ಆ.9: ಪಾರದರ್ಶಕ ತನಿಖೆಗೆ ಒತ್ತಾಯಿಸಿ ಸಭೆ
ಮಂಗಳೂರು, ಆ.7: ವಿದ್ಯಾರ್ಥಿನಿ ಕಾವ್ಯಾ ಪೂಜಾರಿಯ ನಿಗೂಢ ಸಾವು ಪ್ರಕರಣದ ಪಾರದರ್ಶಕ ತನಿಖೆ ಹಾಗೂ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರಕ್ಕೆ ಒತ್ತಾಯಿಸಿ ಜಸ್ಟಿಸ್ ಫಾರ್ ಕಾವ್ಯಾ ಹೋರಾಟ ಸಮಿತಿಯ ವತಿಯಿಂದ ಆ. 9ರಂದು ಪ್ರತಿಭಟನಾ ಸಭೆಯನ್ನು ಆಯೋಜಿಸಲಾಗಿದೆ.
ಕಾವ್ಯಾ ಸಾವಿನ ಕುರಿತು ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಹೋರಾಟ ಸಮಿತಿಯು ಅಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಸಭೆಯನ್ನು ನಡೆಸಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ನ್ಯಾಯವಾದಿ ದಿನಕರ ಶೆಟ್ಟಿ ತಿಳಿಸಿದರು.
ಹಿಂದಿನ ದಿನ ಪೋಷಕರ ಜತೆ ಸಂತಸದಿಂದ ಮಾತನಾಡಿದ, ರಾಷ್ಟ್ರೀಯ ಮಟ್ಟದ ಪ್ರತಿಭಾನ್ವಿತೆ ಕಾವ್ಯಾ ಮರುದಿನ ಸಹಪಾಠಿಗಳ ಜತೆ ಸಂತಸದಿಂದಿದ್ದು, ನಂತರ ಕಾಲೇಜಿನ ಹಾಸ್ಟೆಲ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನಗಳು ನಡೆಯುತ್ತಿವೆ. ಅದಕ್ಕೆ ಅವಕಾಶ ನೀಡದೆ, ಪಾರದರ್ಶಕ ತನಿಖೆಗೆ ಸಮಿತಿ ಒತ್ತಾಯಿಸುತ್ತಿದೆ ಎಂದವರು ಹೇಳಿದರು.
ಪ್ರಸಕ್ತ ತನಿಖೆಯ ಬಗ್ಗೆ ವಿಶ್ವಾಸವಿಲ್ಲ
ಪ್ರಸಕ್ತ ಎಸಿಪಿ ರಾಜೇಂದ್ರರವರ ಮೂಲಕ ಪ್ರಕರಣದ ತನಿಖೆ ನಡೆಯುತ್ತಿದೆ. ಆದರೆ ತನಿಖೆಯ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಲಾಗುತ್ತಿಲ್ಲ. ಇದರಿಂದ ಪ್ರಸಕ್ತ ತನಿಖೆಯ ಬಗ್ಗೆ ವಿಶ್ವಾಸವಿಲ್ಲದಂತಾಗಿದೆ. ಪ್ರಕರಣದ ಆರಂಭಿಕ ಹಂತದಲ್ಲೇ ಹಲವಾರು ರೀತಿಯ ಅನುಮಾನಗಳಿರುವಾಗ, ಹೆತ್ತವರೇ ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಬಲವಾಗಿ ವಾದಿಸುತ್ತಿದ್ದರೂ, ತನಿಖೆಯ ದಾರಿ ತಪ್ಪಿಸುವ ಪ್ರಯತ್ನಗಳೂ ನಡೆಯುತ್ತಿರುವುದು ಬೇಸರದ ಸಂಗತಿ. ಯಾವುದೇ ಕಾರಣಕ್ಕೂ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಇದಕ್ಕೆ ಅವಕಾಶ ನೀಡಬಾದು ಎಂದು ಅವರು ಒತ್ತಾಯಿಸಿದರು.
