×
Ad

‘ನಿವೇಶನಕ್ಕಾಗಿ ಖಾಸಗಿ ಜಾಗ ಖರೀದಿಗೂ ಅವಕಾಶ’

Update: 2017-08-04 21:30 IST

ಉಡುಪಿ, ಆ.4: ನಿವೇಶನರಹಿತರಿಗೆ ಸರಕಾರಿ ನಿವೇಶನ ಹಂಚಲು ಸರಕಾರಿ ಭೂಮಿ ಲಭ್ಯವಿಲ್ಲದೇ ಹೋದರೆ, ಖಾಸಗಿಯವರಿಂದ ಸರಕಾರ ನಿಗದಿ ಪಡಿಸಿದ ದರ ನೀಡಿ ಖರೀದಿಸಲು, ಅವರೊಂದಿಗೆ ಒಪ್ಪಂದ ಮಾಡಿಕೊಂಡು 60:40ರ ಅನುಪಾತದಲ್ಲಿ ನಿವೇಶನ ಹಂಚಲು ಅವಕಾಶವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಉಡುಪಿ ವಿಧಾನಸಭಾ ವ್ಯಾಪ್ತಿಯಲ್ಲಿ ಪಡಿತರ ಚೀಟಿ ಹಾಗೂ ನಿವೇಶನ ಹಂಚಿಕೆ ಕುರಿತು ಸಂಬಂಧಿತ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ತಾಪಂ ಸಭಾಂಗಣದಲ್ಲಿ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡುತಿದ್ದರು.ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ 595, ಗ್ರಾಮಾಂತರ ಪ್ರದೇಶಗಳಲ್ಲಿ 320 ಹಾಗೂ ಬ್ರಹ್ಮಾವರ ಹೋಬಳಿ ಮಟ್ಟದಲ್ಲಿ ಸುಮಾರು 1300 ನಿವೇಶನಗಳು ಅರ್ಜಿದಾರರಿಗೆ ಹಂಚಲು ಬೇಕಾಗುತ್ತದೆ. ಇದಕ್ಕಾಗಿ ಸುಮಾರು 35 ಎಕರೆ ಜಾಗದ ಅಗತ್ಯವಿದೆ ಎಂದವರು ತಿಳಿಸಿದರು.

ಸರಕಾರಿ ಭೂಮಿಯ ಲಭ್ಯತೆ ಕಡಿಮೆ ಇರುವುದರಿಂದ ವಿವಿಧ ಸರಕಾರಿ ಯೋಜನೆಗಳಡಿ ನಿವೇಶನಕ್ಕಾಗಿ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಬೇಕು. ಅರ್ಹರನ್ನು ಯಾವುದೇ ಕಾರಣಕ್ಕೂ ಅವಕಾಶ ವಂಚಿತರನ್ನಾಗಿಸಬಾರದು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಫಲಾನುಭವಿಗಳನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ. ಪ್ರತಿ ಗ್ರಾಪಂ ಮಟ್ಟದಲ್ಲೂ ಎ ಮತ್ತು ಬಿ ಪಟ್ಟಿಯನ್ನು ತಯಾರಿಸಲಾಗಿದೆ. ಅದೇ ರೀತಿ ಕೆಲವು ಕಡೆಗಳಲ್ಲಿ ಭೂಮಿಯನ್ನೂ ಗುರುತಿಸಲಾಗಿದೆ. ನಗರಸಭಾ ವ್ಯಾಪ್ತಿಯಲ್ಲಿ 800 ಹಾಗೂ ಉಡುಪಿ ಗ್ರಾಮಾಂತರ ಭಾಗದಲ್ಲಿ ಒಟ್ಟು 1,700 ಅರ್ಜಿಗಳನ್ನು ಗುರುತಿಸಲಾಗಿದೆ. ಉಡುಪಿ ನಗರಸಭಾ ವ್ಯಾಪ್ತಿಯ ಹೆರ್ಗದಲ್ಲಿ 9.34 ಎಕರೆ, ಶಿವಳ್ಳಿಯಲ್ಲಿ 1.66 ಎಕರೆ ಸೇರಿದಂತೆ ಒಟ್ಟು 11ಎಕರೆ ಜಾಗ ಸಿಕ್ಕಿದೆ. ಇನ್ನೂ ಉಳಿದ 300 ಮಂದಿಗೆ ಹಂಚಲು ಸುಮಾರು ನಾಲ್ಕು ಎಕರೆ ಜಾಗದ ಅಗತ್ಯವಿದೆ ಎಂದರು.

ಇನ್ನು ಬ್ರಹ್ಮಾವರ ಹೋಬಳಿಯೂ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಡೀಮ್ಡ್ ಫಾರೆಸ್ಟ್ ಇರುವುದರಿಂದ ಭೂಮಿ ಸಿಗುವುದು ಕಷ್ಟವಾಗಿದೆ. ಅದನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯಬೇಕಾಗಿದೆ. ಬ್ರಹ್ಮಾವರ ಹೋಬಳಿಯ ಗ್ರಾಪಂಗಳಲ್ಲಿ ಎ ಪಟ್ಟಿಯಲ್ಲಿ 440, ಬಿ ಪಟ್ಟಿಯಲ್ಲಿ 743 ಅರ್ಜಿಗಳಿವೆ. ಇಲ್ಲಿ 39 ಎಕರೆ ಜಾಗವನ್ನು ಗುರುತಿಸಲಾಗಿದೆ. ಇದು ಸಾಕಾಗದೇ ಇನ್ನೂ 30 ಎಕರೆ ಜಾಗದ ಅಗತ್ಯವಿದ್ದು, ಇದಕ್ಕೆ ಡೀಮ್ಡ್ ಫಾರೆಸ್ಟ್ ಅಡ್ಡಿಯಾಗುತ್ತಿದೆ ಎಂದು ಸಚಿವರು ವಿವರಿಸಿದರು.

