‘ಮೀನುಗಾರಿಕೆಗೆ ಸಣ್ಣ ಗಾತ್ರದ ಬಲೆ, ರಾತ್ರಿ ಬೆಳಕಿನ ಬಳಕೆ ನಿಷೇಧಿಸಿ’
ಉಡುಪಿ, ಆ.4: ಭವಿಷ್ಯದ ಕುರಿತು ಚಿಂತನೆ ನಡೆಸದೇ, ಬೇಕಾಬಿಟ್ಟಿಯಾಗಿ ಮೀನುಗಾರಿಕೆ ನಡೆಸಿದ ಪರಿಣಾಮವಾಗಿ ಇಂದು ರಾಜ್ಯ ಕರಾವಳಿಯಲ್ಲಿ ‘ಮತ್ಸಕ್ಷಾಮ’ ಕಾಣಿಸಿಕೊಂಡಿದ್ದು, ಈ ಹಿನ್ನೆಡೆಯಿಂದ ಪಾರಾಗಲು ಮಲ್ಪೆಯ ಫಿಶರ್‌ಮನ್ಸ್ ಡೀಪ್ ಸೀ ಟ್ರಾಲ್ ಬೋಟ್ ಅಸೋಸಿಯೇಷನ್ ಇತ್ತೀಚೆಗೆ ತನ್ನ ಒಂದು ಸಾವಿರಕ್ಕೂ ಅಧಿಕ ಸದಸ್ಯರ ಸಭೆಯಲ್ಲಿ ಚರ್ಚಿಸಿ ಕೆಲವು ನಿರ್ಣಯಗಳನ್ನು ಕೈಗೊಂಡಿದ್ದು, ಸರಕಾರದ ನೆರವಿನಿಂದ ಇದನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸಬೇಕಾಗಿದೆ ಎಂದು ಸಂಘದ ಅಧ್ಯಕ್ಷ ಕಿಶೋರ್ ಡಿ.ಸುವರ್ಣ ಹೇಳಿದ್ದಾರೆ.
ಶುಕ್ರವಾರ ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಟ್ಯಾಂತರ ಜನರಿಗೆ ಉದ್ಯೋಗ ನೀಡುವ ಸಮುದ್ರ ಮೀನುಗಾರಿಕೆ, ದೇಶದ ಅಭಿವೃದ್ಧಿಯಲ್ಲಿ ತನ್ನದೇ ಆದ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ದೇಶದ ರಫ್ತು ವ್ಯಾಪಾರದಲ್ಲಿ ಹಾಗೂ ವಿದೇಶಿ ವಿನಿಮಯ ಗಳಿಕೆಯಲ್ಲಿ ಮೀನುಗಾರಿಕೆ ಮಹತ್ವದ ಪಾತ್ರ ವಹಿಸುತ್ತಿದೆ ಎಂದರು.
