ಮಂಗಳೂರು ವಿವಿ: ಇಲೆಕ್ಟ್ರಾನಿಕ್ಸ್ ವಿಭಾಗದ ನವೀಕೃತ ಕಟ್ಟಡ ಉದ್ಘಾಟನೆ
ಕೊಣಾಜೆ,ಆ.5: ಶಿಕ್ಷಣವು ನಮ್ಮ ಜೀವನವನ್ನು ರೂಪಿಸುವಲ್ಲಿ ಪ್ರಮುಖವಾದ ಪಾತ್ರವಹಿಸುತ್ತದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಸಾಧನೆಗೈಯ್ಯಲು ಇಂದು ಹಲವಾರು ಅವಕಾಶಗಳಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಂಡು ಉತ್ತಮ ಭವಿಷ್ಯವನ್ನು ಕಂಡುಕೊಳ್ಳಬೇಕು ಎಂದು ಶಾಸಕ ಜೆ.ಆರ್.ಲೋಬೋ ಅವರು ಅಭಿಪ್ರಾಯ ಪಟ್ಟರು.
ಅವರು ಮಂಗಳೂರು ವಿಶ್ವವಿದ್ಯಾಲಯದ ಇಲೆಕ್ಟ್ರಾನಿಕ್ಸ್ ವಿಭಾಗದ ನವೀಕೃತ ಕಟ್ಟಡದ ಉದ್ಘಾಟನೆಯನ್ನು ಶನಿವಾರ ನೆರವೇರಿಸಿ ಬಳಿಕ ಹಳೆ ಸೆನೆಟ್ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಂಗಳೂರು ವಿವಿಯು ಕೊಣಾಜೆಯಲ್ಲಿ ಆರಂಭಗೊಂಡಾಗ ಈ ಭಾಗದ ಜನರು ಬಹಳಷ್ಟು ಸಂಭ್ರಮ ಪಟ್ಟಿದ್ದರು. ಈಗ ಹಂತ ಹಂತವಾಗಿ ಅಭಿವೃದ್ಧಿಯನ್ನು ಕಾಣುತ್ತಿರುವ ಮಂಗಳೂರು ವಿಶ್ವವಿದ್ಯಾಲಯವು ಶೈಕ್ಷಣಿಕ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಹಲವಾರು ಸಾಧನೆಗಳೊಂದಿಗೆ ದೇಶದ ಪ್ರತಿಷ್ಠಿತ ವಿವಿಗಳೊಂದಿಗೆ ಗುರುತಿಸುವಂತಾಗಿದೆ ಎಂದು ಹೇಳಿದರು.
ಪಿಲಿಕುಲ ನಿಸರ್ಗಧಾಮ ಮತ್ತು ಮಂಗಳೂರು ವಿವಿಗೆ ಅವಿನಾಭಾವ ಸಂಬಂಧ ಇದ್ದು, ಪಿಲಿಕುಲ ನಿಸರ್ಗಧಾಮ ಆರಂಭಗೊಂಡಾಗ ಇಲ್ಲಿಯ ಸಸ್ಯಶಾಸ್ತ್ರ ಸೇರಿದಂತೆ ವಿವಿಧ ವಿಭಾಗಗಳ ಪ್ರಾಧ್ಯಾಪಕರ,ವಿದ್ಯಾರ್ಥಿಗಳ ನೆರವನ್ನು ಪಡೆದುಕೊಳ್ಳಲಾಗಿತ್ತು. ವಿವಿಯು ಇನ್ನಷ್ಟು ಸಾಧನೆಯೊಂದಿಗೆ ನಂಬರ್ ಒನ್ ವಿಶ್ವವಿದ್ಯಾಲಯವಾಗಿ ಮೂಡಿ ಬರಲಿ ಎಂದು ಹಾರೈಸಿದರು.
ಮಂಗಳೂರು ವಿವಿ ಕುಲಪತಿ ಪ್ರೊ.ಕೆ.ಭೈರಪ್ಪ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಸಮಾರಂಭದಲ್ಲಿ ಮಂಗಳೂರು ವಿವಿ ಕುಲಸಚಿವ ಪ್ರೊ.ಕೆ.ಎಂ.ಲೋಕೇಶ್ ಅವರು ಉಪಸ್ಥಿತರಿದ್ದರು. ಪರೀಕ್ಷಾಂಗ ಕುಲಸಚಿವ ಪ್ರೊ.ಎ.ಎಂ.ಖಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥರಾದ ಪ್ರೊ.ನವೀನ್ ಕುಮಾರ್ ಎಸ್.ಕೆ. ಅವರು ಸ್ವಾಗತಿಸಿದರು.