×
Ad

ಪ್ರೊ.ಡಾ.ಎಂ.ಅಬ್ದುಲ್ ರಹಿಮಾನ್‌ರಿಗೆ ‘ಬೆಸ್ಟ್ ಎಜ್ಯುಕೇಶನಿಸ್ಟ್ ಅವಾರ್ಡ್’

Update: 2017-08-07 18:28 IST

ಮಂಗಳೂರು, ಆ.7: ಮಂಗಳೂರಿನ ಪ್ರೊ.ಡಾ.ಎಂ.ಅಬ್ದುಲ್ ರಹಿಮಾನ್ ಅವರು ಪ್ರತಿಷ್ಠಿತ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಎಜ್ಯುಕೇಶನ್ ಆ್ಯಂಡ್ ಮ್ಯಾನೇಜ್‌ಮೆಂಟ್(ಐಐಇಎಂ) ನೀಡುವ ‘ಬೆಸ್ಟ್ ಎಜ್ಯುಕೇಶನಿಸ್ಟ್ ಅವಾರ್ಡ್ ’ ಹಾಗೂ ‘ಸರ್ಟಿಫಿಕೇಟ್ ಆಫ್ ಎಜ್ಯುಕೇಶನ್ ಎಕ್ಸಲೆನ್ಸ್’ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಐಐಇಎಂ ಆ.5ರಂದು ಹೊಸದಿಲ್ಲಿಯಲ್ಲಿ ಆಯೋಜಿಸಿದ್ದ ‘ಶಿಕ್ಷಣ ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿ’ ಎಂಬ ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ಪ್ರೊ.ಅಬ್ದುಲ್ ರಹಿಮಾನ್ ಅವರು ಈ ಪ್ರಶಸ್ತಿ ಸ್ವೀಕರಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ಪ್ರೊ. ರಹಿಮಾನ್‌ರವರ ಕೊಡುಗೆಯನ್ನು ಗಮನಿಸಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಮಂಗಳೂರಿನ ಕಾಪ್ರಿಗುಡ್ಡೆ ನಿವಾಸಿಯಾಗಿರುವ ಪ್ರೊ.ಅಬ್ದುಲ್ ರಹಿಮಾನ್ ಅವರು ಕೇರಳದ ಕ್ಯಾಲಿಕೆಟ್ ವಿಶ್ವವಿದ್ಯಾನಿಲಯ ಆಯೋಗದ ಮಾಜಿ ಅಧ್ಯಕ್ಷರು, ಕಣ್ಣೂರು ಮತ್ತು ಕ್ಯಾಲಿಕೆಟ್ ವಿಶ್ವವಿದ್ಯಾನಿಲಯದ ಮಾಜಿ ಉಪ ಕುಲಪತಿ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಜೈವಿಕ ವಿಜ್ಞಾನ ಸ್ನಾತಕೋತ್ತರ ವಿಭಾಗದ ಮಾಜಿ ಮುಖ್ಯಸ್ಥರಾಗಿದ್ದಾರೆ.

‘ಪರಿಸರ ವಂಶವಾಹಿ ಟಾಕ್ಸಿಕಾಲಜಿ’ ವಿಭಾಗದಲ್ಲಿ ಪರಿಣತರಾಗಿರುವ ಪ್ರೊ.ಅಬ್ದುಲ್ ರಹಿಮಾನ್ ಅವರು 75ಕ್ಕೂ ಅಧಿಕ ಸಂಶೋಧನಾತ್ಮಕ ಪ್ರಬಂಧ ಗಳನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಮಂಡಿಸಿದ್ದಾರೆ. ಸಂಶೋಧನಾ ಮಾರ್ಗದರ್ಶಿಯಾಗಿ ಗುರುತಿಸಲ್ಪಟ್ಟಿರುವ ಇವರ ಮಾರ್ಗದರ್ಶನದಲ್ಲಿ ಹಲವು ವಿದ್ಯಾರ್ಥಿಗಳು ಪಿಎಚ್‌ಡಿ ಪದವಿಯನ್ನು ಪಡೆದಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದ ಜೈವಿಕ ವಿಜ್ಞಾನಗಳು, ಅನ್ವಯಿಕ ಪ್ರಾಣಿಶಾಸ್ತ್ರ ಮತ್ತು ಅನ್ವಯಿಕ ಸಸ್ಯಶಾಸ್ತ್ರ ಸ್ನಾತಕೋತ್ತರ ವಿಭಾಗಗಳ ಸ್ಥಾಪಕ ಅಧ್ಯಕ್ಷರಾಗಿ, ಜೈವಿಕ ವಿಜ್ಞಾನದಲ್ಲಿ ಪಿಜಿ ಬೋರ್ಡ್ ಆಫ್ ಸ್ಟಡೀಸ್ ಹಾಗೂ ಪ್ರಾಣಿಶಾಸ್ತ್ರದಲ್ಲಿ ಯುಜಿ ಬೋರ್ಡ್ ಆಫ್ ಸ್ಟಡೀಸ್‌ನ ಅಧ್ಯಕ್ಷರಾಗಿ, ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳ ಜೀವ ವಿಜ್ಞಾನಗಳ ಬೋರ್ಡ್ ಆಫ್ ಸ್ಟಡೀಸ್‌ನ ಸದಸ್ಯರು ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹಲವಾರು ಉನ್ನತ ಹುದ್ದೆಗಳು ಹಾಗೂ ಜವಾಬ್ಧಾರಿಗಳನ್ನು ಪ್ರೊ. ಅಬ್ದುಲ್ ರಹಿಮಾನ್ ನಿರ್ವಹಿಸಿದ್ದಾರೆ. ಜತೆಗೆ ಹಲವು ಪ್ರತಿಷ್ಠಿತ ಗೌರವ ಹಾಗೂ ಪ್ರಶಸ್ತಿಗಳನ್ನು ಇವರು ಪಡೆದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News