ಹೆಚ್ಚು ಮೀನು ಹಿಡಿದು ಹೆಚ್ಚು ಹಣ ಸಂಪಾದಿಸುವ ಹಪಹಪಿಕೆಯಿಂದ ಕೆಲವರು ಅತೀ ಸಣ್ಣ ಗಾತ್ರದ ಬಲೆಯ ಉಪಯೋಗ, ಹೈವೊಲ್ಟೇಜಿನ ದೀಪ ಹಾಕಿ ರಾತ್ರಿ ದೀಪದ ಬೆಳಕಿನಲ್ಲಿ ಮೀನುಗಾರಿಕೆ ನಡೆಸುವುದು, ಬುಲ್‌ಟ್ರಾಲ್ ಮೀನುಗಾರಿಕೆ, ಅವೈಜ್ಞಾನಿಕ ವಿನಾಶಕಾರಿ ಮೀನುಗಾರಿಕೆ, ಸರಕಾರದ ಕಟ್ಟುನಿಟ್ಟಿನ ಕಾನೂನಿನ ಕೊರತೆ, ವೈಜ್ಞಾನಿಕ ಮೀನುಗಾರಿಕೆ ಕುರಿತು ಮೀನುಗಾರರಿಗೆ ಅರಿವು ಮೂಡಿಸಲು ವಿಫಲವಾಗಿರುವುದು ಹಾಗೂ ತಾತ್ಕಾಲಿಕ ಲಾಭಕ್ಕಾಗಿ ಸ್ಪೇಚ್ಛಾಚಾರದ ಮೀನುಗಾರಿಕೆಯಿಂದ ಇಂದು ಸಮುದ್ರದಲ್ಲಿ ಮೀನಿನ ಇಳುವರಿ ವರ್ಷದಿಂದ ವರ್ಷಕ್ಕೆ ಕುಂಠಿತಗೊಳ್ಳುತ್ತಿದೆ. ಮತ್ಸಕ್ಷಾಮದಿಂದ ಮೀನುಗಾರರು ಭೀಕರ ಬರಗಾಲವನ್ನು ಅನುಭವಿಸುತಿದ್ದು, ಮಾಡಿದ ಸಾಲವನ್ನು ತೀರಿಸಲಾಗದ ಸಂಕಷ್ಟಕ್ಕೆ ಗುರಿಯಾಗಿದ್ದಾರೆ ಎಂದರು.
ಈಗೀಗ 16ಎಂಎಂ ಗಾತ್ರದ ಕಣ್ಣಿನ ಬಲೆಯನ್ನು ಬಳಸಿ ಮೀನುಗಾರಿಕೆ ನಡೆಸುತಿದ್ದು, ಇದರಿಂದ ಮರಿ ಮೀನುಗಳು ಬಲೆಗೆ ಸಿಲುಕಿ ಭವಿಷ್ಯದ ಮೀನುಗಾರಿಕೆಗೆ ದೊಡ್ಡ ಪ್ರಮಾಣದ ಹೊಡೆತ ಬೀಳುತ್ತಿದೆ. ಈ ಮರಿ ಮೀನಿನಲ್ಲಿ ವಿದೇಶಕ್ಕೆ ರಫ್ತಾಗುವ ಬೆಲೆಬಾಳುವ ಮಾಂಜಿ, ಅಂಜಲ್, ಬಂಗುಡೆಯ ಮೀನಿನ ಮರಿಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಹೀಗೆ ಬಲೆಗೆ ಬಿದ್ದ ಮರಿ ಮೀನುಗಳನ್ನು ಕೆ.ಜಿ.ಗೆ 10ರೂ.ಗೆ ಮಾರಿದರೆ, ಅದೇ ಮೀನು ಪೂರ್ಣ ಪ್ರಮಾಣದಲ್ಲಿ ಬೆಳೆದರೆ ಅದಕ್ಕೆ ಕೆ.ಜಿ.ಗೆ 200ರಿಂದ 1000ರೂ.ವರೆಗೆ ಬೆಲೆ ಸಿಗುತ್ತದೆ.
