×
Ad

ಭಾರತವನ್ನು ಯುದ್ಧದೆಡೆಗೆ ತಳ್ಳುತ್ತಿರುವ ಮೋದಿ: ಚೀನಾ ಮಾಧ್ಯಮದ ಕಟು ಟೀಕೆ

Update: 2017-08-05 23:04 IST

 ಬೀಜಿಂಗ್,ಆ.5: ಡೋಕಾ ಲಾ ಗಡಿಬಿಕ್ಕಟ್ಟು ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿರುವ ಬಗ್ಗೆ ಚೀನಾದ ಸರಕಾರಿ ಸ್ವಾಮ್ಯದ ದಿನಪತ್ರಿಕೆಯೊಂದು ಗಮನಸೆಳೆದಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿ, ಚೀನಾದ ವಿರುದ್ಧ ಕಠಿಣವಾದ ನಿಲುವನ್ನು ತಳೆಯುವ ಮೂಲಕ ಅವರ ದೇಶವನ್ನು ಯುದ್ಧದೆಡೆಗೆ ಕೊಂಡೊಯ್ಯುತ್ತಿದ್ದಾರೆ ಹಾಗೂ ಅಲ್ಲಿನ ಜನತೆಯ ವಿಧಿಯೊಂದಿಗೆ ಜೂಜಾಡುತ್ತಿದ್ದಾರೆಂದು ಹೇಳಿದೆ.

ಡೋಕಾ ಲಾದಲ್ಲಿ ಜಮಾವಣೆಗೊಂಡಿರುವ ಭಾರತೀಯ ಸೈನಿಕರ ‘ಹುಟ್ಟಡಗಿಸುವ’ ಸಾಮರ್ಥ್ಯವಿರುವ ಚೀನಾದ ಪೀಪಲ್ಸ್ ಲಿಬರೇಶನ್ ಸೇನೆಯ ಅಭೂತಪೂರ್ವ ಶಕ್ತಿಯ ಬಗ್ಗೆ ಮೋದಿ ಅರಿತುಕೊಳ್ಳಬೇಕೆಂದು ಗ್ಲೋಬಲ್ ಟೈಮ್ಸ್ ಪತ್ರಿಕೆಯು ಶನಿವಾರ ತನ್ನ ಸಂಪಾದಕೀಯದಲ್ಲಿ ತಿಳಿಸಿದೆ.
 ಡೋಕಾ ಲಾ ಬಿಕ್ಕಟ್ಟಿಗೆ ಸಂಬಂಧಿಸಿ ಚೀನಾ ಸರಕಾರ ಹಾಗೂ ಅದರ ಅಧೀನದಲ್ಲಿರುವ ಚೀನಿ ಮಾಧ್ಯಮಗಳು ಕಳೆದ ಕೆಲವು ದಿನಗಳಿಂದ ಕಟುವಾದ ಹೇಳಿಕೆಗಳನ್ನು ನೀಡುತ್ತಿವೆ. ತನ್ನ ಸಹನೆಯನ್ನು ಪರೀಕ್ಷಿಸಬಾರದೆಂದು ಚೀನಾದ ರಕ್ಷಣಾ ಸಚಿವಾಲಯವು ಶುಕ್ರವಾರ ಹೇಳಿಕೆಯೊಂದರಲ್ಲಿ ಭಾರತಕ್ಕೆ ಎಚ್ಚರಿಕೆ ನೀಡಿತ್ತು.