ಪಡಿತರ ಚೀಟಿ: ಪಡಿತರ ಚೀಟಿಗೆ ಆಧಾರ ಲಿಂಕ್ ಕಡ್ಡಾಯವಾದ ಮೇಲೆ ಸುಮಾರು 45,000 ಜನರ ಹೆಸರು ಪಡಿತರ ಚೀಟಿಯಿಂದ ಡಿಲೀಟ್ ಆಗಿದೆ. ಹೆಚ್ಚುಕಡಿಮೆ 1,000 ಬಿಪಿಎಲ್ ಕಾರ್ಡುಗಳು ರದ್ದಾಗಿವೆ. ರದ್ದಾದ ಕಾರ್ಡುದಾರರು ಮತ್ತೊಮ್ಮೆ ಅರ್ಜಿ ಸಲ್ಲಿಸಿ ಕಾರ್ಡು ಪಡೆಯಬೇಕಾಗಿದೆ. ರೇಶನ್ ಕಾರ್ಡಿಗೆ ಸಂಬಂಧಿಸಿದಂತೆ ಎಲ್ಲಾ ಪಿಡಿಓಗಳು ಆ.15ರೊಳಗೆ ತನಿಖೆ ನಡೆಸಿ ಪಟ್ಟಿಯನ್ನು ಕಳುಹಿಸಿಕೊಡಬೇಕು ಎಂದವರು ಎಲ್ಲರಿಗೂ ಎಚ್ಚರಿಕೆ ನೀಡಿದರು. ಸುಮಾರು 12 ಗ್ರಾಪಂಗಳಿಗೆ ಫಲಾನುಭವಿಗಳ ಪಟ್ಟಿ ಇನ್ನೂ ತಲುಪದಿರುವ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು. ಪಟ್ಟಿ ಪಿಡಿಓಗಳಿಗೆ ಸಿಕ್ಕಿ ಅವರು ತನಿಖೆ ನಡೆಸಿ ಅಂತಿಮ ವರದಿ ಕಳುಹಿಸಲು ವಿಳಂಬವಾಗುತ್ತದೆ ಎಂದವರು ನುಡಿದರು.

ಉಡುಪಿ ತಾಲೂಕಿನಲ್ಲಿ 4277 ಅರ್ಜಿಗಳು ಆನ್‌ಲೈನ್‌ನಲ್ಲಿ ಬಂದಿವೆ. ಇವುಗಳನ್ನು ವಿಎಗಳಿಗೆ ಕಳುಹಿಸಿ ಅವರು ಕ್ಷೇತ್ರ ಪರಿಶೀಲನೆ ನಡೆಸಿ ಬಂದ 666 ಅರ್ಜಿಗಳು ಡಾಟಾ ಸೆಂಟರ್‌ಗೆ ಹೋಗಿದ್ದು, ಅಲ್ಲಿ ಸಂಬಂಧಿತರ ಸಹಿ ಆಗಿ ಪ್ರಿಂಟ್ ಆಗಿ ನೇರವಾಗಿ ಫಲಾನುಭವಿಗಳ ಮನೆಗೆ ಅಂಚೆ ಮೂಲಕ ಹೋಗುತ್ತವೆ ಎಂದು ಸದಾಶಿವಪ್ಪ ತಿಳಿಸಿದರು.

ಉಡುಪಿ ಜಿಲ್ಲೆಯಲ್ಲಿ 9880 ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಸ್ವೀಕರಿಸಲಾಗಿದ್ದು, ಅವುಗಳಲ್ಲಿ 3428 ಅರ್ಜಿಗಳನ್ನು ಪರಿಶೀಲಿಸಿ ಡಾಟಾ ಎಂಟ್ರಿ ಮಾಡುವ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಸಭೆಯಲ್ಲಿ ಉಡುಪಿ ತಹಶೀಲ್ದಾರ್ ಮಹೇಶ್ಚಂದ್ರ, ಬ್ರಹ್ಮಾವರ ತಹಶೀಲ್ದಾರ್ ಪಿ.ಕುರ್ಡೇಕರ್, ನಗರಸಭಾ ಪೌರಾಯುಕ್ತ ಡಿ.ಮಂಜುನಾಥಯ್ಯ, ತಾಪಂ ಇಒ ಮೋಹನ್‌ರಾಜ್, ಜಿಪಂನ ಯೋಜನಾ ನಿರ್ದೇಶಕಿ ನಯನಾ, ಜಿಪಂ ಸದಸ್ಯ ಜನಾರ್ದನ ತೋನ್ಸೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News