ಅಲೇಕಳ: ಮದನಿ ಶಿಕ್ಷಣ ಸಂಸ್ಥೆಯಲ್ಲಿ ವನಮಹೋತ್ಸವ
ಮಂಗಳೂರು, ಆ.6: ಉಳ್ಳಾಲ ಅಲೇಕಳ ಮದನಿ ಪ್ರೌಢಶಾಲೆಯ ಮದನಿ ಇಕೋ ಕ್ಲಬ್ ವತಿಯಿಂದ ದೇರಳಕಟ್ಟೆ ರೋಟರಿ ಕ್ಲಬ್‌ನ ಸಹಕಾರದಲ್ಲಿ ಶಾಲೆಯ ಆವರಣದಲ್ಲಿ ವನಮಹೋತ್ಸವ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ಕ್ಲಬ್ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ನಮ್ಮ ಬದುಕಿಗಾಗಿ ಸಸ್ಯ ಸಂಪತ್ತು ನಾಶ ಮಾಡುವುದರಿಂದ ಮಾನವನ ಆರೋಗ್ಯದಲ್ಲೂ ಏರುಪೇರು ಸಂಭವಿಸುತ್ತಿದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಒದಗಿಸುವ ನಿಟ್ಟಿನಲ್ಲಿ ಈಗಲೇ ಕಾರ್ಯಪ್ರವೃತ್ತರಾಗಬೇಕಿದ್ದು, ಆ ನಿಟ್ಟಿನಲ್ಲಿ ರೋಟರಿ ಕ್ಲಬ್ ಗೋಗ್ರೀನ್ ಯೋಜನೆಯಡಿ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಸಾವಿರ ಗಿಡಗಳನ್ನು ವಿತರಿಸಲಿದೆ ಎಂದರು.
ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಟಿ.ಇಸ್ಮಾಯಿಲ್ ಮಾತನಾಡಿ, ಪ್ರತಿಯೋರ್ವ ವಿದ್ಯಾರ್ಥಿಯೂ ಮನೆಯ ಆವರಣದಲ್ಲಿ ಗಿಡ ನೆಟ್ಟು ಪೋಷಿಸುವ ಕೆಲಸ ಇಂದಿನಿಂದಲೇ ಮಾಡಲು ಮುಂದಾಗಬೇಕು ಎಂದರು.
ಸಂಸ್ಥೆಯ ಸಂಚಾಲಕ ಯು.ಎನ್.ಇಬ್ರಾಹಿಂ, ಉಪಾಧ್ಯಕ್ಷ ಯು.ಎ.ಖಾಸಿಂ, ಸಮಿತಿ ಸದಸ್ಯರಾದ ಅಹ್ಮದ್ ಬಾವ, ಮುನ್ನೂರು ಗ್ರಾಪಂ ಅಧ್ಯಕ್ಷೆ ರೂಪಾ ಶೆಟ್ಟಿ, ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷ ವಿಕ್ರಂ ದತ್ತ, ಪಿ.ಡಿ.ಶೆಟ್ಟಿ, ಕೌನ್ಸಿಲರ್ ಯು.ಎ.ಇಸ್ಮಾಯಿಲ್, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಮೀರಾ ಜೆ. ಮತ್ತಿತರರು ಉಪಸ್ಥಿತರಿದ್ದರು.
ಪ್ರೌಢಶಾಲೆಯ ಮುಖ್ಯ ಶಿಕ್ಷಕ ಇಬ್ರಾಹಿಂ ಪಿ. ವಂದಿಸಿದರು. ಶಿಕ್ಷಕ ದೇವಪ್ಪ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.