ಪ್ರೊ. ಕೆ.ಇ.ರಾಧಾಕೃಷ್ಣ, ಸತ್ಯಮಂಗಲ ಆರ್ ಮಹಾದೇವ ಅವರಿಗೆ 'ವರ್ಧಮಾನ ಪ್ರಶಸ್ತಿ' ಘೋಷಣೆ

Update: 2017-08-06 13:25 GMT
ಪ್ರೊ. ಕೆ.ಇ.ರಾಧಾಕೃಷ್ಣ, ಸತ್ಯಮಂಗಲ ಆರ್ ಮಹಾದೇವ

ಮೂಡುಬಿದಿರೆ, ಆ. 6: ಕಳೆದ 36 ವರ್ಷಗಳಿಂದ ಪ್ರತಿಷ್ಠಿತ ವರ್ಧಮಾನ ಸಾಹಿತ್ಯ ಪ್ರಶಸ್ತಿಗಳನ್ನು ನೀಡುತ್ತಾ ಬಂದಿರುವ ಮೂಡುಬಿದಿರೆ ವರ್ಧಮಾನ ಪ್ರಶಸ್ತಿ ಪೀಠವು 2016ರ ಸಾಲಿನಲ್ಲಿ  ಶ್ರೇಷ್ಠ ಕನ್ನಡ ಸಾಹಿತ್ಯ ಕೃತಿಗೆ ನೀಡುವ ವರ್ಧಮಾನ ಸಾಹಿತ್ಯ ಪ್ರಶಸ್ತಿಯನ್ನು ಬೆಂಗಳೂರಿನ ಪ್ರೊ. ಕೆ.ಇ.ರಾಧಾಕೃಷ್ಣ ಅವರ ಕಣ್ಣಕಾಡು ಎನ್ನುವ ಮಹಾಕಾವ್ಯಕ್ಕೆ ಮತ್ತು ಶ್ರೇಷ್ಠ ವರ್ಧಮಾನ ಉದಯೋನ್ಮುಖ ಸಾಹಿತ್ಯ ಕೃತಿಗೆ ನೀಡುವ ಪ್ರಶಸ್ತಿಯನ್ನು ಬೆಂಗಳೂರಿನ ಸತ್ಯಮಂಗಲ ಆರ್. ಮಹಾದೇವ ಅವರ ಹೆಜ್ಜೆ ಮೂಡಿದ ಮೇಲೆ ಎನ್ನುವ ಕಾವ್ಯಕೃತಿಗೆ ನೀಡಲು ನಿರ್ಧರಿಸಿದೆ.

ಪೀಠದ ಅಧ್ಯಕ್ಷ ಎಸ್.ಡಿ.ಸಂಪತ್ ಸಾಮ್ರಾಜ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2016ರ ಸಾಲಿನ ತೀರ್ಪುಗಾರ ಮಂಡಲಿಯ ಸದಸ್ಯರಾದ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ್, ಡಾ.ಬಿ.ಜನಾರ್ದನ ಭಟ್, ಶ್ರೀ ಬೆಳಗೋಡು ರಮೇಶ್ ಭಟ್ ಈ ಮೂವರು ನೀಡಿದ ಅಂಕಗಳ ಆಧಾರದಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ಪೀಠದ ಪ್ರಧಾನ ನಿರ್ದೇಶಕರಾದ ಡಾ.ನಾ.ಮೊಗಸಾಲೆ ಅವರು ತಿಳಿಸಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭವು ಮೂಡುಬಿದಿರೆಯ ಸಮಾಜಮಂದಿರವು ಆಚರಿಸುತ್ತಾ ಬಂದಿರುವ ದಸರಾ ಸಾಹಿತ್ಯೋತ್ಸವ ಸಂದರ್ಭದಲ್ಲಿ ನಡೆಸಲು ನಿರ್ಧರಿಸಲಾಗಿದೆ ಮತ್ತು ವರ್ಧಮಾನ ಸಾಹಿತ್ಯ ಪ್ರಶಸ್ತಿಯು ಇಪ್ಪತ್ತೈದು ಸಾವಿರದ ಗೌರವ ಸಂಭಾವನೆ, ತಾಮ್ರಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದ್ದರೆ, ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿಯು ಹದಿನೈದು ಸಾವಿರದ ಗೌರವ ಸಂಭಾವನೆ, ತಾಮ್ರಪತ್ರ ಸನ್ಮಾನವನ್ನು ಒಳಗೊಂಡಿದೆ. 2016ರ ಸಾಲಿನ ಪ್ರಶಸ್ತಿಗಳಿಗೆ 2011ರಲ್ಲಿ ಪ್ರಕಟವಾದ ಕೃತಿಗಳನ್ನು ಪರಿಶೀಲಿಸಲಾಗಿದೆ ಎಂದು ಪ್ರಶಸ್ತಿ ಪೀಠದ ಪ್ರಕಟಣೆ ತಿಳಿಸಿದೆ.

