×
Ad

ರಾಹುಲ್ ಗಾಂಧಿ ಕಾರಿನ ಮೇಲೆ ದಾಳಿ

Update: 2017-08-04 20:10 IST

ಅಹ್ಮದಾಬಾದ್, ಆ. 4: ಉತ್ತರ ಗುಜರಾತ್‌ನ ನೆರೆಪೀಡಿತ ಬನಸ್ಕಂತ ಜಿಲ್ಲೆಗೆ ಶುಕ್ರವಾರ ಭೇಟಿ ನೀಡಿ ಹಿಂದಿರುಗುತ್ತಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದೆ. ಆದರೆ, ರಾಹುಲ್ ಗಾಂಧಿ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ.

ರಾಹುಲ್ ಗಾಂಧಿ ಉತ್ತರ ಗುಜರಾತ್‌ನ ನೆರಪೀಡಿತ ಪ್ರದೇಶಗಳ ಒಂದು ದಿನದ ಭೇಟಿಗೆ ಶುಕ್ರವಾರ ಆಗಮಿಸಿದ್ದರು. ಅವರು ಬನಸ್ಕಾಂತ ಜಿಲ್ಲೆಯ ಧಾನೇರಾದ ಲಾಲ್‌ಚೌಕ್‌ಗೆ ಆಗಮಿಸಿದರು. ಆದರೆ, ಅಲ್ಲಿ ಜಮಾಯಿಸಿದ ಜನರು ಅವರ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿದರು ಹಾಗೂ ಪ್ರಧಾನಿ ಮೋದಿ ಪರವಾಗಿ ಘೋಷಣೆಗಳನ್ನು ಕೂಗಿದರು. ಆದರೂ ರಾಹುಲ್ ಗಾಂಧಿ ಲಾಲ್‌ಚೌಕ್ ದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಆದರೆ, ಸಾರ್ವಜನಿಕರು ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭ ಪೊಲೀಸರು ಲಾಠಿ ಚಾರ್ಜ್ ನಡೆಸಿ ಜನರನ್ನು ಚದುರಿಸಿದರು.

 ಅಲ್ಲಿಂದ ರಾಹುಲ್ ಗಾಂಧಿ ಅವರು ತೆರಳಿದಾಗ ಅವರ ಕಾರು ಹಾಗೂ ಬೆಂಗಾವಲು ವಾಹನದ ಮೇಲೆ ಸಾರ್ವಜನಿಕರು ನೀರಿನ ಬಾಟಲಿಗಳನ್ನು ಎಸೆದರು. ಅಲ್ಲಿಂದ ಮುಂದುವರಿದು ಅವರು ಧಾನೇರಾ ಹೆಲಿಪ್ಯಾಡ್‌ನತ್ತ ಕಾರಿನಲ್ಲಿ ತೆರಳುತ್ತಿದ್ದಾಗ ಸಾರ್ವಜನಿಕರು ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಅವರ ಕಾರಿನ ಕಿಟಕಿಯ ಗಾಜು ಪುಡಿಯಾಗಿದೆ.

 ಧಾನೇರಾದಲ್ಲಿರುವ ಹೆಲಿಪ್ಯಾಡ್‌ಗೆ ರಾಹುಲ್ ಗಾಂಧಿ ಅವರು ಸಂಚರಿಸುತ್ತಿದ್ದಾಗ ಅವರ ಕಾರಿನ ಮೇಲೆ ಕೆಲವರು ಕಲ್ಲು ತೂರಾಟ ನಡೆಸಿದರು. ಇದರಿಂದ ಅವರ ಕಾರಿನ ಗಾಜುಗಳ ಪುಡಿಯಾಗಿವೆ. ಈ ಘಟನೆಗೆ ಸಂಬಂಧಿಸಿ ನಾವು ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ಬಾನಸ್ಕಾಂತನ ಪೊಲೀಸ್ ಅಧೀಕ್ಷಕ ನೀರಜ್ ಬಡ್ಗುಜಾರ್ ತಿಳಿಸಿದ್ದಾರೆ.

