×
Ad

ಐಟಿ ದಾಳಿ ಇನ್ನಷ್ಟು ಮುಂದುವರಿಯಲಿ: ಬಿಜೆಪಿ

Update: 2017-08-04 17:46 IST

ಮಂಗಳೂರು, ಆ.4:ಆದಾಯ ತೆರಿಗೆ ಇಲಾಖೆ ರಾಜ್ಯದ ಎಲ್ಲಾ ಭ್ರಷ್ಟರ ಪಟ್ಟಿ ಮಾಡಿ ದಾಳಿ ನಡೆಸುವ ಮೂಲಕ ಕರ್ನಾಟಕವನ್ನು ಭ್ರಷ್ಟಾಚಾರ ಮುಕ್ತವಾಗಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು ಒತ್ತಾಯಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮನೆ ಮೇಲೆ ದಾಳಿಯಾದಾಗ ಮುಖ್ಯಮಂತ್ರಿಗಳು ತನಿಖೆಗೆ ಪೂರ್ಣ ಸಹಕಾರ ನೀಡಬೇಕಿತ್ತು. ತಾವು ನಿಷ್ಕಳಂಕರು ಎಂದು ಸಾಬೀತು ಮಾಡಬೇಕಿತ್ತು. ಆದರೆ ಅವರು ಆ ಕೆಲಸ ಮಾಡಿಲ್ಲ ಎಂದು ಟೀಕಿಸಿದರು.

ಕ್ಯಾಬಿನೆಟ್ ಸಚಿವರೇ ಜೈಲಿಗೆ ಹೋಗುವ ಸ್ಥಿತಿ ನಿರ್ಮಾಣವಾಗಿರುವುದು ವಿಪರ್ಯಾಸ. ಡಿಕೆಶಿ ಮನೆ ಮೇಲೆ ದಾಳಿಯಾದಾಗ ಕಾಂಗ್ರೆಸ್ ಕಾರ್ಯಕರ್ತರು ಐಟಿ ಸಂಸ್ಥೆಯ ಮೇಲೆಯೇ ದಾಳಿ ನಡೆಸಿ ಸೊತ್ತು ನಾಶ ಮಾಡಿದ್ದಾರೆ. ಈ ರೀತಿ ಗೂಂಡಾಗಿರಿ ಪ್ರದರ್ಶಿಸಿರುವುದು ಖಂಡನೀಯ. ರಾಜ್ಯದ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರಿಗೆ ಜನರ ಹಿತಾಸಕ್ತಿ ಬೇಕಿಲ್ಲ ಎಂದು ಸಂಜೀವ ಮಠಂದೂರು ದೂರಿದರು.

ರಾಜ್ಯದಲ್ಲಿ ಈ ಹಿಂದೆಯೂ ಆದಾಯ ತೆರಿಗೆ ಇಲಾಖೆಯಿಂದ ದಾಳಿಗಳು ಆಗಿದ್ದವು.ಆದರೆ ಆ ಸಂಸ್ಥೆಯ ವಿರುದ್ಧವೇ ಬಿಜೆಪಿ ತಿರುಗಿ ಬಿದ್ದದ್ದಿಲ್ಲ. ತನಿಖೆಗೆ ಪೂರ್ಣ ಸಹಕಾರ ನೀಡಿತ್ತು. ಆದರೆ ಈಗ ಕಾಂಗ್ರೆಸ್‌ನವರು ಗೂಂಡಾಗಿರಿ ಪ್ರವೃತ್ತಿಯನ್ನು ಪ್ರದರ್ಶಿಸುತ್ತಿದ್ದಾರೆ. ತಮ್ಮ ಲೋಪವನ್ನು ಮುಚ್ಚಿಟ್ಟು ಬಿಜೆಪಿ ಕುಮ್ಮಕ್ಕಿನಿಂದ ದಾಳಿ ನಡೆಯುತ್ತಿದೆ ಎನ್ನುವುದರಲ್ಲಿ ಅರ್ಥವಿಲ್ಲ. ತೆರಿಗೆ ಇಲಾಖೆ ಸ್ವತಂತ್ರ ಸಂಸ್ಥೆ ಸೂಕ್ತ ದಾಖಲೆ ಸಂಗ್ರಹಿಸಿಯೇ ಅದು ದಾಳಿ ನಡೆಸುತ್ತದೆ ಎಂದವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ರವಿಶಂಕರ ಮಿಜಾರ್, ಕಿಶೋರ್ ರೈ, ಸುರೇಶ್ ಆಳ್ವ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News