ಪ್ರೊ.ಕೆ.ಇ.ರಾಧಾಕೃಷ್ಣ

ಸಾಹಿತ್ಯ, ಸಂಸ್ಕೃತಿ ಮತ್ತು ಶಿಕ್ಷಣ ಕ್ಷೇತ್ರವನ್ನು ಸಮಾನವಾಗಿ ಪ್ರೀತಿಸುವ ಮತ್ತು ಅಷ್ಟೇ ಸಮರ್ಥವಾಗಿ ಈ ಮೂರರಲ್ಲೂ ತೊಡಗಿಸಿಕೊಂಡಿರುವ ಪ್ರೊ. ಕೆ.ಇ. ರಾಧಾಕೃಷ್ಣ ಅಂದರೆ ಹಸನ್ಮುಖ ಒಳನೋಟದಲ್ಲಿ ಚಿಂತನೆಗಳನ್ನು ಪ್ರತಿಬಿಂಬಿಸುವಂತೆ ಇರುವ ವ್ಯಕ್ತಿ. ಕೊಡಗು ಮತ್ತು ದಕ್ಷಿಣ ಕನ್ನಡದ ಗಡಿಭಾಗವಾದ ಪೆರಾಜೆ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟು. ಅಪ್ಪ ಈಶ್ವರಪ್ಪಯ್ಯ, ತಾಯಿ ಕಾವೇರಿಯಮ್ಮ. ಕೃಷಿ ಮತ್ತು ಅರ್ಚಕ ವೃತ್ತಿ ಕುಲಕಸುಬು. ಸಾಹಿತ್ಯ ಪ್ರೇಮ ಮತ್ತು ಸಂಸ್ಕೃತಿ ಪ್ರೀತಿಗೆ ರೂಪಕವಾಗಿ ಬೆಳೆದ ರಾಧಾಕೃಷ್ಣ ಅವರು ಉಡುಪಿ ಬೆಳಗಾವಿಯಲ್ಲಿ ಓದಿ ಬೆಂಗಳೂರು ವಿ.ವಿಯಿಂದ ಇಂಗ್ಲಿಷಿನಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜ್‌ನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿ ವೃತ್ತಿಜೀವನ ಪ್ರಾರಂಭಿಸಿ, ಅಲ್ಲೇ ಇಪ್ಪತ್ತೈದು ವರುಷಗಳ ಕಾಲ ಪ್ರಾಂಶುಪಾಲ ರಾಗಿ ಆ ಕಾಲೇಜನ್ನು ರಾಷ್ಟ್ರಮಟ್ಟದಲ್ಲಿ ಬೆಳೆಸಿದವರು. ನಂತರ ಸುರಾನಾ ಕಾಲೇಜ್‌ನ್ನು ಅಭಿವೃದ್ಧಿಗೊಳಿಸಿದ್ದಾರೆ. ಇವುಗಳ ನಡುವೆ ಬೆಂಗಳೂರು, ಬಿಜಾಪುರ, ಮಂಗಳೂರುಗಳಲ್ಲಿರುವ ವಿ.ವಿಗಳ ಮತ್ತು ಸಂಸ್ಕೃತ ವಿ.ವಿಯ ಸಿಂಡಿಕೇಟ್ ಸದಸ್ಯರಾಗಿ, ಕರ್ನಾಟಕ ಮತ್ತು ಅಖಿಲಭಾರತ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾಗಿ, ಯು.ಜಿ.ಸಿ ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಅನೇಕ ಉನ್ನತ ಸಮಿತಿಗಳ ಸದಸ್ಯರಾಗಿ, ರಾಷ್ಟ್ರೀಯ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿ ಅಪರೂಪದ ಶಿಕ್ಷಣ ತಜ್ಞ ಎಂದು ಪ್ರಸಿದ್ಧರು.

