ಅಂತರ್ ಧರ್ಮ ವಿವಾಹ ರದ್ದು: ಕೇರಳ ಸರಕಾರ, ಎನ್‌ಐಎಗೆ ಸುಪ್ರೀಂ ನೊಟೀಸ್
ಹೊಸದಿಲ್ಲಿ, ಆ. 5: ಹಿಂದೂ ಮಹಿಳೆಯನ್ನು ಇಸ್ಲಾಂಗೆ ಮತಾಂತರಿಸಿ ಆದ ವಿವಾಹವನ್ನು ರದ್ದುಗೊಳಿಸುವಂತೆ ಉಚ್ಚ ನ್ಯಾಯಾಲಯ ನೀಡಿದ ಆದೇಶವನ್ನು ಪ್ರಶ್ನಿಸಿ ಮುಸ್ಲಿಂ ಯುವಕ ಸಲ್ಲಿಸಿದ ದಾವೆಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಶುಕ್ರವಾರ ರಾಷ್ಟ್ರೀಯ ತನಿಖಾ ಸಂಸ್ಥೆ ಹಾಗೂ ಕೇರಳ ಸರಕಾರದ ಪ್ರತಿಕ್ರಿಯೆ ಕೇಳಿದೆ. ಇದು ಸೂಕ್ಷ್ಮ ವಿಚಾರ. ಗಂಭೀರ ವಿಚಾರ. ನಿಮ್ಮಲ್ಲಿರುವ ಎಲ್ಲ ದಾಖಲೆಗಳನ್ನು ನೀಡಿ ಎಂದು ಎನ್‌ಐಎ ಹಾಗೂ ಯುವತಿಯ ತಂದೆಗೆ ನ್ಯಾಯಾಲಯ ಹೇಳಿದೆ.
ಹಾಗೂ ವಿಚಾರಣೆಯನ್ನು ಆಗಸ್ಟ್ 16ಕ್ಕೆ ಮುಂದೂಡಿದೆ. ಪುತ್ರಿಯ ವಿವಾಹದ ಪ್ರತಿಪಾದನೆಗೆ ಹಾಗೂ ಮತಾಂತರ, ಇಸ್ಲಾಂ ಮೂಲಭೂತವಾದಕ್ಕೆ ಬೆಂಬಲ ನೀಡುವ ದಾಖಲೆಗಳನ್ನು ತರುವಂತೆ ನ್ಯಾಯಮೂರ್ತಿ ಜೆ.ಎಸ್. ಖೆಹರ್ ಹಾಗೂ ಡಿ.ವೈ. ಚಂದ್ರಚೂಡ್ ಇದ್ದ ವಿಭಾಗೀಯ ನ್ಯಾಯಪೀಠ ಮಹಿಳೆಯ ತಂದೆಗೆ ತಿಳಿಸಿದೆ. ಪ್ರಕರಣದ ಸತ್ಯಾಸತ್ಯತೆ ಖಚಿತಪಡಿಸಿಕೊಳ್ಳಲು ಆಕೆಯನನು 24 ಗಂಟೆಯೊಳಗೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದು ನ್ಯಾಯಪೀಠ ಯುವತಿಯ ತಂದೆ ಅಶೋಕನ್ ಕೆ.ಎಂ.ಗೆ ತಿಳಿಸಿದೆ.
27 ವರ್ಷದ ಶಫಿನ್ ಜಹಾನ್ ಪರವಾಗಿ ಹಿರಿಯ ವಕೀಲರಾದ ಕಪಿಲ್ ಸಿಬಲ್ ಹಾಗೂ ಇಂದಿರಾ ಜೈಸಿಂಗ್ ನ್ಯಾಯಾಲಯಕ್ಕೆ ಹಾಜರಾಗಿದ್ದು, ತಮ್ಮ ಕಕ್ಷಿದಾರನ ಪತ್ನಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಎಂದು ವಿನಂತಿಸಿದ್ದಾರೆ ಹಾಗೂ ಇದು ಲವ್ ಜಿಹಾದ್ ಪ್ರಕರಣ ಅಲ್ಲ ಎಂದು ಹೇಳಿದ್ದಾರೆ. ತಮ್ಮ ಕಕ್ಷಿದಾರ ವೈವಾಹಿಕ ವೇದಿಕೆಯ ವೆಬ್‌ಸೈಟ್‌ನಲ್ಲಿ ಆಕೆಯನ್ನು ಭೇಟಿಯಾಗುವ ಮೊದಲು ಆಕೆ ಇಸ್ಲಾಂಗೆ ಮತಾಂತರಗೊಂಡಿದ್ದರು. ಹಾಗೂ ಆದರೆ, ಉಚ್ಚ ನ್ಯಾಯಾಲಯ ಈ ವಿವಾಹವನ್ನು ರದ್ದುಗೊಳಿಸಿದೆ ಎಂದು ಸಿಬಲ್ ತಿಳಿಸಿದ್ದಾರೆ.