ನಿಸ್ವಾರ್ಥ ಸಮಾಜ ಸೇವೆ ಮಾಡಿ : ಫಾ. ಆಲ್ವಿನ್ ಸೆರಾವೊ
ಮಂಗಳೂರು, ಆ. 5: ಪಾದುವ ಪದವಿ ಪೂರ್ವ ಕಾಲೇಜಿನ 2017-18ನೆ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ಉದ್ಘಾಟನಾ ಕಾರ್ಯಕ್ರಮವನ್ನು ಪಾದುವ ಪದವಿ ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ ಆಲ್ವಿನ್ ಸೆರಾವೊರವರು ನೆರವೇರಿಸಿದರು. ತಮ್ಮ ಉದ್ಘಾಟನಾ ನುಡಿಗಳಲ್ಲಿ ಅವರು ವಿದ್ಯಾರ್ಥಿಗಳಿಗೆ ಯಾವುದೇ ಸಮಾಜ ಸೇವೆಯನ್ನು ಮಾಡುವಾಗ ನಿಸ್ವಾರ್ಥತೆಯಿಂದ ಮಾಡಬೇಕು ಮತ್ತು ಆ ಸೇವೆಯು ಸಂವಿಧಾನಾತ್ಮಕವಾಗಿ ಇರಬೇಕು ಯಾಕೆಂದರೆ ಎಲ್ಲಾ ಗ್ರಂಥಗಳಿಗಿಂತ ಶ್ರೇಷ್ಠವಾದ ಗ್ರಂಥ ಸಂವಿಧಾನ ಎಂದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಪಾದುವ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಗ್ಲ್ಯಾಡಿಸ್ ಅಲೋಶಿಯಸ್ ಅವರು ವಹಿಸಿದ್ದರು. ಅವರು ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸೇವೆಯನ್ನು ಮೈಗೂಡಿಸಿಕೊಂಡು ದೇಶದ ಏಳಿಗೆಗಾಗಿ ಶ್ರಮಿಸಬೇಕೆಂದು ಹೇಳಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಪಾದುವ ಪದವಿ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಶ್ರೀಧರ್ ಅವರು ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶ ಮತ್ತು ಸೇವೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಯೋಜನಾಧಿಕಾರಿ ಯತಿರಾಜ್ ಅವರು ಸ್ವಾಗತಿಸಿದರು ಮತ್ತು ಸಹ ಯೋಜನಾಧಿಕಾರಿ ಅನಿಲ್ ಡಿ ಮೆಲ್ಲೊ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಮಂಜುಳಾ ಕಾರ್ಯಕ್ರಮ ನಿರೂಪಿಸಿದರು ಮತ್ತು ಘಟಕದ ನಾಯಕಿ ವಂದನಾ ವಂದಿಸಿದರು.