 ಮುಂಗಾರು, ಜನವಾಹಿನಿ, ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕಪತ್ರಿಕೆಗಳಲ್ಲಿ ಲೇಖಕರಾಗಿ, ಅಂಕಣಕಾರರಾಗಿ ಅವರು ಕನ್ನಡ, ತುಳು ಇಂಗ್ಲಿಷ್ ಭಾಷೆಗಳಲ್ಲಿ ಬರೆಯುತ್ತಿರುವ ಒಬ್ಬ ಮಹತ್ವದ ಲೇಖಕ. ಅವರ ಬಹುತೇಕ ಅಂಕಣ ಬರೆಹಗಳು ಪುಸ್ತಕರೂಪದಲ್ಲಿ ಬಂದು ಜನಮನ್ನಣೆ ಗಳಿಸಿರುವ ಹಾಗೇ ಅವರು ಡಿ.ವಿ.ಜಿ, ಗೋವಿಂದ ಪೈ, ಅಲ್ಲಮ, ಗೋಪಾಲಕೃಷ್ಣ ಅಡಿಗ, ಪಂಪ, ಕುಮಾರವ್ಯಾಸ, ರತ್ನಾಕರವರ್ಣಿ ಮೊದಲಾದವರ ಸಾಹಿತ್ಯದ ಕುರಿತು ಸಂಪಾದಿಸಿದ ಗ್ರಂಥಗಳು ಅವರ ವಿದ್ವತ್ತಿಗೆ ರೂಪಕಗಳಾಗಿವೆ.

ಇಂಗ್ಲಿಷ್ ನಲ್ಲೂ ಅವರು ಕೃತಿಗಳನ್ನು ಸಂಪಾದನೆ ಮಾಡಿರುವ ಹಾಗೆ ಇಂಗ್ಲಿಷ್ ನಿಂದ ಕನ್ನಡಕ್ಕೆ ಅವರು ಅನುವಾದಿಸಿದ ಕೃತಿಗಳೂ ಮಹತ್ವದವು. ಅವರ ಕಣ್ಣಕಾಡು ಎನ್ನುವ ಆಧುನಿಕ ಖಂಡಕಾವ್ಯವು ಪಾಶ್ಚಿಮಾತ್ಯ ತತ್ತ್ವ ಮತ್ತು ಪೌರ್ವಾತ್ಯದರ್ಶನಗಳನ್ನು ಮುಖಾಮುಖಿಯಾಗಿಸುತ್ತದೆಂದು ಮಾನ್ಯವಾಗಿದೆ.

ಅವರು ಸಂಸ್ಕೃತದಿಂದ ಅನುವಾದಿಸಿದ ಗೋಪಿಕೋನ್ಮಾದವು ಕಾವ್ಯೋನ್ಮಾದವನ್ನು ಉದ್ದೀಪಿಸುವ ಕೃತಿ. ಅದರಿಂದಾಗಿ ಅದು ಯಕ್ಷಗಾನ ಬ್ಯಾಲೆ ಮತ್ತೆ ನೃತ್ಯರೂಪಗಳಲ್ಲಿ ಮತ್ತೆ ಮತ್ತೆ ಅನುರಣಿಸುತ್ತಲೇ ಇದೆ. ಭಾಗೀರಥಿ ಸಮುದ್ರ(ಕವನಸಂಗ್ರಹ), ಸತ್ಯಪ್ಪೆ ಬಾಳೆಲು(ತುಳು ಕಥಾಸಂಗ್ರಹ) ಎನ್ನುವುದರ ಜೊತೆಗೆ ಅವರ ಮಹಾತ್ವಾಕಾಂಕ್ಷೆಯ ಕಾದಂಬರಿ.

