ಉದ್ಯಮಿಗೆ ಬೆದರಿಕೆಯೊಡ್ಡಿದ್ದಕ್ಕಾಗಿ ಕೇರಳ ಬಿಜೆಪಿಯಿಂದ ನಾಯಕನ ಅಮಾನತು
ತಿರುವನಂತಪುರ,ಆ.6: ಪಕ್ಷಕ್ಕೆ ದೇಣಿಗೆ ನೀಡಲು ನಿರಾಕರಿಸಿದ್ದ ಉದ್ಯಮಿಯೋರ್ವರಿಗೆ ಬೆದರಿಕೆಯೊಡ್ಡಿದ್ದ ಪಕ್ಷದ ಕೊಲ್ಲಂ ಜಿಲ್ಲಾ ಘಟಕದ ನಾಯಕ ಸುಭಾಷ್ ಅವರನ್ನು ಕೇರಳ ಬಿಜೆಪಿಯು ಅಮಾನತುಗೊಳಿಸಿದೆ.
ಸುದ್ದಿವಾಹಿನಿಯೊಂದು ಬಿಡುಗಡೆಗೊಳಿಸಿದ ಆಡಿಯೋ ಟೇಪ್‌ನಲ್ಲಿ ಸುಭಾಷ್ ಎಂಬ ಮೊದಲ ಹೆಸರಿನೊಂದಿಗೆ ಮಾತ್ರ ಗುರುತಿಸಿಕೊಂಡಿರುವ ವ್ಯಕ್ತಿ ಪಕ್ಷದ ನಿಧಿಗೆ ದೇಣಿಗೆಯಾಗಿ 5,000 ರೂ.ಗಳನ್ನು ನೀಡಲು ನಿರಾಕರಿಸಿದ್ದಕ್ಕಾಗಿ ಬೆದರಿಕೆಯನ್ನು ಒಡ್ಡಿರುವುದು ದಾಖಲಾಗಿದೆ. ಇದರ ಬೆನ್ನಲ್ಲೇ ಪಕ್ಷವು ಅಮಾನತು ಕ್ರಮವನ್ನು ಕೈಗೊಂಡಿದೆ.
ಬಿಜೆಪಿ ನಾಯಕ ತನಗೆ ಆಗಾಗ್ಗೆ ಬೆದರಿಕೆ ಕರೆಗಳನ್ನು ಮಾಡುತ್ತಿದ್ದರಿಂದ ಸಂಭಾಷಣೆ ಯನ್ನು ಧ್ವನಿ ಮುದ್ರಿಸಿಕೊಳ್ಳಲು ತಾನು ನಿರ್ಧರಿಸಿದ್ದೆ ಎದು ಚಾವರದಲ್ಲಿ ವಾಟರ್ ಬಾಟ್ಲಿಂಗ್ ಘಟಕವನ್ನು ನಡೆಸುತ್ತಿರುವ ಮನೋಜ ಹೇಳಿದರು.
ತಾನು 3,000 ರೂ.ನೀಡಲು ಸಿದ್ಧನಿದ್ದೆ. ಆದರೆ 5,000 ರೂ.ನೀಡದಿದ್ದರೆ ತನ್ನ ಘಟಕವನ್ನು ಮುಚ್ಚಿಸುವುದಾಗಿ ಸುಭಾಷ್ ಎಚ್ಚರಿಕೆ ನೀಡಿದ್ದರು ಎಂದು ತಿಳಿಸಿದ ಅವರು, ಬಿಜೆಪಿ ನಾಯಕನ ವಿರುದ್ಧ ಪೊಲೀಸ್ ದೂರು ಸಲ್ಲಿಸುವುದಾಗಿಯೂ ಹೇಳಿದರು.
ಆದರೆ ಸುಭಾಷ್ ತನ್ನ ವಿರುದ್ಧದ ಆರೋಪವನ್ನು ನಿರಾಕರಿಸಿದ್ದಾರೆ.
ಆದರೆ ಈಗಾಗಲೇ ಮೆಡಿಕಲ್ ಸೀಟ್ ಹಂಚಿಕೆ ಹಗರಣದಲ್ಲಿ ತನ್ನ ನಾಯಕರು ಭಾಗಿಯಾಗಿದ್ದಾರೆಂಬ ಆರೋಪವನ್ನು ಎದುರಿಸುತ್ತಿರುವ ಬಿಜೆಪಿ ಚುರುಕಾಗಿ ಕ್ರಮ ಕೈಗೊಂಡು ತನ್ನ ಜಿಲ್ಲಾ ನಾಯಕನನ್ನು ಅಮಾನತುಗೊಳಿಸಿದೆ. 15 ದಿನಗಳ ಹಿಂದೆ ಮಾಧ್ಯಮಗಳಿಗೆ ಸೋರಿಕೆಯಾಗಿದ್ದ ಬಿಜೆಪಿಯ ಆಂತರಿಕ ತನಿಖಾ ವರದಿಯು ಹಗರಣದಲ್ಲಿ ಕೆಲವು ನಾಯಕರು ಭಾಗಿಯಾಗಿರುವುದನ್ನು ಪತ್ತೆ ಹಚ್ಚಿದೆ.
ಪಾಲಕ್ಕಾಡ್ ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ಕೇರಳ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಭಾರತೀಯ ವೈದ್ಯಕೀಯ ಮಂಡಳಿಯ ಮಾನ್ಯತೆಯನ್ನು ಪಡೆಯಲು ಬಿಜೆಪಿಯ ಯುವ ನಾಯಕ ಆರ್.ಎಸ್.ವಿನೋದ್‌ಗೆ 5.6 ಕೋ.ರೂ. ಪಾವತಿಸಿರುವುದಾಗಿ ವರ್ಕಳದ ಎಸ್.ಆರ್.ಮೆಡಿಕಲ್ ಕಾಲೇಜ್ ಮತ್ತು ರೀಸರ್ಚ್ ಸೆಂಟರ್‌ನ ಮಾಲಿಕ ಆರ್.ಶಾಜಿ ಆರೋಪಿಸಿದ ಬಳಿಕ ಪಕ್ಷವು ತನಿಖೆಯನ್ನಾರಂಭಿಸಿತ್ತು.