ಪ್ರತಿಭಾನ್ವಿತೆ ಕಾವ್ಯಾ ಇದೀಗ ಸಮಾಜದ ಮಗಳಾಗಿದ್ದಾಳೆ. ಆಕೆಯ ಹೆತ್ತವರ ಸಂಕಟ ನೋವಿನಲ್ಲಿ ಸಮಾಜ ಜತೆಗಿರುತ್ತದೆ. ರಾಷ್ಟ್ರ ಮಟ್ಟದಲ್ಲಿ ಗುರುತಿಸಿ ಕೊಂಡಿದ್ದ ಪ್ರತಿಭಾನ್ವಿತೆ ಕಾವ್ಯಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಬೇಕಿತ್ತು. ಆದರೆ ಇದೀಗ ಪ್ರಕರಣವನ್ನು ಮುಚ್ಚಿಹಾಕುವ ಜತೆಗೆ ಮಾನಹಾನಿ ಮಾಡುವಂತಹ ಮಟ್ಟಕ್ಕೂ ಪ್ರಯತ್ನ ನಡೆಯುತ್ತಿರುವುದು ದುರದೃಷ್ಟಕರ ಎಂದು ಸಮಿತಿಯ ಅನಿಲ್‌ದಾಸ್ ಬೇಸರಿಸಿದರು.
ಪ್ರಕರಣಕ್ಕೆ ಸಂಬಂಧಿಸಿ ಒಬ್ಬರ ಮೇಲೆ ಕೊಲೆ ಆರೋಪ ಹಾಗೂ ಇತರ ನಾಲ್ವರ ಮೇಲೆ ಸಾಕ್ಷಿ ನಾಶದ ದೂರನ್ನು ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಅಶೋಕ್ ಎಂಬ ವ್ಯಕ್ತಿಯೊಬ್ಬರಿಂದ ಕಾವ್ಯಾ ಹೆತ್ತವರನ್ನು ಬಾಯಿ ಮುಚ್ಚಿಸುವ ಯತ್ನವೂ ನಡೆದಿದೆ. ಕಾವ್ಯಾ ಮೃತದೇಹದ ಮರಣೋತ್ತರ ಪರೀಕ್ಷೆ ಸಂದರ್ಭ ವೀಡಿಯೋ ರೆಕಾರ್ಡಿಂಗ್ ಕೂಡಾ ಮಾಡಿಲ್ಲ. ಆದ್ದರಿಂದ ಈ ಇಬ್ಬರು ವ್ಯಕ್ತಿಗಳ ಜತೆ ದೂರಿನಲ್ಲಿ ತಿಳಿಸಿರುವ ನಾಲ್ಕು ಮಂದಿಯ ಬಗ್ಗೆಯೂ ಕಸ್ಟಡಿ ತನಿಖೆ ನಡೆಸಬೇಕು ಎಂದು ರಾಬರ್ಟ್ ರೊಸಾರಿಯೊ ಆಗ್ರಹಿಸಿದರು.
ಪ್ರಕರಣಕ್ಕೆ ಸಂಬಂಧಿಸಿ ಆಳ್ವಾಸ್ ಸಂಸ್ಥೆಯಿಂದ ಕರ್ತವ್ಯ ಲೋಪವಾಗಿದೆ. ಪ್ರಕರಣದ ಸಮಗ್ರ ತನಿಖೆಯಿಂದ ಮಾತ್ರವೇ ಸತ್ಯಾಂಶ ಹೊರಬರಲು ಸಾಧ್ಯ ಎಂದು ನ್ಯಾಯವಾದಿಯೂ ಆಗಿರುವ, ಸಮಿತಿಯ ಯಶವಂತ ಮರೋಳಿ ಅಭಿಪ್ರಾಯಿಸಿದರು.
ಗೋಷ್ಠಿಯಲ್ಲಿ ರಘುವೀರ್ ಸೂಟರ್‌ಪೇಟೆ, ರಘು ಎಕ್ಕಾರು, ದೀಪಕ್ ಕೋಟ್ಯಾನ್, ಯಶವಂತ ಪೂಜಾರಿ, ಪ್ರಜ್ವಲ್ ಪೂಜಾರಿ, ದೀಪಕ್, ನಿತಿನ್ ಕುತ್ತಾರ್, ಸಂತೋಷ್ ಕುಮಾರ್ ಬಜಾಲ್, ರೋಶನ್ ಹಾಗೂ ಇತರರು ಉಪಸ್ಥಿತರಿದ್ದರು.
