ಕಾವ್ಯಾ ಮನೆಗೆ ಸಿಪಿಐ ನಿಯೋಗ ಭೇಟಿ
Update: 2017-08-04 20:27 IST
ಮಂಗಳೂರು, ಆ. 4: ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯಾಳ ಸಾವು ಪ್ರಕರಣವನ್ನು ಕೂಲಂಕುಷ ತನಿಖೆ ನಡೆಸಬೇಕೆಂದು ಪ್ರಕರಣದ ತನಿಖಾಧಿ ಕಾರಿಯಾಗಿರುವ ಎಸಿಪಿ ರಾಜೇಂದ್ರ ಕುಮಾರ್ ಅವರಲ್ಲಿ ಸಿಪಿಐ ನಿಯೋಗವು ಚರ್ಚಿಸಿ ಒತ್ತಾಯಿಸಿದೆ.
ಕಾವ್ಯಾಳ ಮನೆಗೆ ಭೇಟಿ ನೀಡಿರುವ ನಿಯೋಗವು ಪ್ರಕರಣದಲ್ಲಿ ಸೂಕ್ತ ನ್ಯಾಯ ದೊರಕಿಸಿಕೊಡಲು ಹಾಗೂ ಶಿಕ್ಷಣ ಮಾಫಿಯಾದ ವಿರುದ್ಧ ಹೋರಾಟ ನಡೆಸುವುದಾಗಿ ಭರವಸೆ ನೀಡಿ ಸಾಂತ್ವನ ಹೇಳಿತು.
ಕಾವ್ಯಾ ಮನೆಗೆ ಭೇಟಿ ನೀಡಿದ ನಿಯೋಗದಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್, ಮಂಗಳೂರು ತಾಲೂಕು ಕಾರ್ಯದರ್ಶಿ ವಿ.ಎಸ್. ಬೇರಿಂಜ, ಬೀಡಿ ಆ್ಯಂಡ್ ಟೊಬೆಕ್ಕೊ ಲೇಬರ್ ಯೂನಿಯನ್‌ನ (ಎಐಟಿಯುಸಿ) ಅಧ್ಯಕ್ಷೆ ಸುಲೋಚನಾ ಕವತ್ತಾರು, ಕೋಶಾಧಿಕಾರಿ ಎಂ.ಕರುಣಾಕರ್ ಹಾಗೂ ಸಂಘಟನೆಯ ನಾಯಕರಾದ ಕೆ.ತಿಮ್ಮಪ್ಪ, ಎಂ. ಶಿವಪ್ಪ ಕೋಟ್ಯಾನ್, ಸುಜಾತಾ ನಿಡ್ಡೋಡಿ, ನಳಿನಿ ಎಕ್ಕಾರ್ ಮುಂತಾದವರು ಉಪಸ್ಥಿತರಿದ್ದರು.