ಆಟಿದ ತಿನಿಸುಗಳು ರೋಗ ನಿರೋಧಕ: ವಾಮನ್ ಕೋಟ್ಯಾನ್
ಪಡುಬಿದ್ರೆ, ಆ. 6: ನಮ್ಮ ಹಿರಿಯರು ಮುಂದಾಲೋಚನೆಯಿಂದ ಆಟಿ ತಿಂಗಳಲ್ಲಿ ತಿನಿಸುಗಳನ್ನು ಸಂಗ್ರಹ ಮಾಡುತ್ತಿದ್ದರು. ಅವೆಲ್ಲವೂ ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದವು. ಅದನ್ನು ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಜಾನಪದ ವಿದ್ವಾಂಸ ವಾಮನ ಕೋಟ್ಯಾನ್ ನಡಿಕುದ್ರು ಕರೆ ನೀಡಿದರು.
ಅವರು ರವಿವಾರ ಪಡುಬಿದ್ರೆಯ ರೋಟರಿ ಕ್ಲಬ್ ಮತ್ತು ಇನ್ನರ್‌ವೀಲ್ ಕ್ಲಬ್ ಆಶ್ರಯದಲ್ಲಿ ಪಡುಬಿದ್ರೆಯ ಅಂಬೇಡ್ಕರ್ ಭವನದಲ್ಲಿ ನಡೆದ "ಆಟಿದ ಪಂಥ" ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಉಡುಪಿ ಜಿಲ್ಲಾ ಪಂ. ಮಾಜಿ ಸದಸ್ಯೆ ನಯನಾ ಗಣೇಶ್ ಉದ್ಯಾವರ ಸಾಂಪ್ರದಾಯಿಕವಾಗಿ ಪಂಥ ಉದ್ಘಾಟಿಸಿ, ಮಹಿಳಾಮಣಿಗಳ ಸೃಜನಶೀಲತೆಗೆ ಪೂರಕವಾಗಿ ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಹಮ್ಮಿಕೊಂಡ ಈ ಪಂಥವು ಅನುಕರಣೀಯವಾದುದು. ಆಟಿ ಆಚರಣೆಯು ಮೂಢನಂಬಿಕೆಯಲ್ಲ. ಅದೊಂದು ಮೂಲ ನಂಬಿಕೆ ಎಂದರು.
ಪಡುಬಿದ್ರೆ ರೋಟರಿ ಕ್ಲಬ್ ಅಧ್ಯಕ್ಷ ರಮೀರ್ ಹುಸೈನ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಸುನೀತಾ ಭಕ್ತ ವತ್ಸಲ, ಪಡುಬಿದ್ರೆ ಕಲ್ಲಟ್ಟೆ ಶ್ರೀ ಜಾರಂದಾಯ ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಜೆಡಿಎಸ್ ಕಾಪು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸುಧಾಕರ ಶೆಟ್ಟಿ ಹೆಜಮಾಡಿ, ರೋಟರಿ ವಲಯ ಸೇನಾನಿ ಕೃಷ್ಣ ಬಂಗೇರ ಮುಖ್ಯ ಅತಿಥಿಗಳಾಗಿದ್ದರು.
ಕಳೆದ ಕೆಲವು ಸಮಯಗಳಿಂದ ಕರಾವಳಿಯಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮಗಳು ನಡೆಯುತಿದೆ. ಆದರೆ ಪಡುಬಿದ್ರೆ ರೋಟರಿ ಕ್ಲಬ್ ಮತ್ತು ಇನ್ನರ್ ವೀಲ್ ಕ್ಲಬ್ ಸಂಪ್ರದಾಯಬದ್ಧ ಮಹಿಳೆಯರ ಅಡುಗೆ ರುಚಿಯ ಆಟಿಡೊಂಜಿ ಪಂಥ ಎಂಬ ಅಪರೂಪದ ಕಾರ್ಯಕ್ರಮ ನಡೆಯಿತು. ಪಡುಬಿದ್ರೆ ಹಾಗೂ ಆಸುಪಾಸಿನ ಒಟ್ಟು 7 ತಂಡಗಳು ಆಟಿ ತಿನಿಸುಗಳ ತಯಾರಿಕಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಹೆಜಮಾಡಿಯ ಮಟ್ಟು ಮೊಗವೀರ ಬಿ ತಂಡ ಪ್ರಥಮ, ಪಡುಬಿದ್ರೆಯ ಕುಂಭ ಕಂಠಿನಿ ಸಿ ತಂಡವು ದ್ವಿತೀಯ ಹಾಗೂ ಹೆಜಮಾಡಿಯ ಮಟ್ಟು ಮೊಗವೀರ ಎ ತಂಡ ತೃತೀಯ ಸ್ಥಾನ ಪಡೆಯಿತು. ಮುಖ್ಯ ಅತಿಥಿಗಳು ವಿಜೇತರಿಗೆ ಬಹುಮಾನ ವಿತರಿಸಿದರು.
ರೋಟರಿ ಕಾರ್ಯದರ್ಶಿ ಸಂದೀಪ್ ಪಲಿಮಾರು ಪ್ರಸ್ತಾವಿಸಿದರು. ಶಾರದಾ ಬಂಗೇರ ಅನಿಸಿಕೆ ವ್ಯಕ್ತಪಡಿಸಿದರು. ಇನ್ನರ್‌ವೀಲ್ ಕಾರ್ಯದರ್ಶಿ ಕಸ್ತೂರಿ ಪ್ರವೀಣ್ ವಂದಿಸಿದರು.