×
Ad

ಬೀಡಿ ಕಾರ್ಮಿಕರ ಪಿಂಚಣಿಗೆ ಆಧಾರ್ ಜೋಡಣೆ

Update: 2017-08-05 23:15 IST

ಪುತ್ತೂರು, ಆ. 5: ಉದ್ಯಮಿ ಕೆ. ಎಸ್. ಅಶೋಕ್ ಕುಮಾರ್ ರೈ ಕೋಡಿಂಬಾಡಿ ಪ್ರವರ್ತನೆಯ ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ಜನಸೇವಾ ಕೇಂದ್ರದ ವತಿಯಿಂದ ಶನಿವಾರ ಇಲ್ಲಿನ ಬೈಪಾಸ್‌ನಲ್ಲಿರುವ ಆರ್‌ಇಬಿ ಎನ್‌ಕ್ಲೇವ್‌ನ ಕಚೇರಿಯಲ್ಲಿ ಬೀಡಿ ಕಾರ್ಮಿಕರ ಪಿಂಚಣಿಗೆ ಆಧಾರ್ ಕಾರ್ಡ್ ಜೋಡಣೆ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕೆ.ಎಸ್. ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಸರಕಾರದ ಯಾವುದೇ ಸವಲತ್ತುಗಳು ಸಿಗಬೇಕಾದರೆ ಆಧಾರ್ ಕಾರ್ಡ್ ಜೋಡಣೆ ಅತ್ಯಂತ ಕಡ್ಡಾಯವಾಗಿದೆ. ಅದರಲ್ಲೂ ಬೀಡಿ ಕಾರ್ಮಿಕರಿಗೆ ಇದು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಬೀಡಿ ಕಾರ್ಮಿಕರ ಪಿಂಚಣಿಗೆ ಆಧಾರ್ ಕಾರ್ಡ್ ಜೋಡಣೆಯನ್ನು ಟ್ರಸ್ಟ್ ವತಿಯಿಂದ ಉಚಿತವಾಗಿ ಮಾಡಲಾಗುತ್ತಿದೆ ಎಂದರು.

ಕಾರ್ಮಿಕರ ಪಿಂಚಣಿ ಯೋಜನೆಗೂ ಇಲ್ಲಿ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಹಲವಾರು ಅರ್ಜಿಗಳು ಬಂದಿದ್ದು, ಮಹಿಳೆಯರು ತಮ್ಮ ಮನೆಯಲ್ಲಿರುವ ಪುರುಷರನ್ನು ಇಂತಹ ಯೋಜನೆಗಳ ಫಲಾನುಭವ ಪಡೆಯುವಂತೆ ಹೆಚ್ಚಾಗಿ ಒತ್ತಾಯಿಸಬೇಕು. ಇದರಿಂದ ವಿಧ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವರ್ಷಕ್ಕೆ ರೂ. 10,000 ಸ್ಕಾಲರ್‌ಶಿಪ್, ಮದುವೆ ಸಮಾರಂಭಕ್ಕೆ ರೂ. 50,000, ಹಾಗೂ ಕಾರ್ಮಿಕರಿಗೆ ಏನಾದರೂ ಅವಘಡ ಸಂಭವಿಸಿದ್ದಲ್ಲಿ ರೂ. 2ಲಕ್ಷದ ಇನ್ಸುರೆನ್ಸ್ ವ್ಯವಸ್ಥೆ ಸಿಗುತ್ತದೆ. ಅಲ್ಲದೆ 60 ವರ್ಷ ದಾಟಿದ ಕಾರ್ಮಿಕರಿಗೆ ತಿಂಗಳಿಗೆ ರೂ. 1,000ದಂತೆ ಪೆನ್ಸನ್ ಯೋಜನೆ ಇದೆ. ಇದರ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆಯುವಂತೆ ಸಲಹೆ ನೀಡಿದರು.

ಉಡುಪಿ ಜಿಲ್ಲಾ ಸಿಎಸ್‌ಇ ಅಧೀಕ್ಷಕ ಸಂತೋಷ್ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸಮಾಜದಲ್ಲಿರುವ ನಿರ್ಗತಿಕರ, ಬಡವರ, ಶೋಷಿತರ ಸೇವೆ ಮಾಡುವ ಮನೋಭಾವ ಇರುವವರು ಅತೀ ವಿರಳ. ಆದರೆ ತನ್ನ ಸೇವಾ ಕಾರ್ಯದ ಮೂಲಕ ಜನಮೆಚ್ಚುವ ಕೆಲಸವನ್ನು ಅಶೋಕ್ ಕುವಾರ್ ರೈ ಮಾಡುತ್ತಿದ್ದಾರೆ ಎಂದರು.

ಶಬರೀಶ್ ಶೆಟ್ಟಿ ಆಧಾರ್ ಕಾರ್ಡ್ ಜೋಡಣೆಯ ಕುರಿತಾಗಿ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸುಮಾರು 500ಕ್ಕೂ ಮಿಕ್ಕಿ ಬೀಡಿ ಕಾರ್ಮಿಕರು ತಮ್ಮ ಪಿಂಚಣಿಗೆ ಆಾರ್ ಕಾರ್ಡ್ ಜೋಡಣೆ ಮಾಡಿಸಿದರು.

ಈ ಸಂದರ್ಭದಲ್ಲಿ 5 ಮಂದಿಗೆ ಉಚಿತ ಡ್ರೈವಿಂಗ್ ಲೈಸೆನ್ಸ್ ಹಾಗೂ 16 ಮಂದಿ ಫಲಾನುಭವಿಗಳಿಗೆ ಉಚಿತ ಹೊಲಿಗೆ ಯಂತ್ರವನ್ನು ನೀಡಲಾಯಿತು. 45 ದಿನಗಳ ಹೊಲಿಗೆ ಯಂತ್ರ ತರಬೇತಿ ಶಿಬಿರದ ಮೊದಲ ಬ್ಯಾಚ್ ಮುಕ್ತಾಯಗೊಂಡಿದ್ದು, 2ನೇ ಬ್ಯಾಚ್ ಶೀಘ್ರವೇ ಆರಂಭವಾಗಲಿದೆ ಎಂದು ಅಶೋಕ್ ರೈ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಹೊಲಿಗೆ ತರಬೇತಿ ಶಿಬಿರದ ತರಬೇತುದಾರೆ ಲತಾ, ಕೃಷ್ಣಪ್ರಸಾದ್, ಸಿಬಂದಿಗಳಾದ ಅಪೇಕ್ಷಾ, ಮಹೇಶ್ಉಪಸ್ಥಿತರಿದ್ದರು. ವಿಜಿತ್ ಸ್ವಾಗತಿಸಿ, ಲಿಂಗಪ್ಪ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News