×
Ad

ರಾಜ್ಯ ಸರಕಾರದಿಂದ ಜನತೆಗೆ ದ್ರೋಹ: ಪಾಲೆಮಾರ್ ಆರೋಪ

Update: 2017-08-05 19:58 IST

ಮಂಗಳೂರು, ಆ.5: ಜನಸಾಮಾನ್ಯರು ಮತ್ತು ರೈತರಿಗೆ ಮಾರಕವಾಗಿರುವ ಏಕರೂಪ ವಲಯ ನಿಯಮಾವಳಿ ಜಾರಿಗೆ ತರಲು ರಾಜ್ಯ ಕಾಂಗ್ರೆಸ್ ಸರಕಾರ ಮುಂದಾಗಿದ್ದು, ಇದರಿಂದ ಜನಸಾಮಾನ್ಯರು ಮನೆ ನಿರ್ಮಿಸಲು ಮತ್ತು ಕೃಷಿಕರು ಕೃಷಿ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಲಿದೆ. ಈ ನಿಯಮಾವಳಿ ಜಾರಿ ರಾಜ್ಯದ ಜನತೆಗೆ ಕಾಂಗ್ರೆಸ್ ಸರಕಾರ ಮಾಡಿದ ದ್ರೋಹ ಎಂದು ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಆರೋಪಿಸಿದರು.

ಜನರ ಅರಿವಿಗೆ ಬಾರದಂತೆ ಈ ಕಠಿಣ ನಿಯಮಾವಳಿ ಅನುಷ್ಠಾನಕ್ಕೆ ಬೇಕಾದ ಎಲ್ಲ ಪ್ರಕ್ರಿಯೆಗಳನ್ನು ಸರಕಾರ ಮಾಡುತ್ತಿದ್ದು, ಇದನ್ನು ಜನತೆ ವಿರೋಧಿಸಬೇಕು. ಕರಾವಳಿ ಮತ್ತು ಮಲೆನಾಡಿನ ಭೌಗೋಳಿಕ ಪರಿಸ್ಥಿತಿ ಗಮನದಲ್ಲಿರಿಸಿ ಪ್ರತ್ಯೇಕ ಕಾನೂನು ಹಿಂದಿನಿಂದಲೂ ಅನುಷ್ಠಾನದಲ್ಲಿದೆ. ಕರಾವಳಿ ಮತ್ತು ಕೊಡಗಿನ ಪ್ರದೇಶಗಳು ಭೌಗೋಳಿಕವಾಗಿ ಸಮತಟ್ಟಾಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ನಿಯಮಾವಳಿ ರೂಪಿಸಲಾಗಿತ್ತು. ಆದರೆ, ಅದನ್ನು ಗಾಳಿಗೆ ತೂರಿ ಮಾರಕ ನಿಯಮಾವಳಿ ಅನುಷ್ಠಾನಕ್ಕೆ ರಾಜ್ಯ ಕಾಂಗ್ರೆಸ್ ಸರಕಾರ ಮುಂದಾಗಿರುವುದು ವಿಪರ್ಯಾಸ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಹೊಸ ನಿಯಮಾವಳಿ ಪ್ರಕಾರ ಶೇ.30ರಷ್ಟು ಜಾಗ ಬಿಟ್ಟು ಉಳಿದ ಜಾಗದಲ್ಲಿ ಮನೆ ನಿರ್ಮಿಸಬೇಕು. ನಗರದಲ್ಲಿ ದುಬಾರಿ ದರದಲ್ಲಿ ಖರೀದಿಸಿದ ಜಾಗವನ್ನು ಶೇ.30ರಷ್ಟು ಖಾಲಿ ಬಿಟ್ಟು ಉಳಿದ ಜಾಗದಲ್ಲಿ ಮನೆ ನಿರ್ಮಿಸಲು ಸಾಧ್ಯವಿಲ್ಲ. ಈ ಕಾನೂನು 3 ಸೆಂಟ್ಸ್ ಜಾಗಕ್ಕೂ ಅನ್ವಯವಾಗುತ್ತದೆ. ಕೃಷಿಕರು ಕುಟುಂಬದ ಆಸ್ತಿ ಪಾಲು ಸಂದರ್ಭವೂ ಶೇ. 30ರಷ್ಟು ಜಾಗ ಖಾಗಿ ಬಿಡಬೇಕು. 20 ಅಡಿ ರಸ್ತೆಗೆ ಬಿಡಬೇಕು. ಮೂರು ಎಕರೆ ಕೃಷಿ ಭೂಮಿ ಮೂವರಿಗೆ ವಿಂಗಡಣೆ ಆದಾಗ ನಿಯಮಾವಳಿಯಂತೆ ಜಾಗ ಬಿಟ್ಟಾಗ ಉಳಿಯುವುದು ಒಂದೂವರೆ ಎಕರೆ ಮಾತ್ರ. ಏಕಾಗಿ ಜಾಗ ಏಕೆ ಬಿಡಬೇಕು ಎಂದು ಸ್ಪಷ್ಟವಾಗಿಲ್ಲ. ಈ ಬಗ್ಗೆ ಜನಜಾಗೃತಿ ಮೂಡಿಸಲಾಗುವುದು. ಸ್ಥಳೀಯ ಶಾಸಕರು ಈ ಸಮಸ್ಯೆಯನ್ನು ಸರಕಾರದ ಗಮನಕ್ಕೆ ತಂದು ಕರಾವಳಿಗೆ ಪ್ರತ್ಯೇಕ ನಿಯಮಾವಳಿ ರೂಪಿಸಬೇಕು. ಇಲ್ಲವಾದಲ್ಲಿ ಬಿಜೆಪಿ ವತಿಯಿಂದ ಹೋರಾಟ ನಡೆಸಲಾಗುವುದು ಎಂದು ಕೃಷ್ಣ ಪಾಲೆಮಾರ್ ಎಚ್ಚರಿಸಿದರು.

