×
Ad

ಕಾನೂನು ಸುವ್ಯವಸ್ಥೆಗೆ ತಂತ್ರಜ್ಞಾನದ ಬಳಕೆಯೂ ಅಗತ್ಯ: ಪ್ರೊ.ಕೆ.ಭೈರಪ್ಪ

Update: 2017-08-06 22:23 IST

ಕೊಣಾಜೆ, ಆ. 6: ವಿದೇಶಗಳಲ್ಲಿ ಅಲ್ಲಿಯ ವ್ಯವಸ್ಥೆಗೆ ತಕ್ಕಂತೆ ಪೊಲೀಸ್ ಸುವ್ಯವಸ್ಥೆಗಳು ಇರುವುದನ್ನು ಕಾಣಬಹುದು. ಕೆಲವೊಂದು ದೇಶದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ತಂತ್ರಜ್ಞಾನದ ಬಳಕೆಯೂ ಆಗುತ್ತಿರುವುದರಿಂದ ಜನರು ಶಾಂತಿ ನೆಮ್ಮದಿಯ ಜೀವನವನ್ನು ಕಂಡುಕೊಂಡಿದ್ದಾರೆ. ಹಾಗೆಯೇ ನಮ್ಮಲ್ಲಿಯೂ ಇಂತಹ ವ್ಯವಸ್ಥೆಗಳು ಮುಂದುವರಿಯಬೇಕಿದೆ. ಅಲ್ಲದೆ ಜನಸ್ನೇಹಿ ಪೊಲೀಸ್ ವ್ಯವಸ್ಥೆಯು ಉತ್ತಮ ಕಲ್ಪನೆಯಾಗಿದ್ದು ಪೊಲೀಸರು ಹಾಗೂ ಜನರ ನಡುವೆ ಉತ್ತಮ ಬಾಂಧವ್ಯ ವೃದ್ದಿಗೊಂಡು ಸಮಾಜದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಕೆ.ಭೈರಪ್ಪ ಹೇಳಿದರು.

ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ರವಿವಾರ ನಡೆದ ಕೊಣಾಜೆ ಪೊಲೀಸ್ ಠಾಣೆ ಸುಧಾರಿತ ಗಸ್ತು ವ್ಯವಸ್ಥೆ (ಜನಸ್ನೇಹಿ ಪೊಲೀಸ್-ಪ್ರದೇಶಕೊಬ್ಬ ಪೊಲೀಸ್) ಕಾರ್ಯಕ್ರಮದಡಿಯಲ್ಲಿ ಕೊಣಾಜೆ ಠಾಣಾ ವ್ಯಾಪ್ತಿಯ ಸರ್ವ ಗಸ್ತು ಸದಸ್ಯರುಗಳ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಸಿಪಿ ರಾಮರಾವ್ ಅವರು, ಹಿಂದೆ ಜನಸಂಪರ್ಕ ಸಭೆಯ ಮೂಲಕ ಆಯಾ ಪ್ರದೇಶದ ಕಾನೂನು ಸುವ್ಯವಸ್ಥೆ ಯನ್ನು ಕಾಪಾಡಲು ಪ್ರಯತ್ನಿಸಲಾಗುತ್ತಿತ್ತು. ಇದೀಗ ಸುಧಾರಿತ ಗಸ್ತು ವ್ಯವಸ್ಥೆಯಿಂದಾಗಿ ಆಯಾ ಪ್ರದೇಶದ ಜವಾಬ್ಧಾರಿಯನ್ನು ವಹಿಸಿದಂತ ಪೊಲೀಸರ ಜೊತೆಗೆ 50 ಜನ ಸ್ಥಳೀಯರ ಸಹಕಾರವೂ ದೊರೆಯಲಿರುವುದರಿಂದ ಪೊಲೀಸ್ ವ್ಯವಸ್ಥೆಗೆ ಬಲ ಸಿಕ್ಕಿದಂತಾಗಿದೆ. ಅಲ್ಲದೆ ಸಮಾಜದಲ್ಲಿ ಎದುರಾಗುವ ಯಾವುದೇ ಸಮಸ್ಯೆಯನ್ನು ಕೂಡಾ ಈ ತಂಡದ ಮೂಲಕ ನಿವಾರಿಸಿಕೊಳ್ಳಲು ಹಾಗೂ ಪೊಲೀಸ್ ವ್ಯವಸ್ಥೆಗೂ ಬಹಳಷ್ಟು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಪೊಲೀಸರೊಂದಿಗೆ ಕೈ ಜೋಡಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೊಣಾಜೆ ಪೊಲೀಸ್ ಠಾಣಾ ಇನ್‌ಸ್ಪೆಕ್ಟರ್ ಅಶೋಕ್ ಪಿ. ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರು. ಎಸ್‌ಐ ಸುಕುಮಾರನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾನ್‌ಸ್ಟೇಬಲ್ ಗುರುವಪ್ಪ ಕಾಂತಿ ಅವರು ಸ್ವಾಗತಿಸಿ, ಸುಖಲತಾ ಕಾರ್ಯಕ್ರಮ ನಿರೂಪಿಸಿದರು. ಕೊಣಾಜೆ ಠಾಣಾ ವ್ಯಾಪ್ತಿಯ ಸುಧಾರಿತ ಗಸ್ತು ವ್ಯವಸ್ಥೆ ಜನಸ್ನೇಹಿ ಪೊಲೀಸ್ ಕಾರ್ಯಕ್ರಮದಲ್ಲಿ ಸುಮಾರು 400 ರಷ್ಟು ಸಾರ್ವಜನಿಕರು ಭಾಗವಹಿಸಿ ವ್ಯಾಪ್ತಿಯ ಹಲವಾರು ಸಮಸ್ಯೆಗಳು ಹಾಗೂ ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News