ಪಾದೂರು-ತೋಕೂರು ಪೈಪ್‌ಲೈನ್ ಕಾಮಗಾರಿಗೆ ತಡೆ
ಕಾಪು, ಆ. 6: ಪಾದೂರು-ತೋಕೂರಿನಿಂದ ಪೈಪ್‌ಲೈನ್ ಕಾಮಗಾರಿಯ ವೇಳೆ ಹಲವಾರು ಮನೆಗಳಿಗೆ ಹಾನಿಯಾಗಿದ್ದು, ಸಂತ್ರಸ್ಥರಿಗೆ ಪರಿಹಾರ ಧನ ವಿತರಿಸಲಿಲ್ಲ ಎಂದು ಆರೋಪಿಸಿ ರವಿವಾರ ಪೈಪ್‌ಲೈನ್ ಕಾಮಗಾರಿಗೆ ಸ್ಥಳೀಯರು ತಡೆಯೊಡ್ಡಿದ ಘಟನೆ ನಡೆದಿದೆ.
ಪಾದೂರಿನಲ್ಲಿರುವ ಐಎಸ್‌ಪಿಆರ್‌ಎಲ್ ಕಚ್ಚಾ ತೈಲ ಸಂಗ್ರಹಾಗಾರಕ್ಕಾಗಿ ಪಾದೂರು - ತೋಕೂರುವರೆಗಿನ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದೆ. ಆದರೆ ಈ ವೇಳೆ ಭೂಗತ ಕಲ್ಲುಗಳನ್ನು ಸ್ಫೋಟಿಸುವಾಗ ನಿಜವಾದ ಸಂತ್ರಸ್ತರನ್ನು ಬಿಟ್ಟು ಬೇರೆಯವರಿಗೆ ಪರಿಹಾರ ಧನವನ್ನು ವಿತರಿಸಲಾಗಿದೆ. ಈ ಕ್ರಮ ಸರಿಯಲ್ಲ, ನೈಜ ಸಂತ್ರಸ್ತರಿಗೆ ಪರಿಹಾರ ಧನವನ್ನು ಕೂಡಲೇ ವಿತರಿಸದೆ ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದು ಸ್ಥಳೀಯ ಸಂತ್ರಸ್ತರು ಪಟ್ಟು ಹಿಡಿದರು.
ಕಾಪು ಪುರಸಭೆಯ ವಿಪಕ್ಷ ನಾಯಕ ಅರುಣ್ ಶೆಟ್ಟಿ ಪಾದೂರು ಮಾತನಾಡಿ, ಪಾದೂರು- ತೋಕೂರುವರೆಗಿನ ಪೈಪ್‌ಲೈನ್ ಕಾಮಗಾರಿಯ ಸಂದರ್ಭ ಬಂಡೆ ಸ್ಫೋಟದಿಂದ ಸಾಕಷ್ಟು ಮನೆಗೆ ಹಾನಿ ಉಂಟಾಗಿದೆ. ಈ ಹಿಂದೆಯೂ ನಾವು ಪ್ರತಿಭಟನೆ ನಡೆಸಿ ಕಾಮಗಾರಿಯನ್ನು ನಿಲ್ಲಿಸಿದ್ದೇವೆ. ಕಳತ್ತೂರು ಮತ್ತು ಪಾದೂರು ಗ್ರಾಮದ 114ಮಂದಿ ಮನೆಯವರಿಗೆ ಬಂಡೆ ಒಡೆಯುವುದರಿಂದ ತೊಂದರೆ ಉಂಟಾಗಿತ್ತು. ಈ ಸಂದರ್ಭ ಎಲ್ಲರ ಮನೆಗಳೂ ಬಿರುಕು ಬಿಟ್ಟಿದೆ. ಈ ಬಗ್ಗೆ ನಾವು ಸ್ಥಳೀಯ ಶಾಸಕ ವಿನಯಕುಮಾರ್ ಸೊರಕೆ ಹಾಗೂ ಸಂಸದೆ ಶೋಭಾ ಕರಂದ್ಲಾಜೆಯವರಿಗೆ ಮನವಿ ಮಾಡಿದ್ದೆವು. ಜಿಲ್ಲಾಧಿಕಾರಿಯವರಿಗೆ ಶಾಸಕರು ಆದೇಶ ಮಾಡಿದ್ದರೂ, ಅವರು ಈ ತನಕ ಯಾವುದೇ ಪರಿಹಾರ ನೀಡಿಲ್ಲ. ಈ ಹಾನಿಗಳ ಬಗ್ಗೆ ನೈಜ ಸಂತಸ್ಥರಿಗೆ ಪರಿಹಾರ ಸಿಕ್ಕಿಲ್ಲ. ಕಳೆದ ಒಂದು ತಿಂಗಳಿನಿಂದ ನಾವು ನಿರಂತರವಾಗಿ ಅಧಿಕಾರಿಗಳನ್ನು ಸಂಪರ್ಕಿಸುತ್ತಿದ್ದರೂ, ಯಾವುದೇ ಸ್ಪಂದನೆ ಸಿಕ್ಕಿಲ್ಲ. ಆದ್ದರಿಂದ ನಾವು ಜನಗಾಗೃತಿ ಸಮಿತಿಯನ್ನು ರಚಿಸಿಕೊಂಡು ಈ ಮೂಲಕ ಪ್ರತಿಭಟನೆ ನಡೆಸುತ್ತಿದ್ದೇವೆ. ನಮಗೆ ಪರಿಹಾರ ಧನ ಸಿಗುವ ತನಕ ಪ್ರತಿಭಟನೆ ನಡೆಸಲಿದ್ದೇವೆ ಎಂದರು.
ಸ್ಥಳೀಯರ ಪ್ರತಿಭಟನೆ ತೀವ್ರವಾಗುತ್ತಿರುವುದನ್ನು ಅರಿತ ಕಂಪೆನಿಯ ಅಧಿಕಾರಿಗಳು ಕಾಮಗಾರಿ ಸ್ಥಗಿತಗೊಳಿಸಿದರು. ಕಂಪನಿಯ ಸ್ಥಳೀಯ ಉಸ್ತುವಾರಿ ವಹಿಸಿದ್ದ ಉತ್ತರ ಪ್ರದೇಶ ಮೂಲದ ಓಂ ಪ್ರಕಾಶ್ ಚೌಬೆ, ಕಾಮಗಾರಿಗೆ ತಡೆ ಉಂಟು ಮಾಡಿದ ಬಗ್ಗೆ ನಾವು ಮೇಲಾಧಿಕಾರಿಯವರಿಗೆ ಮಾಹಿತಿ ನೀಡಿದ್ದೇವೆ. ಸ್ಥಳೀಯರ ಸಮಸ್ಯೆಯ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸುವುದಾಗಿ ಹೇಳಿದರು.
ಸಂತಸ್ಥೆ ವೀಣಾ ತಂತ್ರಿಯವರು ಮಾತನಾಡಿ, ನಮಗೆ ಕಂಪನಿ ಮೋಸ ಮಡಿದೆ. ನೈಜ ಸಂತಸ್ತರನ್ನು ಗುರುತಿಸದೆ, ಸಂತಸ್ತರಲ್ಲದವರಿಗೆ ಪರಿಹಾರ ಧನವನ್ನು ವಿತರಿಸಿದ್ದಾರೆ. ನೈಜ ಸಂತ್ರಸ್ತರಿಗೆ ಶೀಘ್ರವಾಗಿ ಪರಿಹಾರ ಧನ ನೀಡದಿದ್ದಲ್ಲಿ ಕಾಮಗಾರಿ ಮುಂದುವರಿಸಲು ಬಿಡುವುದಿಲ್ಲ ಎಂದಿದ್ದಾರೆ.
ಪ್ರತಿಭಟನೆಯಲ್ಲಿ ಪಾದೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸಂದೀಪ್ ರಾವ್, ಉಪಾಧ್ಯಕ್ಷೆ ಸಹನಾ ತಂತ್ರಿ, ವಿಜಯ ತಂತ್ರಿ, ಗಣೇಶ್ ಶೆಟ್ಟಿ, ಕವಿತಾ ಮತ್ತಿತರರು ಉಪಸ್ಥಿತರಿದ್ದರು.