ಸಚಿವ ಡಿಕೆಶಿ ಮನೆಯಲ್ಲಿ ಸಿಕ್ಕಿದೆ ಎನ್ನಲಾದ ಕಂತೆ ಕಂತೆ ನೋಟುಗಳ ವಿಡಿಯೋದ ಹಿಂದಿನ ರಹಸ್ಯವಿದು..

Update: 2017-08-06 15:08 GMT

ಹೊಸದಿಲ್ಲಿ,ಆ.6: ದುರ್ಗಾ ಮೆನನ್ ಎನ್ನುವವರು ತನ್ನ ಟ್ವಿಟರ್ ಖಾತೆಯಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ವಿದ್ಯುತ್ ಸಚಿವ ಪಿಯೂಷ್ ಗೋಯಲ್ ಮತ್ತು ಇತರ ಹಲವಾರು ಹಿರಿಯ ಬಿಜೆಪಿ ನಾಯಕರು ಮೆನನ್ ಅವರ ಟ್ವಿಟರ್ ಹ್ಯಾಂಡಲ್ ಫಾಲೊ ಮಾಡುತ್ತಿದ್ದಾರೆ. ‘‘ ಕರ್ನಾಟಕದ ಸಚಿವ ಡಿ.ಕೆ.ಶಿವಕುಮಾರ ಅವರ ಮನೆಯ ಮೇಲೆ ನಡೆದ ದಾಳಿ ಸಂದರ್ಭ ಕೇವಲ ಒಂದು ಲಾಕರ್‌ನ್ನು ತೆರೆಯಲಾಗಿದೆ. ಕಾಂಗ್ರೆಸಿಗರೇ,ಎಲ್ಲಿ ಬಚ್ಚಿಟ್ಟುಕೊಂಡಿದ್ದೀರಿ?’’ ಎಂಬ ಬರಹ ವೀಡಿಯೊದ ಜೊತೆಯಲ್ಲಿದೆ. ನೋಟುಗಳಿಂದ ತುಂಬಿರುವ ಲಾಕರ್ ಮತ್ತು ನೆಲದ ಮೇಲಿರುವ ನಗದು ಹಣ ತುಂಬಿರುವ ಹಲವಾರು ಬ್ಯಾಗ್‌ಗಳು ಈ ವೀಡಿಯೊದಲ್ಲಿವೆ.

"ಸಚಿವ ಡಿ.ಕೆ. ಶಿವಕುಮಾರ್ ಅವರ ನಿವಾಸದಲ್ಲಿ ಸಿಕ್ಕಿರುವ ನೋಟಿನ ಕಂತೆಗಳು" ಎನ್ನುವ ತಲೆಬರಹದೊಂದಿಗೆ ವೈರಲ್ ಆದ ಈ ವಿಡಿಯೋದ ಹಿಂದಿನ ಅಸಲಿಯತ್ತನ್ನು ಆಲ್ಟ್ ನ್ಯೂಸ್ ಡಾಟ್ ಇನ್ (altnews.in) ಬಹಿರಂಗಪಡಿಸಿದೆ. 

ಇದೇ ವೀಡಿಯೊ ಫೇಸ್‌ಬುಕ್‌ನಲ್ಲಿಯೂ ವೈರಲ್ ಆಗಿದೆ. ‘‘ಶಿವಕುಮಾರ ಅವರ ಮನೆಯ ಕೇವಲ ಒಂದು ಲಾಕರ್ ರೂಮನ್ನು ಮಾತ್ರ ತೆರೆಯಲಾಗಿದೆ’’ ಎಂಬ ಬರಹ ಹೆಚ್ಚಿನ ಫೇಸ್‌ಬುಕ್ ಪೋಸ್ಟ್‌ಗಳಲ್ಲಿದೆ. ವಾಟ್ಸಾಪ್‌ನಲ್ಲಿ ವೈರಲ್ ಆಗಿರುವ ಈ ವೀಡಿಯೊವನ್ನು ಬಳಕೆದಾರರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡುತ್ತಿರುವುದು ಸ್ಪಷ್ಟವಾಗಿದೆ. ಮೆನನ್ ಕೂಡ ತನಗೆ ಈ ವೀಡಿಯೊ ವ್ಯಾಟ್ಸಾಪ್ ಮೂಲಕ ಬಂದಿತ್ತು ಎಂದು ಹೇಳಿಕೊಂಡಿದ್ದಾರೆ.