ಅವರನ್ನು Public Relationship Society of India  ಎನ್ನುವ ಸಂಸ್ಥೆ  The  Excellent Educationist   ಎಂದು ಗೌರವಿಸುವ ಹಾಗೆ ಲಯನ್ಸ್ ಇಂಟರ್ ನ್ಯಾಷನಲ್ ಸಂಸ್ಥೆ  Lifetime  Achivement Award ಕೊಟ್ಟು ಪುರಸ್ಕರಿಸಿದೆ.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ತುಳು ಸಾಹಿತ್ಯ ಅಕಾಡಮಿ ಪ್ರಶಸ್ತಿಗಳು ಪಡೆದಿದ್ದಾರೆ. ಅವರ ವಿದ್ಯಾರ್ಥಿಗಳು ಲೋಕಮಿತ್ರ ಮತ್ತು ‘Untiring  Academician’   ಎಂದು ಅವರನ್ನು ಅಭಿನಂದಿಸಿದ್ದಾರೆ.

ಸತ್ಯಮಂಗಲ ಮಹಾದೇವ

ತುಮಕೂರಿನ ಸತ್ಯಮಂಗಲ ಗ್ರಾಮದ ಮಹಾದೇವ ಆರ್.(1983) ತಮ್ಮ ಪ್ರಾಥಮಿಕ, ಪ್ರೌಢಶಿಕ್ಷಣದ ಬಳಿಕ ತುಮಕೂರಿನ ಯೂನಿಯನ್ ಕ್ರಿಶ್ಚಿಯನ್ ಪ್ರ.ದರ್ಜೆ ಕಾಲೇಜಿನಿಂದ ಬಿ.ಎ.ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂ.ಎ ಪದವಿಯನ್ನು ಪಡೆದುಕೊಂಡಿದ್ದು ಪ್ರಸಕ್ತ 2013ರಿಂದ ಬಿ.ಎನ್.ಇ.ಎಸ್. ಪ್ರಥಮದರ್ಜೆ ಕಾಲೇಜು ಮಹಾಲಕ್ಷ್ಮೀಪುರಂ ಬೆಂಗಳೂರು ಇಲ್ಲಿ ಕನ್ನಡ ಸಹಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಭಾವತೀರದ ಹಾದಿಯಲ್ಲಿ, ಹೆಜ್ಜೆಮೂಡಿದ ಮೇಲೆ, ಯಾರ ಹಂಗಿಲ್ಲ ಬೀಸುವ ಗಾಳಿಗೆ ಪ್ರೀತಿಯೆಂದರೆ ಬೊಗಸೆಯಲ್ಲಿಡಿದ ಬೆಂಕಿ ಎಂಬ ನಾಲ್ಕು ಅತ್ಯತ್ತಮ ಕವನ ಸಂಕಲನಗಳನ್ನು ನೀಡಿರುವ ಅವರು ನಾಡಿನ ಪ್ರಸಿದ್ಧ ಪತ್ರಿಕೆಗಳಿಗೆ, ಅಂತರ್ಜಾಲ ಪತ್ರಿಕೆಗಳಿಗೆ ನಿರಂತರ ಲೇಖನಗಳನ್ನು ಬರೆಯುತ್ತಿದ್ದಾರೆ ಮತ್ತು ಮಾರ್ದನಿ ಎಂಬ ದಿನಪತ್ರಿಕೆಯ ಅಂಕಣಕಾರರಾಗಿಯೂ ಮಿಂಚುತ್ತಿದ್ದಾರೆ. ವಿಶೇಷ ಉಪನ್ಯಾಸಗಳ ಜೊತೆಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಹತ್ತಾರು ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿರುವ ಅವರು ದೇಶದ ನಾನಾ ಕಡೆ 80ಕ್ಕೂ ಹೆಚ್ಚು ಕಾರ್ಯಕ್ರಮಗಳ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದು ಕೂಡಾ ಅವರ ಹೆಚ್ಚುಗಾರಿಕೆಯಾಗಿದೆ.

