ, ಪ್ರಗತಿಪರ ಕೃಷಿಕ ಶಿಮುಂಜೆಗುತ್ತು ಸಂಪತ್ ಸಾಮ್ರಾಜ್ಯ, ಉದ್ಯಮಿಗಳಾದ ಶ್ರೀಪತಿ ಭಟ್ ನಾರಾಯಣ ಪಿ.ಎಂ. ಉಪಸ್ಥಿತರಿದ್ದರು.
ಅಶ್ವಿನ್ ಪಿರೇರಾ ಕಾರ್ಯಕ್ರಮ ನಿರೂಪಿಸಿದರು. ದಿವಾಕರ ಶೆಟ್ಟಿ ವಂದಿಸಿದರು.
ನಿವೃತ್ತ ಸೈನಿಕರ ಬೆಂಬಲ: ಆಳ್ವಾಸ್ ತೇಜೋವಧೆಯನ್ನು ಖಂಡಿಸಿ ನಡೆಯಲಿರುವ ಹೋರಾಟಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ನಿವೃತ್ತ ಸೈನಿಕರ ಸಂಘ ಬೆಂಬಲವನ್ನು ಸೂಚಿಸಿದೆ.