ಬಿಜಿಪಿ ಗೂಂಡಾಗಳ ಕೃತ್ಯ: ಸಿಂಘ್ವಿ

ರಾಹುಲ್ ಗಾಂಧಿ ಅವರ ಮೇಲೆ ನಡೆದ ದಾಳಿಯ ಹಿಂದೆ ಬಿಜೆಪಿಯ ಗೂಂಡಾಗಳು ಇದ್ದಾರೆ. ದಾಳಿಯಿಂದ ಹಲವು ಬೆಂಗಾವಲು ವಾಹನಗಳಿಗೆ ಹಾನಿಯಾಗಿದೆ. ಕಿಟಕಿ ಗಾಜುಗಳು ಪುಡಿಯಾಗಿವೆ. ಭದ್ರತಾ ಸಿಬಂದಿಗಳಿಗೆ ಗಾಯಗಳಾಗಿವೆ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಹೇಳಿದ್ದಾರೆ. ಗುಜರಾತ್, ಲಾಲ್‌ಚೌಕ್, ಧಾನೇರಾ, ಬನಸ್ಕಾಂತ್‌ನಲ್ಲಿ ರಾಹುಲ್ ಗಾಂಧಿ ಅವರ ಕಾರಿನ ಮೇಲೆ ಬಿಜೆಪಿ ಗೂಂಡಾಗಳು ದಾಳಿ ನಡೆಸಿದ್ದಾರೆ. ಇದು ಅಸಹ್ಯ ಹಾಗೂ ಅವಮಾನಕರ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸೂರಜ್‌ವಾಲಾ ಟ್ವೀಟ್ ಮಾಡಿದ್ದಾರೆ.

ಬಿಜೆಪಿ ಗೂಂಡಾಗಳ ಸಂಘಟಿತ ದಾಳಿಯಿಂದ ರಾಹುಲ್ ಗಾಂಧಿ ಅವರ ಕಾರಿನ ಕಿಟಕಿ ಗಾಜು ಪುಡಿಯಾಗಿದೆ. ಭದ್ರತಾ ಸಿಬಂದಿಗಳು ಗಾಯಗೊಂಡಿದ್ದಾರೆ. ಸತ್ಯವನ್ನು ವೌನವಾಗಿರಿಸಲು ಸಾಧ್ಯವಿಲ್ಲ ಎಂಬುದನ್ನು ಬಿಜೆಪಿ ಅರಿತುಕೊಳ್ಳಲಿ.

ಗುಲಾಂ ನಬಿ ಆಜಾದ್

ಬಿಜೆಪಿಯ ಹಿಂಸಾಚಾರದ ಸಂಸ್ಕೃತಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ವಿಧಾನ ಸಭೆ ಚುನಾವಣೆ ಮುನ್ನ ಗುಜರಾದ್‌ನಲ್ಲಿ ಭೀತಿಯ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ಬಿಜೆಪಿ ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಿದೆ.

ಗುಜರಾತ್ ಉಪ ಮುಖ್ಯಮಂತ್ರಿ ನಿತೀನ್ ಭಾ ಪಟೇಲ್

ನಾವು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಆದರೆ, ಕಾಂಗ್ರೆಸ್ ಶಾಸಕರು ಬೆಂಗಳೂರು ರೆಸಾರ್ಟ್‌ನಲ್ಲಿ ಇದ್ದಾರೆ. ಅದಕ್ಕಾಗಿ ಈ ಪ್ರತಿಭಟನೆ ನಡೆದಿರಬಹುದು. ಎಲ್ಲ ನಾಯಕರಿಗೆ ಹೇಳುವಂತೆ ರಾಹುಲ್ ಗಾಂಧಿ ಅವರಿಗೆ ಕೂಡ ಬುಲೆಟ್ ಪ್ರೂಪ್ ಕಾರಲ್ಲಿ ಪ್ರಯಾಣಿಸುವಂತೆ ರಾಜ್ಯ ಸರಕಾರ ತಿಳಿಸಿತ್ತು. ಆದರೆ, ಅರು ಸಾಮಾನ್ಯ ಕಾರಿನಲ್ಲಿ ಪ್ರಯಾಣಿಸಲು ಬಯಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News