ಮುಹಮ್ಮದ್ ಕುಳಾಯಿಯ ‘ಕಾಡಂಕಲ್ಲ್ ಮನೆ’ ಕಾದಂಬರಿಗೆ ‘ಹೇಮಂತ ಸಾಹಿತ್ಯ’ ಪ್ರಶಸ್ತಿ
ಮಂಗಳೂರು, ಆ.5: ಹಿರಿಯ ಲೇಖಕ ಮುಹಮ್ಮದ್ ಕುಳಾಯಿಯವರ ‘ಕಾಡಂಕಲ್ಲ್ ಮನೆ’ ಕಾದಂಬರಿಯು ಪ್ರತಿಷ್ಠಿತ ‘ಹೇಮಂತ ಸಾಹಿತ್ಯ- ವರ್ಷದ ಲೇಖಕ 2016’ ಪ್ರಶಸ್ತಿಗೆ ಆಯ್ಕೆಯಾಗಿದೆ.
ಆಗಸ್ಟ್ 20ರಂದು ಬೆಳಗ್ಗೆ 10:30ಕ್ಕೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣ ದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ವತಿಯಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ‘ವಾರ್ತಾಭಾರತಿ’ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದ್ದ ‘ಕಾಡಂಕಲ್ಲ್ ಮನೆ’ ಕಾದಂಬರಿಯನ್ನು ಮಂಗಳೂರಿನ ಇರುವೆ ಪ್ರಕಾಶನ ಪ್ರಕಟಿಸಿದೆ.
ಮುಹಮ್ಮದ್ ಕುಳಾಯಿಯವರು ಕುಚ್ಚಿಕಾಡಿನ ಕಪ್ಪು ಹುಡುಗ (ಕಥಾ ಸಂಕಲನ), ಕದನ ಕುತೂಹಲ (ಕಥಾ ಸಂಕಲನ), ನನ್ನ ಇನ್ನಷ್ಟು ಕತೆಗಳು (ಕಥಾ ಸಂಕಲನ), ಚೌಟರ ಮಿತ್ತಬೈಲ್ ಯಮುನಕ್ಕ (ಕನ್ನಡಾನುವಾದ- ಕಾದಂಬರಿ- ತುಳುಮೂಲ), ರಂಗನೋ ಮಲೆ ಮಂಗನೋ (ಕನ್ನಡ ಅನುವಾದ- ಕಾದಂಬರಿ- ತುಳು ಮೂಲ), ಪೆರ್ನಾಲ್ (ಬ್ಯಾರಿ ಭಾಷೆಯ ಕಥಾ ಸಂಕಲನ), ಅರೆಬಿಯನ್ ನೈಟ್ಸ್ ಕತೆಗಳು (ಬ್ಯಾರಿ ಭಾಷೆಯಲ್ಲಿ) ಮೊದಲಾದ ಕೃತಿಗಳನ್ನು ರಚಿಸಿದ್ದಾರೆ.
ಇವರ ‘ನನ್ನ ಇನ್ನಷ್ಟು ಕತೆಗಳು’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್‌ನ ‘ವಸುದೇವ ಭೂಪಾಲಂ’ ದತ್ತಿ ಪ್ರಶಸ್ತಿ, ಮಂಗಳೂರಿನ ಮುಸ್ಲಿಂ ಲೇಖಕರ ಸಂಘದ ಮುಸ್ಲಿಂ ಸಾಹಿತ್ಯ ಪ್ರಶಸ್ತಿ, ‘ಮಿತ್ತಬೈಲ್ ಯಮುನಕ್ಕ’ ಕಾದಂಬರಿಗೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅನುವಾದ ಪ್ರಶಸ್ತಿ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅನುವಾದ ಪ್ರಶಸ್ತಿ, ಬೆಂಗಳೂರಿನ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ, ‘ಕದನ ಕುತೂಹಲ’ ಕೃತಿಗೆ ಶಿವಮೊಗ್ಗ ಕರ್ನಾಟಕ ಸಂಘದ ಪಿ. ಲಂಕೇಶ್ ಪ್ರಶಸ್ತಿ ಹಾಗೂ ಮಂಗಳೂರಿನ ನಿರತ ಸಾಹಿತ್ಯ ಸಂಘದ ನಿರತ ಸಾಹಿತ್ಯ ಪ್ರಶಸ್ತಿ, ಸಾಹಿತ್ಯ ಕ್ಷೇತ್ರದ ಸೇವೆಗಾಗಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿಗಳು ಲಭಿಸಿವೆ.