ಇನ್ನು ಮೀನುಗಳು ಮರಿ ಮಾಡಲು ಕಲ್ಲುಗಳಿರುವ ‘ಬರಮ್’ ಪ್ರದೇಶಕ್ಕೆ ಆಗಮಿಸಿದಾಗ ರಾತ್ರಿ ಹೊತ್ತಿನಲ್ಲಿ ನಡೆಸುವ ಹೈವೋಲ್ಟೇಜ್ ದೀಪದ ಬೆಳಕಿನಲ್ಲಿ ನಡೆಸುವ ಮೀನುಗಾರಿಕೆಯಿಂದ ಮರಿ ಮೀನುಗಳು, ಮೀನಿನ ಮೊಟ್ಟೆಗಳು ಭಾರೀ ಪ್ರಮಾಣದಲ್ಲಿ ಸಾಯುತ್ತಿದೆ. ಇದರ ಪರಿಣಾಮದಿಂದ ಮೀನಿನ ಸಂತಾನೋತ್ಪತ್ತಿ ತೀವ್ರಗತಿಯಲ್ಲಿ ಕುಂಠಿತಗೊಳ್ಳುತ್ತಿದೆ. ಮೀನು ಇಳುವರಿಗೆ ಹಾಗೂ ಮೀನುಗಾರರಿಗೆ ಕಂಟಕಪ್ರಾಯವಾಗಿರುವ ಈ ಮೀನುಗಾರಿಕೆಯನ್ನು ನಿಷೇಧಿಸಲು ಸರಕಾರ ಮುಂದಾಗಬೇಕು. ಇದಕ್ಕೆ ಎಲ್ಲಾ ಮೀನುಗಾರರು ಸಹಮತ ವ್ಯಕ್ತಪಡಿಸುತ್ತಾರೆ ಎಂದು ಕಿಶೋರ್ ಡಿ.ಸುವರ್ಣ ನುಡಿದರು.
ಅದೇ ರೀತಿ ತಿಂಗಳಲ್ಲಿ 10 ದಿನ ಮಾತ್ರ ನಡೆಯಬೇಕಿದ್ದ ಬುಲ್‌ಟ್ರಾಲ್ ಮೀನುಗಾರಿಕೆಗೆ ಬೇಕಾಬಿಟ್ಟಿಯಾಗಿ ನಡೆಯುತಿದ್ದು, ಇದು ಸಹ ಮತ್ಸಕ್ಷಾಮದಲ್ಲಿ ದೊಡ್ಡ ಪಾತ್ರ ವಹಿಸುತ್ತಿದೆ. ಇವುಗಳ ನಿಯಂತ್ರಣಕ್ಕೂ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ತಾಂಡೇಲ ಸಂಘದ ಅಧ್ಯಕ್ಷ ರವಿರಾಜ ಒತ್ತಾಯಿಸಿದರು.
ರಾಜ್ಯದಲ್ಲಿ 6500ಕ್ಕೂ ಅಧಿಕ ಯಾಂತ್ರೀಕೃತ ಮೀನುಗಾರಿಕಾ ಬೋಟುಗಳಿದ್ದು, ಇವುಗಳಲ್ಲಿ 2000ಕ್ಕೂ ಅಧಿಕ ಮಲ್ಪೆಯಲ್ಲೇ ಇವೆ. ವರ್ಷ ಕಳೆದಂತೆ ಮೀನುಗಾರಿಕಾ ದೋಣಿಗಳ ಸಂಖ್ಯೆ ಹೆಚ್ಚಿದರೂ, ದೇಶಿಯ ಮಾರುಕಟ್ಟೆಗಳಲ್ಲಿ ಗ್ರಾಹಕರಿಗೆ ಲಭ್ಯವಾಗುವ ಮೀನಿನ ಪ್ರಮಾಣ ಕುಸಿಯುತ್ತಿದೆ. ವಿದೇಶಿ ವಿನಿಮಯ ಕುಂಠಿತಗೊಂಡು ನಿರುದ್ಯೋಗ ಸಮಸ್ಯೆ ಅಧಿಕಗೊಳ್ಳುತ್ತಿದೆ ಎಂದವರು ಕಳವಳ ವ್ಯಕ್ತಪಡಿಸಿದರು.