   ಬಲಾಢ್ಯತೆಯಲ್ಲಿ ತನಗಿಂತ ತುಂಬಾ ಮಿಗಿಲಾಗಿರುವ ದೇಶಕ್ಕೆ ಭಾರತವು ಸವಾಲೆಸೆದಿದೆಯೆಂದು ಸಂಪಾದಕೀಯವು ತಿಳಿಸಿದೆ. ಒಂದು ವೇಳೆ ಯುದ್ಧ ನಡೆದಲ್ಲಿ ಅದು ಅತ್ಯಂತ ಸ್ಪಷ್ಟವಾದ ಫಲಿತಾಂಶವನ್ನು ನೀಡಲಿದೆಯೆಂದು ಸಂಪಾದಕೀಯ ತಿಳಿಸಿದೆ.
ಭಾರತದ ಉಡಾಫೆಯ ವರ್ತನೆಯು ಚೀನಿಯರಿಗೆ ಅಘಾತವನ್ನುಂಟು ಮಾಡಿದೆಯೆಯೆಂದು ಅದು ಹೇಳಿದೆ.

 ‘‘ಪ್ರಧಾನಿ ಮೋದಿಯವರ ಸರಕಾರವು, ಚೀನಿ ಸೇನೆಯ ಅಭೂತಪೂರ್ವ ಶಸ್ತ್ರಾಸ್ತ್ರ ಸಾಮರ್ಥ್ಯ ಹಾಗೂ ಸೇನಾಸಾಮರ್ಥ್ಯದ ಬಗ್ಗೆ ಅರಿತುಕೊಳ್ಳಬೇಕಾಗಿದೆ. ಚೀನಾದ ಸೇನಾಪಡೆಗಳಿಗೆ ಭಾರತದ ಪಡೆಗಳು ಸರಿಸಾಟಿಯಲ್ಲ. ಒಂದು ವೇಳೆ ಯುದ್ಧ ಹರಡಿದಲ್ಲಿ ಪಿಎಲ್‌ಎ ಸೇನೆಯು ಗಡಿಪ್ರದೇಶದಲ್ಲಿರುವ ಎಲ್ಲಾ ಭಾರತೀಯ ಸೈನಿಕರನ್ನು ನಾಶಪಡಿಸುವ ನಿಚ್ಚಳ ಸಾಮರ್ಥ್ಯವನ್ನು ಹೊಂದಿವೆ’’ ಎಂದು ಗ್ಲೋಬಲ್ ಟೈಮ್ಸ್‌ನ ಸಂಪಾದಕೀಯ ಹೇಳಿದೆ.
 ಮೋದಿ ಸರಕಾರವು ಬೇಜವಾಬ್ದಾರಿಯೊಂದಿಗೆ ಅಂತಾರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸುತ್ತಿದೆ ಹಾಗೂ ಭಾರತ  ರಾಷ್ಟ್ರೀಯ ಗೌರವ ಹಾಗೂ ಅದರ ಶಾಂತಿಯುತ ಅಭಿವೃದ್ಧಿಯನ್ನು ಅಪಾಯಕ್ಕೆ ಸಿಲುಕಿಸಿದೆಯೆಂದು ಪತ್ರಿಕೆ ಎಚ್ಚರಿಕೆ ನೀಡಿದೆ.

  ಬಾಕ್ಸ್ ಮೋದಿ ಸರಕಾರವು ಪ್ರಾದೇಶಿಕ ಭದ್ರತೆಯ ಬಗ್ಗೆ ಬೇಜವಾಬ್ದಾರಿತನದೊಂದಿಗೆ ನಡೆದುಕೊಳ್ಳುತ್ತಿದೆ ಹಾಗೂ ಭಾರತದ ವಿಧಿಯೊಂದಿಗೆ ಹಾಗೂ ಅದರ ಜನತೆಯ ಕ್ಷೇಮದೊಂದಿಗೆ ಜೂಜಾಡುತ್ತಿದೆ. ಒಂದು ವೇಳೆ ಮೋದಿ ಸರಕಾರವು ತನ್ನ ನಿಲುವನ್ನು ಬದಲಾಯಿಸಲು ನಿರಾಕರಿಸಿದಲ್ಲಿ ಅದು ಭಾರತವನ್ನು ಯುದ್ಧದೆಡೆಗೆ ತಳ್ಳಲಿದೆ’’ ಗ್ಲೋಬಲ್ ಟೈಮ್ಸ್ ಸಂಪಾದಕೀಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News