ಪಿಯುಸಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಗ್ರಾಮರ್, ಸ್ಪೋಕನ್ ಇಂಗ್ಲಿಷ್ ತರಬೇತಿಗೆ ಚಾಲನೆ

Update: 2017-08-06 15:08 GMT

 ಪುತ್ತೂರು, ಆ, 6: ಕನ್ನಡ ಮಾಧ್ಯಮದ ಮಕ್ಕಳೂ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಯಶಸ್ವಿಯಾಗಬೇಕಾದಲ್ಲಿ ಅವರಿಗೆ ಇಂಗ್ಲೀಷ್ ಬಾಷಾ ಜ್ಞಾನ ಅಗತ್ಯವಾಗಿದೆ. ಇದಕ್ಕಾಗಿ ಇಂಗ್ಲೀಷ್ ಸ್ಪೋಕನ್ ತರಗತಿ ನಡೆಸಲಾಗುತ್ತಿದ್ದು, ಎಲ್ಲಾ ವಿದ್ಯಾರ್ಥಿಗಳೂ ನಿರರ್ಗಳವಾಗಿ ಇಂಗ್ಲೀಷ್ ಮಾತನಾಡುವಂತಾಗಬೇಕು ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.

ಅವರು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸಲು ಹಾಗೂ ಇಂಗ್ಲೀಷ್‌ನ ಕೊರತೆ ನೀಗಿಸಲು ಅನುಕೂಲವಾಗುವಂತೆ ಸರಕಾರ ರಾಜ್ಯದಾದ್ಯಂತ ಹಮ್ಮಿಕೊಂಡಿರುವ ಇಂಗ್ಲೀಷ್ ಗ್ರಾಮರ್, ಸ್ಪೋಕನ್ ಇಂಗ್ಲೀಷ್ ತರಬೇತಿಗೆ ಭಾನುವಾಋ ಪುತ್ತೂರಿನ ಕೊಂಬೆಟ್ಟು ಪದವಿ ಪೂರ್ವ ಕಾಲೇಜಿನಲ್ಲಿ ಚಾಲನೆ ನೀಡಿ ಮಾತನಾಡಿದರು.

3290 ವಿದ್ಯಾರ್ಥಿಗಳಿಗೆ ಪ್ರಯೋಜನ:

ತಾಲೂಕಿನ ಎಲ್ಲಾ ಸರಕಾರಿ ಪ.ಪೂ ಕಾಲೇಜುಗಳ ಪ್ರಥಮ ಹಾಗೂ ದ್ವಿತೀಯ ಪಿಯುಸಿಯ ಸುಮಾರು 3290 ವಿದ್ಯಾರ್ಥಿಗಳು ಇಂಗ್ಲೀಷ್ ಗ್ರಾಮರ್, ಸ್ಪೋಕನ್ ಇಂಗ್ಲೀಷ್ ತರಬೇತಿಯ ಪ್ರಯೋಜನ ಪಡೆಯಲಿದ್ದಾರೆ. ಪುತ್ತೂರನ್ನು ಕೇಂದ್ರವಾಗಿಸಿಕೊಂಡು ಕೊಂಬೆಟ್ಟು ಪ.ಪೂ ಕಾಲೇಜಿನಲ್ಲಿ ತರಬೇತಿಗಳು ನಡೆಯಲಿದೆ. ತರಗತಿಗಳು ಆ.6ರಿಂದು ತರಗತಿ ಆರಂಭವಾಗಿ, ಫೆಬ್ರವರಿ ತನಕ ನಡೆಯಲಿದೆ. ಪ್ರತಿ ಭಾನುವಾರದಂದು ತರಬೇತಿ ತರಗತಿಗಳು ನಡೆಯಲಿದ್ದು ಒಟ್ಟು 28 ದಿನಗಳ ತರಗತಿ ನಡೆಯಲಿದೆ. ತಾಲೂಕಿನ ಪ.ಪೂ ಕಾಲೇಜುಗಳ ನುರಿತ 67 ಮಂದಿ ಇಂಗ್ಲೀಷ್ ಉಪನ್ಯಾಸಕರಿಂದ ತರಗತಿ ನಡೆಯಲಿದ್ದು, ಇದಕ್ಕಾಗಿ 67 ಕೊಠಡಿಗಳನ್ನು ಸಿದ್ಧಪಡಿಸಲಾಗಿದೆ ಎಂದು ತರಬೇತಿಯ ಸಂಯೋಜಕ ಎನ್.ಕೆ ರಾಮಚಂದ್ರ ಭಟ್ ತಿಳಿಸಿದ್ದಾರೆ.

ನಗರಸಭಾ ಸದಸ್ಯ ಸುಜೀಂದ್ರ ಪ್ರಭು, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಜಗನ್ನಿವಾಸ್ ರಾವ್, ಪುಡಾ ಅಧ್ಯಕ್ಷ ಕೌಶಲ್ ಪ್ರಸಾದ್ ಶೆಟ್ಟಿ, ಪ್ರಾಂಶುಪಾಲ ಜಯರಾಮ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉಪನ್ಯಾಸಕ ಅನಂದ ಸ್ವಾಗತಿಸಿದರು, ತರಬೇತಿಯ ಸಂಯೋಕರು, ಇಂಗ್ಲೀಷ್ ಉಪನ್ಯಾಸಕ ಎನ್.ಕೆ ರಾಮಚಂದ್ರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಯೋಜಕ ಈಶ್ವರ ಭಟ್ ಕಾರ್ಯಕ್ರಮ ನಿರೂಪಿಸಿ, ವಸಂತಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News