ಪ್ರಾರ್ಥನಾ ಸಂಗಮ ಹಾಗೂ ಬೀಳ್ಕೊಡುಗೆ ಸಮಾರಂಭ
ಕಲ್ಲಾಪು, ಆ.7: ತಖ್ವಾ ಜುಮಾ ಮಸೀದಿ ಹಾಗು ಖವ್ವತುಲ್ ಇಸ್ಲಾಂ ಮದ್ರಸ ಪಟ್ಲ ಇದರ ಆಶ್ರಯದಲ್ಲಿ ಪ್ರಾರ್ಥನಾ ಸಂಗಮ ಹಾಗು ಹಜ್ ಯಾತ್ರೆ ಗೈಯ್ಯುತ್ತಿರುವ ಪಟ್ಲ ಜುಮಾ ಮಸೀದಿಯ ಖತೀಬರಾದ ಎಂ.ಸಿ. ಮುಹಮ್ಮದ್ ಫೈಝಿ ಉಸ್ತಾದರಿಗೆ ಬೀಳ್ಕೊಡುಗೆ ಸಮಾರಂಭ ಪ್ರಸ್ತುತ ಮಸೀದಿ ಅಧ್ಯಕ್ಷರಾದ ಮಹಮೂದ್ ಹಾಜಿಯವರ ಅಧ್ಯಕ್ಷತೆಯಲ್ಲಿ, ಪಟ್ಲದ ಮದ್ರಸ ಹಾಲ್ ನಲ್ಲಿ ಜರುಗಿತು.
ಪಟ್ಲ ಮಸೀದಿಯ ಮುದರ್ರಿಸ್ ಹಾಗು ಸಹ ಖತೀಬರಾದ ಅಬೂ ಮುಖ್ತಾರ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಫೈಝಿ ಉಸ್ತಾದರ ವ್ಯಕ್ತಿತ್ವ, ಸರಳ ಸ್ವಭಾವ ನಮಗೆ ಮಾದರಿ ಎಂದರು.
ಮದ್ರಸ ಅಧ್ಯಾಪಕರಾದ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಪ್ರಾಸ್ತಾವಿಕವಾಗಿ ಮಾತನಾಡಿ, ಫೈಝಿ ಉಸ್ತಾದರು ಕೇವಲ ಪಟ್ಲ ಎಂಬ ಊರಿನ ಉಸ್ತಾದ್ ಮಾತ್ರವಲ್ಲದೆ ಇಡೀ ಉಳ್ಳಾಲದ ಸುನ್ನೀ ಸಮುದಾಯದ ಮಾರ್ಗದರ್ಶಿಯೂ ನಾಯಕರೂ ಆಗಿರುವರು ಎಂದು ತಿಳಿಸಿದರು. ಸುನ್ನತ್ ಜಮಾಅತಿನ ಆಶಯಾದರ್ಶಗಳಲ್ಲಿ ಕಿಂಚಿತ್ತೂ ಸಡಿಲ ಮನೋಭಾವ ತೋರಿಸದೆ ಎದೆಗಾರಿಕೆಯೊಂದಿಗೆ ಹೇಳುವ ವ್ಯಕ್ತಿತ್ವ ಅವರದ್ದಾಗಿದೆ. ಅವರು ಹದಿನೆಂಟು ವರ್ಷಗಳಿಂದ ಹಿರಿಯರಿಗಾಗಿ ಖುರ್ ಆನ್ ಸ್ಟಡೀ ಕ್ಲಾಸ್ ನಡೆಸಿಕೊಂಡು ಬರುತ್ತಿದ್ದು, ಅವರ ಮುಖಾಂತರ ಅದೆಷ್ಟೋ ಮಂದಿ ಇಂದು ಖುರ್ ಆನ್ ಸಲೀಸಾಗಿ ಓದಬಲ್ಲವರಾಗಿದ್ದಾರೆ ಎಂದು ತಿಳಿಸಿದರು.
