×
Ad

ಭಯೋತ್ಪಾದಕರ ಒಳನುಸುಳಿವಿಕೆಗೆ ಪಾಕ್ ಉತ್ತೇಜನ ಹೆಚ್ಚಳ: ಅರುಣ್ ಜೇಟ್ಲಿ

Update: 2017-08-04 20:20 IST

ಹೊಸದಿಲ್ಲಿ, ಆ. 4: ಗಡಿ ಮೂಲಕ ಜಮ್ಮು ಹಾಗೂ ಕಾಶ್ಮೀರಕ್ಕೆ ಭಯೋತ್ಪಾದಕರನ್ನು ಕಳುಹಿಸುವ ಪಾಕಿಸ್ತಾನದ ಪ್ರಯತ್ನ ಹೆಚ್ಚಾಗಿದೆ. ಆದರೆ, ಪಾಕಿಸ್ತಾನದ ಕಡೆಯಲ್ಲೇ ಹೆಚ್ಚು ಸಾವು ನೋವುಗಳು ಸಂಭವಿಸಿವೆ ಎಂದು ಕೇಂದ್ರ ರಕ್ಷಣಾ ಸಚಿವ ಅರುಣ್ ಜೇಟ್ಲಿ ಶುಕ್ರವಾರ ಹೇಳಿದ್ದಾರೆ.

 ಭಾರತದ ಸೇನೆ ಪಶ್ಚಿಮದಲ್ಲಿ ಪ್ರಭುತ್ವ ಹೊಂದಿದೆ ಹಾಗೂ ಪರಿಣಾಮಕಾರಿಯಾಗಿದೆ. ಗಡಿಗುಂಟ ಒಳನುಸುಳುವಿಕೆಯನ್ನು ಪರಿಶೀಲಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪಾಕಿಸ್ತಾನ ಒಳನುಸುಳುವಿಕೆ ಪ್ರಯತ್ನವನ್ನು ಹೆಚ್ಚಿಸಿದೆ ಎಂದು ಅವರು ಲೋಕಸಭೆಯಲ್ಲಿ ಪ್ರಶ್ನೋತ್ತರ ವೇಳೆ ತಿಳಿಸಿದರು.

 ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿದ ಪರಿಣಾಮ, ಹಲವು ಒಳನುಸುಳುವಿಕೆ ಪ್ರಯತ್ನಗಳು ವಿಫಲವಾಗಿವೆ. ಹಾಗೂ ಒಳನುಸುಳುವಿಕೆ ಕಡಿಮೆ ಆಗಿದೆ. ಪಾಕಿಸ್ತಾನದ ಭಾಗದಲ್ಲಿ ಸಾವು ನೋವುಗಳ ಸಂಖ್ಯೆ ಅತೀ ಹೆಚ್ಚು ದಾಖಲೆಯ ಪ್ರಮಾಣದಲ್ಲಿ ಆಗಿದೆ ಎಂದು ಅವರು ತಿಳಿಸಿದ್ದಾರೆ.

 ಗಡಿರೇಖೆಯಲ್ಲಿ 2016ರಲ್ಲಿ ನಡೆದ 228 ಘಟನೆಗಳಿಗೆ ಹೋಲಿಸಿದರೆ, ಈ ವರ್ಷ ಇದುವರೆ 285 ಕದನ ವಿರಾಮ ಉಲ್ಲಂಘನೆಯ ಘಟನೆಗಳು ಸಂಭವಿಸಿವೆ. ಇದರಿಂದ 8 ಮಂದಿ ಯೋಧರು ಹುತಾತ್ಮರಾಗಿದ್ದಾರೆ ಎಂದು ಜೇಟ್ಲಿ ಹೇಳಿದರು.

ಗಡಿ ಭದ್ರತಾ ಪಡೆ ಹಾಗೂ ಸೇನೆ ಕಠಿಣ ಭದ್ರತೆ ಕೈಗೊಂಡರೂ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದಿಂದ 221 ಕದನ ವಿರಾಮ ಉಲ್ಲಂಘನೆ ನಡೆದಿದೆ ಎಂದು ಅವರು ತಿಳಿಸಿದರು.

ಗಡಿ ನಿಯಂತ್ರಣ ರೇಖೆ ಹಾಗೂ ಜಮ್ಮು ಕಾಶ್ಮೀರದಲ್ಲಿರುವ ಅಂತಾರಾಷ್ಟ್ರೀಯ ಗಡಿ ಗುಂಟ ಸೇನೆ ಒಳನುಸುಳುವಿಕೆ ವಿರೋಧಿ ತಡೆ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ. ಇದು ಸೇನೆಯ ನಿಯಂತ್ರಣದಲ್ಲಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

ಭಯೋತ್ಪಾದಕರ ಒಳನುಸುಳುವಿಕೆ ತಡೆಯಲು ಹಾಗೂ ಪತ್ತೆ ಹಚ್ಚಲು ರ್ಯಾಡರ್, ಥರ್ಮಲ್ ಇಮೇಜ್‌ನೊಂದಿಗೆ ಕಣ್ಗಾವಲು ಅಳವಡಿಸಲಾಗಿದೆ. ಗಡಿ ರಕ್ಷಿಸಲು ಹಾಗೂ ರಾಷ್ಟ್ರದ ಹಿತಾಸಕ್ತಿ ಕಾಪಾಡಲು ಬೆದರಿಕೆಯ ಗ್ರಹಿಕೆಯನ್ನು ಸರಕಾರ ನಿರಂತರ ಪರಿಶೀಲಿಸುತ್ತಿದೆ ಎಂದು ಅವರು ಹೇಳಿದರು.

 ಭಾರತದ ಸೌರ್ವರ್ಭಮತೆ , ಭೌಗೋಳಿಕ ಸಮಗ್ರತೆ ಹಾಗೂ ಭದ್ರತೆ ರಕ್ಷಿಸಲು ಗಡಿಗುಂಟ ದೇಶದ ರಕ್ಷಣಾ ಸನ್ನದ್ಧತೆಯನ್ನು ಮಲ್ದರ್ಜೆಗೇರಿಸಲು ಹಾಗೂ ನಿರ್ವಹಿಸಲು ಸಮಯಕ್ಕೆ ಸರಿಯಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅರುಣ್ ಜೇಟ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News