ಸಾಮೂಹಿಕವಾಗಿ ಬದುಕುವ ಮೌಲ್ಯಗಳು ಕೂಡು ಕುಟುಂಬ ಪದ್ಧತಿಯಲ್ಲಿತ್ತು: ಡಾ.ಬಿ.ಎ.ವಿವೇಕ ರೈ
ಮಂಗಳೂರು, ಆ.6: ಸಾಮೂಹಿಕವಾಗಿ ಬದುಕುವ ಮೌಲ್ಯಗಳು ತುಳುನಾಡಿನ ಕೂಡು ಕುಟುಂಬ ಪದ್ಧತಿಯಲ್ಲಿತ್ತು. ಬೋಲ ಚಿತ್ತರಂಜನ ದಾಸ ಶೆಟ್ಟಿಯವರ ಕೃತಿಗಳಲ್ಲಿ ತುಳುನಾಡಿನ ಈ ಕೂಡು ಕುಟುಂಬ, ಶ್ರಮ ಸಂಸ್ಕೃತಿಯ ಚಿತ್ರಣವಿದೆ ಎಂದು ಕರ್ನಾಟಕ ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ತಿಳಿಸಿದ್ದಾರೆ.
ಅವರು ಇಂದು ನಗರದ ಎಸ್‌ಡಿಎಂ ಕಾನೂನು ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡ ಬೋಲ ಸ್ಮತಿಯಾನ ಕಾರ್ಯಕ್ರಮದಲ್ಲಿ ದಿವಂಗತ ಬೋಳ ಚಿತ್ತರಂಜನ ದಾಸ ಶೆಟ್ಟಿಯವರ ‘ಮಾತೃಧರ್ಮ ಅಳಿಯ ಸಂತಾನ’ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.
ಬೋಲ ಚಿತ್ತರಂಜನ ದಾಸ ಶೆಟ್ಟಿಯವರ ಅಳಿದುಳಿದವರು ಕೃತಿಯಲ್ಲಿ ತುಳುನಾಡಿನ ಮಾತೃಮೂಲೀಯ ಕೂಡು ಕುಟುಂಬದಲ್ಲಿ ಹೆಣ್ಣಿನ ಸ್ಥಾನ ಮಾನದ ಇತಿಮಿತಿಗಳ ಅಲ್ಲಿನ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಜೊತೆಗೆ ಕೂಡು ಕುಟುಂಬದಲ್ಲಿನ ಗಂಡಿನ ಅನಾಥ ಪ್ರಜ್ಞೆಯ ಬಗ್ಗೆಯೂ ವಿವರ ನೀಡುತ್ತದೆ. ತುಳುನಾಡಿನ ಪಾಡ್ದನಗಳನ್ನು ಇಟ್ಟು ಕೊಂಡು ತಮ್ಮ ಕೃತಿಯಲ್ಲಿ ಸಾಂಸ್ಕೃತಿಕ ವಿಮರ್ಶೆ ಮಾಡಿದವರಲ್ಲಿ ಬೋಲ ಚಿತ್ತರಂಜನದಾಸ ಶೆಟ್ಟಿ ಪ್ರಮುಖರಾಗಿದ್ದಾರೆ.
ಬೋಲರ ಕೃತಿಯಲ್ಲಿ ತುಳುನಾಡಿನ ಜನರ ದುಡಿಮೆ, ಅನ್ನ ಇಲ್ಲದೆ ಸಾಯುವ ಬಡತನದ ಸ್ಥಿತಿ ಒಂದು ಕಾಲದ ಚಿತ್ರಣವನ್ನು ನೀಡುತ್ತದೆ. ಅವರ ಕೃತಿಗಳನ್ನು ಇತರ ಭಾಷೆಗೆ ಅನುವಾದಿಸಲು, ನಾಟಕ ಸಿನಿಮಾವಾಗಿ ಪರಿವರ್ತಿಸಲು ಸಾಧ್ಯವಿದೆ ಎಂದು ವಿವೇಕ ರೈ ತಿಳಿಸಿದ್ದಾರೆ.
