×
Ad

‘ಪವಿತ್ರಾತ್ಮ ಅಭಿಷೇಕೋತ್ಸವ-2017’ ಕಾರ್ಯಕ್ರಮದ ಲಾಂಛನ ಬಿಡುಗಡೆ

Update: 2017-08-06 14:23 IST

ಮಂಗಳೂರು, ಆ.6: ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಕೆಥೋಲಿಕ್ ಕ್ಯಾರಿಸ್ಮಾಟಿಕ್ (ಆಧ್ಯಾತ್ಮಿಕ) ಸಂಸ್ಥೆಯು ಕರ್ನಾಟಕ ರಾಜ್ಯ ಮಟ್ಟದ ಕೆಥೋಲಿಕ್ ಕ್ಯಾರಿಸ್ಮಾಟಿಕ್ ಧ್ಯಾನಕೂಟ ‘ಪವಿತ್ರಾತ್ಮ ಅಭಿಷೇಕೋತ್ಸವ- 2017’ವನ್ನು ನಾಲ್ಕು ದಿನಗಳ ಕಾಲ ಮಂಗಳೂರಿನ ರೊಜಾರಿಯೋ ಕೆಥೆಡ್ರಲ್‌ನಲ್ಲಿ ನವೆಂಬರ್‌ನಲ್ಲಿ ಹಮ್ಮಿಕೊಂಡಿದೆ. ಇದರ ಲಾಂಛನವನ್ನು ಮಂಗಳೂರು ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜ ರವಿವಾರ ಬಿಷಪ್ ಹೌಸ್‌ನಲ್ಲಿ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರು, ನ.9ರಿಂದ 12ರ ತನಕ ರೊಜಾಯೋ ಕೆಥೆಡ್ರಲ್ ಮೈದಾನಿನಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕರ್ನಾಟಕದ 14 ಧರ್ಮ ಪ್ರಾಂತಗಳ 500 ಮಂದಿಗೆ ತರಬೇತಿ ನೀಡಲಾಗುವುದು. ಸಂಜೆ 4 ರಿಂದ 8 ರ ತನಕ ಧ್ಯಾನ ಕೂಟ ಜರಗಲಿದ್ದು, ದಿನಂಪ್ರತಿ ಸುಮಾರು 10,000 ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ರಾಜ್ಯದ ಎಲ್ಲಾ ಬಿಷಪರು ಪಾಲ್ಗೊಳ್ಳುವರು ಎಂದರು.
 

ಆಧ್ಯಾತ್ಮಿಕ ನವೀಕರಣ ಬಯಸುವ ಕ್ರೈಸ್ತರಿಗೆ ಈ ಧ್ಯಾನಕೂಟ ಸಹಾಯಕವಾಗಲಿದೆ. ದೇವರ ಪ್ರೀತಿಗೆ ಪಾತ್ರವಾಗಲು, ಬದುಕಿನಲ್ಲಿ ನೆಮ್ಮದಿ ಮತ್ತು ಶಾಂತಿಯನ್ನು ಪಡೆದು ಆರೋಗ್ಯಪೂರ್ಣ ಜೀವನ ನಡೆಸಲು ಇದು ಪೂರಕವಾಗಲಿದೆ ಎಂದು ಹೇಳಿದ ಬಿಷಪ್ ಈ ಧ್ಯಾನ ಕೂಟದ ಮೂಲಕ ಕುಟುಂಬದಲ್ಲಿ, ಸಮಾಜದಲ್ಲಿ, ಪರಿಸರದಲ್ಲಿ ಶಾಂತಿ ನೆಲೆಸಲಿ ಎಂದು ಶುಭ ಹಾರೈಸಿದರು.
 

ಧ್ಯಾನ ಕೂಟದ ಸಂಚಾಲಕ ಫಾ. ಒನಿಲ್ ಡಿಸೋಜ ಮಾತನಾಡಿ ಕಾರ್ಯಕ್ರಮದ ಯಶಸ್ಸಿಗೆ ಮಂಗಳೂರು ಧರ್ಮ ಪ್ರಾಂತದ ಎಲ್ಲಾ 117 ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆಗಳು ರವಿವಾರದಿಂದಲೇ ಆರಂಭವಾಗಿವೆ ಎಂದರು.

ಧ್ಯಾನಕೂಟದ ಪ್ರಾದೇಶಿಕ ಸೇವಾ ಸಮಿತಿಯ ಅಧ್ಯಕ್ಷ ಅರುಣ್ ಲೋಬೊ ಸ್ವಾಗತಿಸಿದರು. ಉಪಾಧ್ಯಕ್ಷ ಬರ್ಡಿ ಮಸ್ಕರೇನ್ಹಸ್, ಕಾರ್ಯದರ್ಶಿ ಎಲಿಯಾಸ್ ಕುವೆಲ್ಲೊ, ರಾಜ್ಯ ಸಮಿತಿ ಕಾರ್ಯದರ್ಶಿ ಡೋಲ್ಫಿ ಲೋಬೊ, ಫೋರ್ ವಿಂಡ್ಸ್ ಮಾಸ್ ಕಮ್ಯೂನಿಕೇಶನ್‌ನ ನಿರ್ದೇಶಕ ಇ. ಫೆರ್ನಾಂಡಿಸ್ ಉಪಸ್ಧಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News