ಪಿಯುಸಿ ವಿದ್ಯಾರ್ಥಿಯನ್ನು ಇರಿದು ಕೊಂದ ಸಹಪಾಠಿ

Update: 2017-08-04 14:30 GMT

ಭೋಪಾಲ, ಆ.4: 17ರ ಹರೆಯದ ವಿದ್ಯಾರ್ಥಿಯೋರ್ವನನ್ನು ಆತನ ಸಹಪಾಠಿಯೇ ಶಾಲೆಯ ಎದುರು ಇರಿದು ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದ ಖಜುರಾಹೊದಲ್ಲಿ ನಡೆದಿದೆ. ಕೆಲ ದಿನಗಳ ಹಿಂದೆ ಇವರಿಬ್ಬರೊಳಗೆ ನಡೆದ ಮಾತಿನ ಚಕಮಕಿ ಈ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಖಜುರಾಹೊ ಬಳಿಕ ಬಸ್ತಿ ಚೌರಾಹ ಎಂಬಲ್ಲಿರುವ ಸರಕಾರಿ ಪಿಯು ಕಾಲೇಜಿನಲ್ಲಿ ಈ ಘಟನೆ ನಡೆದಿದೆ.

ಕೆಲವು ದಿನಗಳ ಹಿಂದೆ ಪಿಯುಸಿ ವಿದ್ಯಾರ್ಥಿಗಳ ಮಧ್ಯೆ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಶಾಲೆಯ ಎದುರುಗಡೆ ವಿದ್ಯಾರ್ಥಿಯೋರ್ವನನ್ನು ಇನ್ನೊಬ್ಬ ವಿದ್ಯಾರ್ಥಿ ಚಾಕುವಿನಿಂದ ಇರಿದಿದ್ದಾನೆ. ಗಂಭೀರ ಗಾಯಗೊಂಡ ಈತನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಆತ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದ್ದು ಇವರಲ್ಲಿ ಒಬ್ಬ ಅಪ್ರಾಪ್ತ ವಯಸ್ಸಿನ ಹುಡುಗ ಎಂದು ಪೊಲೀಸರು ತಿಳಿಸಿದ್ದಾರೆ.

 ಈ ಮಧ್ಯೆ, ಮೃತಪಟ್ಟ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ ಸಂದರ್ಭ ಅಲ್ಲಿ ವೈದ್ಯರು ಕರ್ತವ್ಯದಲ್ಲಿ ಇರದ ಕಾರಣ ಆಕ್ರೋಶಗೊಂಡ ಪೋಷಕರು ಆಸ್ಪತ್ರೆಯ ಕೆಲವು ವಸ್ತುಗಳಿಗೆ ಹಾನಿ ಎಸಗಿದ್ದಾರೆ ಎನ್ನಲಾಗಿದೆ . ಈ ಸಂದರ್ಭ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ . ಮರಣೋತ್ತರ ಪರೀಕ್ಷೆಯ ಬಳಿಕ ಬಾಲಕನ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಬಮ್ನೋರಾ ಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News