ಕಾಲದ ಪ್ರತಿನಿಧಿಯಾಗಿ ನಿಲ್ಲುವ ಸಾಹಿತ್ಯ ಕೃತಿ ಮುಖ್ಯ:- ಒಂದು ಕಾಲದ ಪ್ರತಿನಿಧಿಯಾಗಿ ಆ ಕಾಲದ ಭಾಷೆಯಲ್ಲಿ ರಚನೆಯಾಗುವ ಸಾಹಿತ್ಯ ಮುಖ್ಯವಾಗುತ್ತದೆ ಎಂದು ಮುಂಬಯಿಯ ಹಿರಿಯ ಸಾಹಿತಿ ಡಾ. ಎಂ.ಸುನಿತಾ ಶೆಟ್ಟಿ ತಿಳಿಸಿದ್ದಾರೆ.
ಬೋಲ ಚಿತ್ತರಂಜನ ದಾಸ ಶೆಟ್ಟಿಯವರ ಕೃತಿ ತುಳುನಾಡಿನ ಒಂದು ಕಾಲದ ಸಂಸ್ಕೃತಿಯ ಚಿತ್ರಣವನ್ನು ನೀಡುವ ಪ್ರಯತ್ನ ಮಾಡುತ್ತದೆ. ತುಳುನಾಡಿನ ಸಿರಿಯನ್ನು ಹೋಲುವ ಸ್ತ್ರೀ , ಅಮೇರಿಕಾದ ಡಯಾನಳ ಪ್ರತಿಮೆಗೂ ಸಾಮ್ಯತೆ ಇದೆ. ತುಳುನಾಡಿನ ಪರಂಪರೆಗೂ ದಕ್ಷಿಣ ಆಫ್ರಿಕಾದ ದ್ರಾವಿಡ ಸಂಸ್ಕೃತಿಗೂ ಹೋಲಿಕೆ ಇದೆ. ಈ ಹಿನ್ನೆಲೆಯಲ್ಲಿ ಸಾಹಿತ್ಯದ ಮೂಲಕ ಶೋಧನೆ ಮುಖ್ಯ. ಸಾಹಿತ್ಯ ಒಂದು ಸಂಸ್ಕೃತಿಯ ಪ್ರತಿ ಬಿಂಬವಾಗಿರುತ್ತದೆ. ಯಾರನ್ನೋ ತಿದ್ದಲು ಸಾಹಿತ್ಯ ರಚಿಸುವುದಲ್ಲ. ಸಾಹಿತಿ ಒಂದು ಜಾತಿ, ಸಮುದಾಯಕ್ಕೆ ಸೇರಿದ ವ್ಯಕ್ತಿಯಾಗುವುದಿಲ್ಲ ಎಂದು ಸುನಿತಾ ಶೆಟ್ಟಿ ತಿಳಿಸಿ, ಬೋಲ ಚಿತ್ತರಂಜನದಾಸ ಶೆಟ್ಟಿ ಮುಂಬಯಿಯಲ್ಲಿ ನನ್ನ ವಿದ್ಯಾರ್ಥಿ ಎಂದು ನೆನಪಿಸಿಕೊಂಡರು.
ಡಾ.ಗಣೇಶ್ ಅಮೀನ್ ಸಂಕಮಾರ್ ಮತ್ತು ಡಾ.ಗಣನಾಥ ಎಕ್ಕಾರ್ ಬೊಲ ಚಿತ್ತರಂಜನ ದಾಸರ ಜೀವನ ಮತ್ತು ಕೃತಿಯ ಬಗ್ಗೆ ವಿವರಿಸಿದರು.
ಸಮಾರಂಭದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಿದ್ದರು. ಡಾ.ಎಂ.ಪ್ರಭಾಕರ ಜೋಶಿ, ಡಾ.ಬಿ.ಎ.ವಿವೇಕ ರೈ, ಮಾಜಿ ಶಾಸಕ ಜಯರಾಮ ಶೆಟ್ಟಿ, ಚಿತ್ತರಂಜನ್ , ಸಾಹಿತಿ ಡಾ.ವಾಮನ ನಂದಾವರ, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮೊದಲಾದವರು ಉಪಸ್ಥಿತರಿದ್ದರು.