ಆದರೆ ವಾಸ್ತವದಲ್ಲಿ ಡಿಕೆಶಿ ಮನೆಯ ಮೇಲಿನ ಆದಾಯ ತೆರಿಗೆ ಇಲಾಖೆಯ ದಾಳಿಯದು ಎಂದು ಹೇಳಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಈ ವೀಡಿಯೊ ಕಳೆದ ವರ್ಷ ದಿಲ್ಲಿಯಲ್ಲಿರುವ ರೋಹಿತ್ ಟಂಡನ್ ನೇತೃತ್ವದ ಟಿ ಆ್ಯಂಡ್ ಟಿ ಲಾ ಫರ್ಮ್‌ನ ಮೇಲೆ ನಡೆದಿದ್ದ ಐಟಿ ದಾಳಿಯದ್ದಾಗಿದೆ. 2016, ಡಿಸೆಂಬರ್‌ನಲ್ಲಿ ಟಂಡನ್ ಅವರ ಈ ಕಾನೂನು ಸಂಸ್ಥೆ ಮತ್ತು ನಿವಾಸಗಳ ಮೇಲೆ ನಡೆದಿದ್ದ ದಾಳಿಯ ವೇಳೆ ಬರೋಬ್ಬರಿ 13 ಕೋ.ರೂ.ನಗದು ಪತ್ತೆಯಾಗಿತ್ತು.

ಈಗ ಡಿಕೆಶಿ ಮನೆಯ ಮೇಲಿನ ದಾಳಿಯ ವೀಡಿಯೊ ಎಂದು ಶೇರ್ ಆಗುತ್ತಿರುವ ಇದನ್ನು ಮೊದಲು ಪತ್ರಕರ್ತ ಶಿವ ಸನ್ನಿ ಅವರು 2016,ಡಿ.10ರಂದು ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು ಮತ್ತು ‘‘ದಿಲ್ಲಿಯ ಗ್ರೇಟರ್ ಕೈಲಾಸ್‌ನ ಟಿ ಆ್ಯಂಡ್ ಟಿ ಲಾ ಫರ್ಮ್‌ನ ಮೇಲೆ ದಿಲ್ಲಿ ಪೊಲೀಸರ ದಾಳಿಯ ವೇಳೆ ವಶಪಡಿಕೊಳ್ಳಲಾದ 8 ಕೋಟಿ ರೂ.(2 ಕೋ.ರೂ.ಗಳ ಹೊಸನೋಟುಗಳು ಸೇರಿದಂತೆ) ನಗದು ಹಣದ ವೀಡಿಯೋ’’ ಎಂದೂ ಅವರು ಉಲ್ಲೇಖಿಸಿದ್ದರು. ಈ ವೀಡಿಯೊ ಕೂಡ ಇಲ್ಲಿದೆ.

ಇತ್ತಿಚೆಗೆ ಕೇರಳದಲ್ಲಿ ರಾಜೇಶ್ ಎಂಬ ಬಿಜೆಪಿ ಕಾರ್ಯಕರ್ತನ ಹತ್ಯೆ ನಡೆದಿತ್ತು. ರಾಜೇಶ್‌ನದೆಂದು ಹೇಳಿಕೊಂಡು ನಕಲಿ ವೀಡಿಯೊವೊಂದನ್ನು ಬ್ರಝಿಲ್‌ನಿಂದ ಪೋಸ್ಟ್ ಮಾಡಲಾಗಿತ್ತು. ಇಂದಿನ ದಿನಗಳಲ್ಲಿ ಸುದ್ದಿಯಾಗಬಹುದಾದ ಪ್ರತಿಯೊಂದು ರಾಜಕೀಯ ವಿಷಯಕ್ಕೂ ಸಂಬಂಧಿಸಿದಂತೆ ನಕಲಿ ವೀಡಿಯೊಗಳನ್ನು ಪೋಸ್ಟ್ ಮಾಡಲಾಗುತ್ತಿದೆ. ಹೆಚ್ಚಾಗಿ ವೀಡಿಯೊಗಳನ್ನು ಬಿಜೆಪಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಲಾಭವಾಗುವ ಉದ್ದೇಶದಿಂದ ಹರಿಬಿಡಲಾಗುತ್ತಿದೆ.

ಕೃಪೆ: altnews.in

Full View

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News