 ತಾವು ಸೇವೆ ಸಲ್ಲಿಸುತ್ತಿರುವ ಬಿ.ಎನ್.ಇ.ಎಸ್. ಕಾಲೇಜಿನಲ್ಲಿ ನಡೆದ ಜನ್ನ ಸಾಹಿತ್ಯ ಸಂಭ್ರಮ ರಾಷ್ಟ್ರೀಯ ವಿಚಾರ ಸಂಕಿರಣ, ಕಣ್ಣಕಾಡುಕಾವ್ಯದ ವಿಚಾರ ಸಂಕಿರಣ, ಡಾ.ಎಂ.ವೀರಪ್ಪ ಮೊಲಿಯವರ ಸಾಹಿತ್ಯದ ನೆಲೆಗಳ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ ಜೀವನ-ಸಾಧನೆ ಕುರಿತಾದ ಅಂತರ್‌ಕಾಲೇಜು ವಿಚಾರ ಸಂಕಿರಣಗಳನ್ನು ಯಶಸ್ವಿಯಾಗಿ ನಿರ್ವಹಿಸಿದವರು.

ಡಾ.ದ.ರಾ.ಬೇಂದ್ರೆ ಸ್ಮತಿ ಪ್ರಶಸ್ತಿ, ಸಂಚಯ ಸಾಹಿತ್ಯ ಪ್ರಶಸ್ತಿ, ಕಲಬುರ್ಗಿಯ ಡಾ.ಶ್ಯಾಮಸುಂದರ ಪ್ರಶಸ್ತಿ, ಶಿವಮೊಗ್ಗ ಕರ್ನಾಟಕ ಸಂಘದ ಡಾ.ಜಿ.ಎಸ್. ಶಿವರುದ್ರಪ್ಪ ಕಾವ್ಯ ಪ್ರಶಸ್ತಿ, ಚಾಮರಾಜನಗರದ ಶ್ರೀ ಮುಳ್ಳೂರ್ ನಾಗರಾಜ ಕಾವ್ಯ ಪ್ರಶಸ್ತಿ, ಬಿ.ಎಂ.ಶ್ರೀ ಪ್ರತಿಷ್ಠಾನದ ಶಾ.ಬಾಲೂರಾವ್ ಯುವ ಬರಹಗಾರ ಪ್ರಶಸ್ತಿ, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳಲ್ಲದೆ ತಮ್ಮ ಸಾಹಿತ್ಯ ಸಾಧನೆಗಾಗಿ ಇನ್ನಿತರ ಹಲವು ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾದವರು.

ಸಂಕಷ್ಟಗಳಿಗೆ ಸವಾಲೊಡ್ಡಿ ಬೆಳೆದ ಕನ್ನಡದ ಯುವ ಕವಿಯಾಗಿ, ಸೃಜನಶೀಲ ಬರಹಗಾರನಾಗಿ ಮಾನವೀಯತೆಯನ್ನು ಮೈಗೂಡಿಸಿಕೊಂಡ ಮಹಾ ದೇವರು ನಮ್ಮ ನಡುವಿನ ಸಜ್ಜನ ಸಾಹಿತಿಯಾಗಿ ಗುರುತಿಸಲ್ಪಟ್ಟಿದ್ದಾರೆ. ಈಗ ತಮ್ಮ ಅಧ್ಯಾಪನದ ಜೊತೆಗೆ 2014ರಿಂದ ಪಿ.ಹೆಚ್.ಡಿ.ಪದವಿಗಾಗಿ ದ.ರಾ.ಬೇಂದ್ರೆ ಮತ್ತು ಮಧುರಚೆನ್ನರ ಕಾವ್ಯಗಳಲ್ಲಿ ಅನುಭಾವ ಒಂದು ತೌಲನಿಕ ಅಧ್ಯಯನ ಎಂಬ ಕುರಿತಾಗಿ ಅಧ್ಯಯನ ನಿರತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News