ಪಟ್ಲ ಮೋಙಂ ಫೈಝಿ ಉಸ್ತಾದರು ಮುಖ್ಯ ಪ್ರಭಾಷಣ ನಡೆಸಿ ಹಜ್ ಎಂಬುದು ಇಸ್ಲಾಮಿನ ಮೂಲಭೂತ ಕಾರ್ಯಗಳಲ್ಲೊಂದಾಗಿದ್ದು, ಸಾಧ್ಯವಿರುವವರು ಆಯುಷ್ಯದಲ್ಲಿ ಒಮ್ಮೆ ಹಜ್ ನಿರ್ವಹಿಸುವುದು ಕಡ್ಡಾಯವಾಗಿದೆ ಎಂದರು. ಹಜ್ ಯಾತ್ರೆಗೈಯ್ಯುವವರೊಂದಿಗೆ ದುಆ ಅಪೇಕ್ಷಿಸುವುದು ಪ್ರವಾದಿ ಸ.ಅ ರವರು ನಮಗೆ ತೋರಿಸಿದ ಮಾದರಿಯಾಗಿದ್ದು, ಇಸ್ಲಾಮಿನ ಖಲೀಫರಾದ ಉಮರ್ ರ.ಅ ಉಮ್ರಾ ಯಾತ್ರೆಗಾಗಿ ಮಕ್ಕಾಕ್ಕೆ ಹೊರಟು ನಿಂತಾಗ ಉಮರ್ ರ.ಅ ರವರೊಂದಿಗೆ ಓ ನನ್ನ ಪ್ರೀತಿಯ ಮಿತ್ರ.. "ನೀನು ಮಕ್ಕಾಕ್ಕೆ ಉಮ್ರಾ ಯಾತ್ರೆಗಾಗಿ ಹೊರಟು ನಿಂತಿರುವೆ. ತನ್ನ ದುಆದಲ್ಲಿ ನಮ್ಮನ್ನು ಮರೆಯಬಾರದು" ಎಂದು ಪ್ರವಾದಿ ಸ.ಅ ರವರು ದುಆ ಅಪೇಕ್ಷಿಸಿದ್ದರು ಎಂದು ತಿಳಿಸಿದರು. ಮುಂದುವರಿದು ಫೈಝಿ ಉಸ್ತಾದರು ಮದ್ರಸ ಮತ್ತು ಪಳ್ಳಿ ದರ್ಸ್ ಇದರ ಮಹತ್ವವನ್ನು ವಿವರಿಸಿದರು.
ಬಳಿಕ ಪಟ್ಲ ಮಸೀದಿ ಆಡಳಿತ ಸಮಿತಿ, ಎಸ್ಸೆಸ್ಸೆಫ್ ಪಟ್ಲ ಶಾಖೆ ಹಾಗು ಪಳ್ಳಿ ದರ್ಸ್ ವಿದ್ಯಾರ್ಥಿಗಳ ವತಿಯಿಂದ ಹಜ್ ಯಾತ್ರೆಗೆ ಹೊರಟಿರುವ ಪಟ್ಲ ಉಸ್ತಾದರಿಗೆ ಶಾಲು ಹೊದಿಸಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಸದ್ರಿ ಮಸೀದಿ ಮದ್ರಸದ ಅಧ್ಯಾಪಕರಾದ ಮುನೀರ್ ಲತೀಫಿ, ಇಬ್ರಾಹಿಂ ಮದನಿ, ಉಪಾಧ್ಯಕ್ಷ ಹಾರಿಸ್, ಜೊತೆ ಕಾರ್ಯದರ್ಶಿ ಅಬ್ದುಸ್ಸಮದ್, ಹಿರಿಯ ಮುಖಂಡ ಇಸ್ಮಾಯಿಲ್ ಹಾಜಿ ಉಪಸ್ಥಿತರಿದ್ದರು.
ಮದ್ರಸ ಮುಖ್ಯೋಪಾಧ್ಯಾಯರಾದ ಜಮಾಲ್ ಮುಸ್ಲಿಯಾರ್ ಸ್ವಾಗತಿಸಿ, ಕಾರ್ಯಕ್ರಮದ ಕೊನೆಗೆ ಧನ್ಯವಾದಗೈದರು.