ಸ್ಕೌಟ್ಸ್-ಗೈಡ್ಸ್ ವಿದ್ಯಾರ್ಥಿಗಳಿಂದ ನಿರಂತರ ಸ್ವಚ್ಛತೆಗೆ ಚಾಲನೆ
ಮಂಗಳೂರು, ಆ.6: ಎಳೆವೆಯಲ್ಲೇ ಸ್ವಚ್ಛತೆ, ಕಸ ವಿಲೇವಾರಿ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸ್ಕೌಟ್ಸ್-ಗೈಡ್ಸ್ ಹಮ್ಮಿಕೊಂಡಿರುವ ಕಾರ್ಯಕ್ರಮ ಉತ್ತಮ ಬೆಳವಣಿಗೆಯಾಗಿದೆ ಎಂದು ಉಳ್ಳಾಲ ನಗರಸಭಾಧ್ಯಕ್ಷ ಹುಸೈನ್ ಕುಂಞಿಮೋನು ಹೇಳಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಆಶ್ರಯದಲ್ಲಿ ನಿರಂತರ ಸ್ವಚ್ಛತಾ ಕಾರ್ಯಕ್ರಮಕ್ಕೆ ತೊಕ್ಕೊಟ್ಟಿನಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ನಾವು ಕಸ ಹೆಕ್ಕಿ ಪರಿಸರ ಶುಚಿಗೊಳಿಸಿದ ಮಾತ್ರಕ್ಕೆ ಊರು, ದೇಶ ಸ್ವಚ್ಛವಾಗುತ್ತದೆ ಎನ್ನುವ ಭಾವನೆ ಸಲ್ಲದು, ಆದರೂ ಜನರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ಇಂತಹ ಕಾರ್ಯಕ್ರಮ ಸಹಕಾರಿಯಲ್ಲದೆ ಮಕ್ಕಳಿಗೂ ಅರಿವು ಮೂಡಿಸುವ ಪ್ರಯತ್ನ ಇದಾಗಿದೆ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಎಂ.ಜಿ.ಕಜೆ ತಿಳಿಸಿದರು.
ತೊಕ್ಕೊಟ್ಟು ಸಂತ ಸೆಬಾಸ್ತಿಯನ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಫಾ.ಎಡ್ವಿನ್ ಮಸ್ಕರೇನಸ್, ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷ ಅಹ್ಮದ್ ಅಬ್ಬಾಸ್, ಜಿಲ್ಲಾ ತರಬೇತಿ ಕೌನ್ಸಿಲರ್ ತ್ಯಾಗಂ ಹರೇಕಳ, ಪ್ರತೀಪ್ ಮಂಜನಾಡಿ ವಿವಿಧ ಶಾಲೆಗಳ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರು ಭಾಗವಹಿಸಿದ್ದರು.
ಕಾರ್ಯದರ್ಶಿ ಮಜೀದ್ ಮಲಾರ್ ವಂದಿಸಿದರು. ಶಿಕ್ಷಕ ಪ್ರವೀಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.