ಬಿಜೆಪಿ ಸರ್ಕಾರ ಇದ್ದಾಗ ಈ ಸಮಸ್ಯೆ ಇರಲಿಲ್ಲ. 5 ಸೆಂಟ್ಸ್‌ವರೆಗೆ ಸಣ್ಣ ಮನೆ ಕಟ್ಟುವವರಿಗೆ ರಿಯಾಯಿತಿ ಇತ್ತು. ಒಂದು ಎಕರೆವರೆಗೆ ಜಾಗ ಬಿಡುವ ಅವಶ್ಯಕತೆ ಇರಲಿಲ್ಲ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ 15 ದಿನಗಳಲ್ಲಿ ಸಿಂಗಲ್‌ಸೈಟ್, ಒಂದು ಎಕರೆಯ ನಿಯಮಾವಳಿ ತೆಗೆದುಹಾಕುತ್ತೇವೆ ಎಂದು ಭರವಸೆ ನೀಡಲಾಗಿತ್ತು. ಆದರೆ, ಅಧಿಕಾರಕ್ಕೆ ಬಂದು ಕಠಿಣ ಕಾನೂನು ತಂದು ಜನಸಾಮಾನ್ಯರನ್ನು ಪೇಚಿಗೆ ಸಿಲುಕಿಸಿದೆ ಎಂದರು.

ಕರಾವಳಿ ಮತ್ತು ಮಲೆನಾಡಿಗೆ ರಾಜ್ಯದಲ್ಲಿ ಹಿಂದಿನಿಂದಲೂ ಇದ್ದಂತೆ ಪ್ರತ್ಯೇಕ ವಲಯ ನಿಯಮ ರೂಪಿಸಬೇಕು. ಇಡೀ ರಾಜ್ಯಕ್ಕೆ ಒಂದೇ ಕಾನೂನು ಅನ್ವಯಿಸಿದರೆ ಇಲ್ಲಿನ ಜನತೆಗೆ ಅನ್ಯಾಯವಾಗುತ್ತದೆ. ಕರಾವಳಿ ಮತ್ತು ಮಲೆನಾಡಿನ ಜನತೆ ಇಂತಹ ಕಠಿಣ ನಿಯಮ ಬಗ್ಗೆ ಜಾಗೃತರಾಗಬೇಕು. ಕಾನೂನು ಅನುಷ್ಠಾನವಾಗದಂತೆ ಸರಕಾರದ ವಿರುದ್ಧ ಧ್ವನಿ ಎತ್ತಬೇಕು ಎಂದರು.

ಖಾಸಗಿಯವರಿಂದ ಸ್ಥಳೀಯಾಡಳಿತ ಅಥವಾ ಸರಕಾರ ಭೂಮಿ ಪಡೆದುಕೊಂಡರೆ ಅದಕ್ಕೆ ಟಿಡಿಆರ್ ನೀಡುತ್ತಿಲ್ಲ. ಟಿಡಿಆರ್ ವ್ಯವಸ್ಥೆ ರದ್ದುಪಡಿಸಲು ಸರಕಾರ ಮುಂದಾಗಿದೆ. ಇದರಿಂದ ಖಾಸಗಿಯವರು ಮೂಲಸೌಕರ್ಯಗಳಿಗೆ ಇನ್ನುಮುಂದೆ ಜಾಗ ಬಿಟ್ಟುಕೊಡಲು ಮುಂದೆ ಬರುವುದಿಲ್ಲಘಿ. ಇದರಿಂದ ನಗರದಲ್ಲಿ ರಸ್ತೆ ವಿಸ್ತರಣೆ ಆಗದೇ, ವಾಹನ ದಟ್ಟಣೆ ಹೆಚ್ಚಾಗಲಿದೆ ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವಿಶಂಕರ್ ಮಿಜಾರ್, ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಡಾ. ವೈಘಿ. ಭರತ್ ಶೆಟ್ಟಿಘಿ, ದಕ್ಷಿಣ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ವೇದವ್ಯಾಸ ಕಾಮತ್ ಉಪಸ್ಥಿತರಿದ್ದರು.

ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಡಾ. ವೈ. ಭರತ್ ಶೆಟ್ಟಿ, ದಕ್ಷಿಣ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ವೇದವ್ಯಾಸ ಕಾಮತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News