ಈ ಸಮಸ್ಯೆಯಿಂದ ಪಾರಾಗಲು ಸರಕಾರ ಸಣ್ಣ ಗಾತ್ರದ ಬಲೆಗಳ ಉತ್ಪಾದನೆ ಹಾಗೂ ಮಾರಾಟ ಮಾಡದಂತೆ ಕಾನೂನು ಕ್ರಮಕೈಗೊಳ್ಳಬೇಕು. ಮೀನುಗಾರ ರು ಸಣ್ಣ ಗಾತ್ರದ ಬಲೆ ಬಳಸಿ ಮರಿ ಮೀನು ಹಿಡಿಯುವುದು ಹಾಗೂ ಮಾರಾಟ ಮಾಡುವುದನ್ನು ನಿಷೇಧಿಸಿ ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸ ಬೇಕು ಎಂದು ಕಿಶೋರ್ ಸಲಹೆ ನೀಡಿದರು.
ಈಗಾಗಲೇ ಗುಜರಾತ್ ರಾಜ್ಯ ಮತ್ಸಕ್ಷಾಮದ ಸಮಸ್ಯೆಯಿಂದ ನಲುಗಿ ಸಣ್ಣ ಗಾತ್ರದ ಬಲೆ ಬಳಕೆಯನ್ನು ನಿಲ್ಲಿಸಿದೆ. ಕೇರಳ ರಾಜ್ಯವೂ ಮರಿ ಮೀನು ಹಿಡಿಯುವುದು ಹಾಗೂ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಇದರಿಂದ ಅಲ್ಲಿ ಮೀನುಗಾರಿಕೆ ಆರೋಗ್ಯಕರವಾಗಿರುವಂತಾಗಿದೆ ಎಂದರು.
ಸಂಘದ ನಿರ್ಣಯ: ಸಂಘವು ಇತ್ತೀಚೆಗೆ ಕರೆದ ಸರ್ವಸದಸ್ಯರ ಸಭೆಯಲ್ಲಿ ಈ ಕೆಳಗಿನ ನಿಣ‰ಯಗಳನ್ನು ಕೈಗೊಂಡು ಎಲ್ಲರೂ ಅದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ. ಇದನ್ನು ಉಳಿದ ಮೀನುಗಾರರ ಸಂಘಟನೆಗಳು ಪಾಲಿಸುವಂತಾಗಬೇಕು ಎಂದವರು ಹೇಳಿದರು.
ಮರಿ ಮೀನನ್ನು ಹಿಡಿಯುವುದು ಮತ್ತು ಮಾರಾಟವನ್ನು ಸಂಪೂರ್ಣ ನಿಷೇಧಿಸಬೇಕು. ಮೀನುಗಾರಿಕೆಗೆ ಈ ಬಳಸುವ 16ಎಂಎಂ ಗಾತ್ರದ ಬಲೆಯ ಬದಲು ಕನಿಷ್ಟ 30ಎಂಎಂ ಗಾತ್ರದ ಬಲೆಯನ್ನು ಬಳಸಬೇಕು. ಇದರಿಂದ ಮರಿ ಮೀನು ಬಲೆಗೆ ಬೀಳುವುದು ತಪ್ಪುತ್ತದೆ. ಆಗಸ್ಟ್ ತಿಂಗಳಲ್ಲೇ ಆಳ ಸಮುದ್ರ ಮೀನುಗಾರಿಕೆಯನ್ನು ಮಾಡುವುದು. ಇದರೊಂದಿಗೆ ಮೀನುಗಾರಿಕಾ ಇಲಾಖೆ, ಮೀನುಗಾರಿಕಾ ಸಂಶೋಧನಾ ಕೇಂದ್ರ ಹಾಗೂ ಸರಕಾರಗಳು ಮೀನುಗಾರರಿಗೆ ವೈಜ್ಞಾನಿಕ ಮೀನುಗಾರಿಕೆ ಕುರಿತು ಮಾಹಿತಿ, ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದವರು ಸಲಹೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದಸೋಮನಾಥ ಕಾಂಚನ್, ರವಿರಾಜ್, ಪಾಂಡುರಂಗ ಕೋಟ್ಯಾನ್ ಹಾಗೂ ವಿಠಲ ಕರ್ಕೇರ ಉಪಸ್ಥಿತರಿದ್ದರು.