ವಿಶೇಷ ತನಿಖಾ ತಂಡಕ್ಕೆ ಒತ್ತಾಯ
ಪ್ರಕರಣದ ಕುರಿತಂತೆ ಪ್ರಸ್ತುತ ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಆದರೆ ತನಿಖೆಯನ್ನು ರಾಜ್ಯದ ನಿಷ್ಠಾವಂತ ಪೊಲೀಸ್ ಅಧಿಕಾರಿಯ ನೇತೃತ್ವದ ವಿಶೇಷ ತನಿಖಾ ತಂಡದ ಮೂಲಕ ನಡೆಸಬೇಕೆಂದು ಈಗಾಗಲೇ ಸರಕಾರದ ಗಮನವನ್ನು ಸೆಳೆಯಲಾಗಿದೆ ಎಂದು ಸುನಿಲ್ ಕುಮಾರ್ ಬಜಾಲ್ ತಿಳಿಸಿದರು.
ಪ್ರಕರಣ ಮುಚ್ಚಿಹಾಕಲು ನೋಡುತ್ತಿರುವುದೇಕೆ: ಕಾವ್ಯಾ ತಾಯಿಯ ಆಕ್ರಂದನ
ನನ್ನ ಮಗಳಿಗೆ ಆದ ಅನ್ಯಾಯ ಯಾವ ಮಗುವಿಗೂ ಆಗಬಾರದು. ನನ್ನ ಮಗಳನ್ನು ಕೊಲೆ ಮಾಡಲಾಗಿದೆ. ಆದರೆ ಪ್ರಕರಣವನ್ನು ಮುಚ್ಚಿಹಾಕಲು ನೋಡುತ್ತಿರುವುದೇಕೆ? ಎಂದು ಕಾವ್ಯಾ ತಾಯಿ ಬೇಬಿ ಗಳಗಳನೆ ಅತ್ತುಬಿಟ್ಟರು.
ಪತ್ರಿಕಾಗೋಷ್ಠಿಯಲ್ಲಿದ್ದವರು ಸಮಾಧಾನಮಾಡಿಕೊಳ್ಳಿ ಎಂದಾಗ, ‘ಹೇಗೆ ಸಮಾಧಾನ ಮಾಡಿಕೊಳ್ಳುವುದು. ನನ್ನ ಮಗಳಿಗೆ ನ್ಯಾಯ ಕೊಡಿಸಿ’ ಎಂದು ಎದೆಬಡಿದುಕೊಳ್ಳುತ್ತಾ ತಮ್ಮ ಸಂಕಟವನ್ನು ವ್ಯಕ್ತಪಡಿಸಿದರು.
ಆಳ್ವಾಸ್ ಸಂಸ್ಥೆಯ ಪರವಾಗಿ ಹಲವಾರು ಕ್ರೀಡೆಗಳಲ್ಲಿ ಭಾಗವಹಿಸಿ ಪ್ರಮಾಣಪತ್ರಗಳನ್ನು ಪಡೆದು ಸಂಸ್ಥೆಗೂ ಹೆಸರು ತಂದಿರುವ ನನ್ನ ಮಗಳನ್ನು ಕ್ರೀಡೆಗೆ ಅನ್‌ಫಿಟ್ ಎಂದಿದ್ದಾರೆ. ಇದೆಂತಹ ಅನ್ಯಾಯ ಎಂದು ಬೇಬಿ ಅಳುತ್ತಾ ಅಸಮಾಧಾನ ವ್ಯಕ್ತಪಡಿಸಿದರು.
ನಂತರ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ಎಸಿಪಿ ನೇತೃತ್ವದ ತನಿಖಾ ವಿಧಾನ ತಮಗೆ ಸಮಾಧಾನ ತಂದಿಲ್ಲ ಎಂದರು.